Sports

ಆರ್‌. ಅಶ್ವಿನ್‌ ಮೇಲೆ ಒತ್ತಡ ಹೇರುವುದು ನಮ್ಮ ಯೋಜನೆಯಾಗಿತ್ತು: ರೋಹಿತ್‌ ಶರ್ಮಾ

ದುಬೈ, ನ 11- ಮಂಗಳವಾರ ರಾತ್ರಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಐದು ವಿಕೆಟ್‌ಗಳಿಂದ ಮಣಿಸುವ ಮೂಲಕ ರೋಹಿತ‌ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಐದನೇ ಬಾರಿ ಐಪಿಎಲ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.

ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ಐಪಿಎಲ್‌ ಇತಿಹಾಸದಲ್ಲಿಯೇ ಅತಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದ ತಂಡವೆಂಬ ಸಾಧನೆಯನ್ನು ಮಾಡಿತು. ಅಲ್ಲದೆ, ಚೆನ್ನೈ ಸೂಪರ್‌ ಕಿಂಗ್ಸ್ ಬಳಿಕ ಐಪಿಎಲ್‌ ಟ್ರೊಫಿಯನ್ನು ಉಳಿಸಿಕೊಂಡ ಎರಡನೇ ತಂಡ ಎಂಬ ಕೀರ್ತಿಗೆ ಮುಂಬೈ ಇಂಡಿಯನ್ಸ್ ಭಾಜನವಾಯಿತು.

ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ‌ ಶರ್ಮಾ, “ರವಿಚಂದ್ರನ್‌ ಅಶ್ವಿನ್ ಡೆಲ್ಲಿ ಕ್ಯಾಪಿಟಲ್ಸ್ ಪರ ಕೀ ಬೌಲರ್ ಹಾಗೂ ಗುಣಮಟ್ಟದ ಸ್ಪಿನ್ನರ್‌ ಎಂಬುದು ಗೊತ್ತಿತ್ತು. ಹಾಗಾಗಿ ಅವರ ಮೇಲೆ ಒತ್ತಡ ಹಾಕಬೇಕೆಂಬ ಯೋಜನೆ ರೂಪಿಸಲಾಗಿತ್ತು. ಅದರಂತೆ ಪಂದ್ಯದಲ್ಲಿ ನಮ್ಮ ಯೋಜನೆ ಸಕಾರವಾಯಿತು,” ಎಂದು ಹೇಳಿದರು.

ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪ್ರಶಸ್ತಿ ಗೆಲುವಿನಲ್ಲಿ ಸೂರ್ಯಕುಮಾರ‌ ಯಾದವ‌ ಹಾಗೂ ಇಶಾನ್‌ ಕಿಶಾನ್‌ ಅವರ ಪಾತ್ರ ಮಹತ್ತರವಾಗಿದೆ. ಟೂರ್ನಿಯುದ್ದಕ್ಕೂ ಅಗತ್ಯ ಸಂದರ್ಭಗಳಲ್ಲಿ ಬ್ಯಾಟಿಂಗ್‌ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಸೂರ್ಯಕುಮಾರ‌ ಯಾದವ‌ 480 ರನ್‌ಗಳನ್ನು ಕಲೆ ಹಾಕಿದ್ದರೆ, ಇಶಾನ್‌ ಕಿಶಾನ್‌ 516 ರನ್‌ಗಳನ್ನು ಗಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ರೋಹಿತ್‌, ” ಸೂರ್ಯಕುಮಾರ‌ ಯಾದವ‌ ಹಾಗೂ ಇಶಾನ್‌ ಕಿಶಾನ್‌ ಟೂರ್ನಿಯಲ್ಲಿ ಅದ್ಭುತವಾಗಿ ಬ್ಯಾಟಿಂಗ್‌ ಮಾಡಿದ್ದಾರೆ. ಈ ಇಬ್ಬರೂ ಸ್ವತಂತ್ರವಾಗಿ ಆಡಿದ್ದಾರೆ ಹಾಗೂ ದೊಡ್ಡ ಹೊಡೆತಗಳನ್ನು ಹೊಡೆಯುವುದರಲ್ಲಿ ತುಂಬಾ ಪ್ರತಿಭೆಯನ್ನು ಹೊಂದಿದ್ದಾರೆ. ತಂಡದ ಪ್ರತಿಯೊಬ್ಬರಿಗೂ ಸ್ವತಂತ್ರ ನೀಡುವುದು ತುಂಬಾ ಮುಖ್ಯ. ಫ್ರಾಂಚೈಸಿ ಮಾಲೀಕರು ಸೇರಿದಂತೆ ಟೀಮ್‌ ಮ್ಯಾನೇಜ್‌ಮೆಂಟ್‌ ಕೂಡ ನಮ್ಮ ಮೇಲೆ ಅಪಾರವಾದ ನಂಬಿಕೆಯನ್ನು ಇಟ್ಟಿದ್ದಾರೆ,” ಎಂದು ರೋಹಿತ‌ ಶರ್ಮಾ ಹೇಳಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!