Patna

ನಿತೀಶ ಕುಮಾರ ಮುಖ್ಯಮಂತ್ರಿ : ಬಿಜೆಪಿ ಸ್ಪಷ್ಟನೆ

ಪಾಟ್ನಾ, ನ 11- ಬಿಹಾರ ಮುಖ್ಯಮಂತ್ರಿಯಾಗಿ ಜೆಡಿ(ಯು)ನಾಯಕ ನಿತೀಶ ಕುಮಾರ ಮತ್ತೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.

ಮುಖ್ಯಮಂತ್ರಿ ವಿಷಯದಲ್ಲಿ ಯಾವುದೇ ಸಂದಿಗ್ಧತೆಗೆ ಅವಕಾಶವಿಲ್ಲ, ನಿತೀಶ ಅವರ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ ಎಂದು ಹೇಳಿದೆ.
ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶದಲ್ಲಿ ಜೆಡಿ(ಯು) ಮೂರನೇ ಸ್ಥಾನಕ್ಕೆ ಕುಸಿದಿರುವುದರಿಂದ ನಿತೀಶ್ ಕುಮಾರ್ ರಾಜಕೀಯ ಭವಿಷ್ಯದ ಮೇಲೆ ಕಾರ್ಮೋಡ ಕವಿದಂತಾಗಿದೆ ಎಂದು ವಿಶ್ಲೇಷಿಸಲಾಗಿತ್ತು.

ಕಳೆದ ಎರಡು ದಶಕಗಳಲ್ಲಿ ಮೊದಲ ಬಾರಿಗೆ ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದೆ. ಈ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಸಲು ಬಿಜೆಪಿ ಒಪ್ಪುತ್ತದೆಯೇ.. ಇಲ್ಲವೇ ಎಂಬ ಅನುಮಾನ ಮೂಡಿತ್ತು. ಆದರೆ, ಈ ಬಗ್ಗೆ ಬಿಹಾರ ಉಪ ಮುಖ್ಯಮಂತ್ರಿ, ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಪ್ರತಿಕ್ರಿಯಿಸಿದ್ದು, ನಿತೀಶ್ ಕುಮಾರ್ ಬಿಹಾರ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

“ಚುನಾವಣೆಗೆ ಮುನ್ನ ಬಿಜೆಪಿ ನೀಡಿದ್ದ ಮಾತಿಗೆ ನಾವು ಕಟಿಬದ್ದವಾಗಿದ್ದೇವೆ. ಮುಖ್ಯಮಂತ್ರಿ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ. ನಿತೀಶ ಕುಮಾರ ಅವರ ಸಾರಥ್ಯದಲ್ಲಿಯೇ ಸರ್ಕಾರ ರಚನೆಯಾಗಲಿದೆ. ಅವರ ಸ್ಥಾನವನ್ನು ಯಾರೂ ಭರ್ತಿ ಮಾಡಲು ಸಾಧ್ಯವಿಲ್ಲ. ಚುನಾವಣೆಯಲ್ಲಿ ಒಬ್ಬರಿಗೆ ಹೆಚ್ಚು ಸ್ಥಾನ ಲಭಿಸಲಿವೆ.. ಮತ್ತೊಬ್ಬರಿಗೆ ಕಡಿಮೆ ಸ್ಥಾನ ಸಿಗಲಿದೆ ಆದರೆ ಮೈತ್ರಿಕೂಟದಲ್ಲಿ ನಾವು ಸಮಾನ ಪಾಲುದಾರರು ”ಎಂದು ಮೋದಿ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಎನ್‌ಡಿಎ ಮೈತ್ರಿಕೂಟದ ಮೇಲೆ ವಿಶ್ವಾಸ ತೋರಿಸಿದ ಬಿಹಾರ ಮತದಾರರಿಗೆ ಸುಶೀಲ ಮೋದಿ ಧನ್ಯವಾದ ಸಲ್ಲಿಸಿದ್ದಾರೆ. ಸುಶೀಲ್ ಕುಮಾರ್ ಮೋದಿ ಅವರ ಹೇಳಿಕೆ ಬಿಹಾರದಲ್ಲಿ ಸರ್ಕಾರ ರಚನೆ ಕುರಿತ ಉಂಟಾಗಿದ್ದ ಗೊಂದಲ ಬಗೆಹರಿದಂತಾಗಿದೆ.

Leave a Reply

Your email address will not be published. Required fields are marked *

Back to top button
error: Content is protected !!