Bengaluru

ಅಕ್ರಮ ಹಣ,ಆಡಳಿತ ಯಂತ್ರದ ದುರುಪಯೋಗಕ್ಕೆ ಸಿಕ್ಕ ಗೆಲುವು : ಸಿದ್ದರಾಮಯ್ಯ

ಬೆಂಗಳೂರು,ನ 10- ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರದ ಸೋಲನ್ನು ನಾವು ವಿನೀತರಾಗಿ ಒಪ್ಪಿಕೊಂಡಿದ್ದೇವೆ. ಆದರೆ ಇದು ಪ್ರಜಾಪ್ರಭುತ್ವದ ಸೋಲು.ಅಕ್ರಮ ಗಳಿಕೆಯ ಹಣ ಮತ್ತು ಆಡಳಿತ ಯಂತ್ರದ ದುರುಪಯೋಗಕ್ಕೆ ಸಿಕ್ಕಿರುವ ಗೆಲುವು ಎನ್ನುವುದು ವಿಷಾದದ ಸಂಗತಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಉಪ ಚುನಾವಣೆ ಫಲಿತಾಂಶದ ಬಗ್ಗೆ ಟ್ವೀಟ್ ಮಾಡಿರುವ ಅವರು, ಸಾಮಾನ್ಯವಾಗಿ ಉಪಚುನಾವಣೆಗಳಲ್ಲಿ ಅಧಿ ಕಾರರೂಢ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆ. ಆಡಳಿತ ಪಕ್ಷದ ಶಾಸಕರಿದ್ದರೆ ತಮ್ಮ ಕ್ಷೇತ್ರಕ್ಕೆ ಅನುಕೂಲವಾಗು ತ್ತದೆ ಎಂಬ ಅಭಿಪ್ರಾಯ ಜನರಲ್ಲಿರುತ್ತದೆ. ಇದೇ ಫಲಿತಾಂಶ ಸಾಮಾನ್ಯ ಚುನಾವಣೆಯಲ್ಲಿ ನಿರೀಕ್ಷಿಸಲಾಗದು ಎಂದು ತಿರುಗೇಟು ನೀಡಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾದೇಶವನ್ನು ಸ್ವೀಕರಿಸಲೇಬೇಕು.ನಾವೂ ಒಪ್ಪಿಕೊಂಡಿದ್ದೇವೆ. ಇದರಿಂದ ಪಕ್ಷ ದ ಕಾರ್ಯಕರ್ತರು ಕಂಗೆಡಬೇಕಾಗಿಲ್ಲ. ಇದರಿಂದ ಯಾವ ಪಕ್ಷವೂ ಬಲಶಾಲಿಯಾಗುವುದಿಲ್ಲ, ಯಾವ ಪಕ್ಷವೂ ಬಲಹೀನವಾಗುವುದಿಲ್ಲ. ಇದು ಸಮಗ್ರ ರಾಜ್ಯದ ಜನಾಭಿಪ್ರಾಯ ಅಲ್ಲ,ಇದು ಎರಡು ಸ್ಥಾನಗಳಿಗೆ ನಡೆದ ಚುನಾವಣೆ ಮಾತ್ರ. ನಾನು ಮುಖ್ಯಮಂತ್ರಿಯಾಗಿದ್ದಾಗ ಜನರಿಗೆ ಒಳ್ಳೆಯದಾಗಲಿ, ನಮ್ಮ ಶಾಸಕನೂ ರಾಜಕೀಯವಾಗಿ ಜನಪ್ರಿಯನಾಗಲಿ ಎಂದು ಆರ್.ಆರ್.ನಗರಕ್ಕೆ ಸುಮಾರು ರೂ.2000 ಕೋಟಿ ಕಾಮಗಾರಿಯನ್ನು ಮಂಜೂರು ಮಾಡಿದ್ದೆ. ಅದರ ಫಲ ನಮ್ಮ ಪಕ್ಷಕ್ಕೆ ಸಿಗಲಿಲ್ಲ, ಅವರಿಗೆ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.

ಮುನಿರತ್ನ ಅವರು ಪಕ್ಷಾಂತರ ಮಾಡಿದ ದಿನದಿಂದ ಚುನಾವಣಾ ತಯಾರಿ ಪ್ರಾರಂಭಿಸಿದ್ದರು. ನಾವು ನಮ್ಮ ಅಭ್ಯರ್ಥಿಯ ಆಯ್ಕೆಯನ್ನು ಸ್ವಲ್ಪ ತಡವಾಗಿ ಮಾಡಿದೆವು.ಇದರಿಂದಾಗಿ ಪ್ರಚಾರ ವಿಳಂಬವಾಗಿ ಪ್ರಾರಂಭಿಸಬೇ ಕಾಯಿತು. ಸೋಲಿಗೆ ಇದೂ ಒಂದು ಕಾರಣ ಇರಬಹುದು. ಶಿರಾದಲ್ಲಿ ಟಿ.ಬಿ.ಜಯಚಂದ್ರ ಜನತೆಯ ಬದುಕು ಉಳಿಸುವ ನದಿನೀರು ಹರಿಸಿದ್ದರು. ಬಿಜೆಪಿಯವರು ಬಂದು ಅಕ್ರಮವಾಗಿ ಸಂಪಾದಿಸಿದ್ದ ಹಣದ ಹೊಳೆ ಹರಿಸಿದ್ದರು. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾದ ಬೆಳವಣಿಗೆ. ಜನರ ಸೇವೆ ಮಾಡಿದವರ ನ್ನು ಜನ ಪ್ರಾಮಾಣಿಕವಾಗಿ ಗುರುತಿಸಿ ಹರಸಬೇಕು ಎಂದು ಅವರು ಜನರಿಗೆ ಮನವರಿಕೆ ಮಾಡಿದ್ದಾರೆ.

ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಹೀನಾಯವಾಗಿ ಸೋತಿರುವುದರಿಂದ ಆ ಪಕ್ಷದ ಮತಗಳು ಬಿಜೆಪಿ ಬುಟ್ಟಿಗೆ ಬಿದ್ದು ಅವರ ಗೆಲುವಿಗೆ ನೆರವಾಯಿತು. ಮುಖ್ಯವಾಗಿ ಶಿರಾದಲ್ಲಿ ಜೆಡಿಎಸ್ ತನ್ನ ಮತಗಳನ್ನಾದರೂ ಉಳಿಸಿ ಕೊಂಡಿದ್ದರೆ ಖಂಡಿತ ಬಿಜೆಪಿ ಇಷ್ಟು ಸುಲಭದಲ್ಲಿ ಗೆಲ್ಲುತ್ತಿರಲಿಲ್ಲ ಎಂದು ಪರೋಕ್ಷವಾಗಿ ಶಿರಾ ಚುನಾವಣೆ ಸೋಲಿಗೆ ಜೆಡಿಎಸ್ ಕಾರಣವೆಂದು ಪರೋಕ್ಷವಾಗಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!