Bengaluru

ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಮತಎಣಿಕೆ; ಸಕಲ ಸಿದ್ಧತೆ

ಬೆಂಗಳೂರು, ನ 9 – ರಾಜ್ಯ ವಿಧಾನಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರ ಮತ್ತು ರಾಜ್ಯ ಆಗ್ನೇಯ ಪದವೀಧರರ ಕ್ಷೇತ್ರಗಳಲ್ಲಿ ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ಸ್ಪರ್ಧಿಸಿದ ಸ್ಪರ್ಧಿಗಳ ಭವಿಷ್ಯ ಮಂಗಳವಾರ ನಿರ್ಧಾರವಾಗಲಿದೆ.

ಮಂಗಳವಾರ ಮತ ಎಣಿಕೆ ನಡೆಯಲಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಅ.28ರಂದು ಆಗ್ನೇಯ ಪದವೀಧರ ಕ್ಷೇತ್ರಗಳಾದ ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಮತದಾನ ನಡೆದಿದ್ದು, ಶೇ.74.97ರಷ್ಟು ಮತದಾನ ದಾಖಲಾಗಿದೆ.

ಬೆಂಗಳೂರು ಶಿಕ್ಷಕರ ಕ್ಷೇತ್ರಗಳಾಗದ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ ಕ್ಷೇತ್ರಗಳಲ್ಲಿ ಶೇ.66.18ರಷ್ಟು ಮತದಾನ ದಾಖಲಾಗಿದೆ.

ಈ ಚುನಾವಣೆಗಳಲ್ಲಿ ಪುಟ್ಟಣ್ಣ, ಎ.ಪಿ.ರಂಗನಾಥ್‌, ಪೀಟರ್‌ ಪ್ರವೀಣ್‌ ಸೇರಿದಂತೆ ಹಲವು ಪ್ರಮುಖ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈ ಮತಗಳ ಎಣಿಕೆ ನ.10ರಂದು ಬೆಂಗಳೂರಿನ ಡಾ.ಬಿ.ಆರ್‌.ಅಂಬೇಡ್ಕರ್‌ ವೀಧಿಯ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆಯಲಿದೆ.

ಜೊತೆಗೆ,ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯ, ಗುಲ್ಬರ್ಗಾ ವಿಶ್ವವಿದ್ಯಾನಿಲಯದ ಗಣಿತ ವಿಭಾಗಗಳಲ್ಲಿ ಕೂಡ ಮತ ಎಣಿಕೆ ನಡೆಯಲಿದೆ. ಇದಕ್ಕಾಗಿ ಭಾರತೀಯ ಚುನಾವಣಾ ಆಯೋಗದ ಅನುಮತಿಯನ್ನು ಕೂಡ ಪಡೆಯಲಾಗಿದೆ. ಮತಗಳ ಎಣಿಕೆಗಾಗಿ ಕೇಂದ್ರಗಳಲ್ಲಿ ಪ್ರತ್ಯೇಕ ಮೇಜುಗಳನ್ನು ಅಳವಡಿಸಲಾಗಿದ್ದು, ಪ್ರತಿ ಮೇಜಿಗೆ ಒಬ್ಬರು ಮೇಲ್ವಿಚಾರಕರು ಮತ್ತು ಇಬ್ಬರು ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ.

ಮತ ಪೆಟ್ಟಿಗೆ ಸಂಗ್ರಹಿಸಿರುವ ಕೊಠಡಿಗೆ ಬಿಗಿ ಭದ್ರತೆ ಒದಗಿಸಲಾಗಿದ್ದು, ಮತ ಎಣಿಕೆ ದಿನದಂದು ಕೂಡ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ಕಣ್ಗಾವಲಿಗಾಗಿ ನಿಯೋಜಿಸಲಾಗಿದೆ.

ಮತ ಎಣಿಕೆ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಗುರುತಿನ ಚೀಟಿ ನೀಡಲಾಗಿದ್ದು, ಕೇಂದ್ರ ಪ್ರವೇಶಿಸಲು ಇದು ಕಡ್ಡಾಯವಾಗಿದೆ. ಪ್ರತಿಯೊಬ್ಬರೂ ಕೋವಿಡ್‌ ಮಾರ್ಗಸೂಚಿಯಂತೆ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ. ಮತ ಎಣಿಕೆ ಕೇಂದ್ರದೊಳಗೆ ಯಾರಿಗೂ ಮೊಬೈಲ್‌ ಫೋನ್‌ ಕೊಂಡೊಯ್ಯಲು ಅಕವಾಶ ಕಲ್ಪಿಸಲಾಗಿಲ್ಲ.

ಮತ ಎಣಿಕೆ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಸಂಪೂರ್ಣ ಮತ ಎಣಿಕೆ ಕಾರ್ಯವನ್ನು ವಿಡಿಯೋಗ್ರಫಿ ಮಾಡಲಾಗುವುದು.

ಇಲ್ಲಿಯವರೆಗೆ ಮತದಾರರ ಸಹಾಯವಾಣಿಗೆ 541 ಕರೆಗಳು ಬಂದಿದ್ದು, 4 ದೂರುಗಳನ್ನು ದಾಖಲಿಸಿಕೊಳ್ಳಲಾಗಿದೆ. 24 ಕರೆಗಳು ಇಮೇಲ್‌ ಮೂಲಕ, 2 ವೃತ್ತಪತ್ರಿಕೆಗಳಿಂದ, ಟಿವಿ ವಾಹಿನಿಗಳಿಂದ 1, ಸಾಮಾಜಿಕ ಜಾಲತಾಣಗಳಿಂದ 1 ಸೇರಿ ಒಟ್ಟು 28 ದೂರುಗಳನ್ನು ಸ್ವೀಕರಿಸಲಾಗಿದ್ದು, ಇತ್ಯರ್ಥಪಡಿಸಲಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!