Bengaluru

ಪಟಾಕಿ ನಿಷೇಧ ಕುರಿತು ಮುಖ್ಯಮಂತ್ರಿ ಜೊತೆ ಚರ್ಚಿಸಿ ತೀರ್ಮಾನ; ಕೆ.ಸುಧಾಕರ

ಬೆಂಗಳೂರು, ನ.5- ಈ ಬಾರಿಯ ದೀಪಾವಳಿ ಹಬ್ಬಕ್ಕೆ ಪಟಾಕಿ ನಿಷೇಧ ಮಾಡುವ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ದೀಪ ಹಚ್ಚುವ ಮೂಲಕ ಹಬ್ಬ ಆಚರಣೆ ಮಾಡಬೇಕು. ಪಟಾಕಿಯಿಂದ ಶ್ವಾಸಕೋಶದ ಸಮಸ್ಯೆ ಸೃಷ್ಟಿಯಾಗುತ್ತದೆ. ಈ ಕಾರಣದಿಂದ‌ ತಜ್ಞರು ಪಟಾಕಿ ಬೇಡ ಎಂದಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದೆಂದರು.

ಮೊದಲ ಬಾರಿ ಸೋಂಕಿತರಾಗಿ ರೋಗ ಲಕ್ಷಣ ಇದ್ದು ವಾಸಿಯಾದವರಿಗೆ ಎರಡನೇ ಬಾರಿ ಕೋವಿಡ್ ಬಂದರೆ ಏನೂ ಸಮಸ್ಯೆಯಾಗುವುದಿಲ್ಲ. ಅಂತಹ ಸೋಂಕಿತರು ಬೇಗ ಗುಣಮುಖರಾಗುತ್ತಾರೆ. ಮೊದಲ ಬಾರಿ ಸೋಂಕಿತರಾಗಿ ರೋಗಲಕ್ಷಣಗಳು ಇಲ್ಲದೇ ವಾಸಿಯಾದವರು ಎರಡನೇ ಬಾರಿ ಕೋವಿಡ್ ಬಂದರೆ ತೀವ್ರವಾಗಿ ಬಾಧಿಸುತ್ತದೆ. ತೀವ್ರ ಸ್ವರೂಪದ ಆರೋಗ್ಯ ಸಮಸ್ಯೆಗಳಾಗುತ್ತವೆ. ಹೀಗಾಗಿ ಒಮ್ಮೆ ಬಂದು ಹೋಗಿದ್ದವರು ಕೂಡ ಎಚ್ಚರದಿಂದ ಇರಬೇಕು ಎಂದು ಹೇಳಿದರು.

ಕೊರೋನಾ ಸೋಂಕು ಇನ್ನೂ ಇರುವುದರಿಂದ ಗ್ರಾಮ ಪಂಚಾಯತಿ ಚುನಾವಣೆ ಸದ್ಯಕ್ಕೆ ಬೇಡ ಎಂಬುದು ತಜ್ಞರ‌ ಅಭಿಪ್ರಾಯವಾಗಿದೆ. ಇದರಿಂದ ಮನೆಮನೆಗೆ ಕೋವಿಡ್ ತಲುಪಿಸಿದಂತೆ ಆಗುತ್ತದೆ. ಫೆಬ್ರವರಿವರೆಗೆ ಚುನಾವಣೆ ಮುಂದೂಡುವುದು ಒಳಿತು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.

 

Related Articles

Leave a Reply

Your email address will not be published. Required fields are marked *

Back to top button
error: Content is protected !!