Entertainment

ಪಳನಿ ಸೇನಾಪತಿಯ ‘ಪಲ್ಸ್ ರೆಕಾರ್ಡಿಂಗ್ ಸ್ಟುಡಿಯೋ’ಗೆ ಹಂಸಲೇಖ ಚಾಲನೆ

ಬೆಂಗಳೂರು, ನ 05- ಚಂದನವನದ ಸಾವಿರಕ್ಕೂ ಹೆಚ್ಚು ಚಿತ್ರಗಳಿಗೆ ‘ಹಿನ್ನೆಲೆ ಶಬ್ದ’ ಒದಗಿಸಿರುವ ಪಳನಿ ಸೇನಾಪತಿಯವರ ನೂತನ ‘ಪಲ್ಸ್ ರೆಕಾರ್ಡಿಂಗ್ ಸ್ಟುಡಿಯೋ’ಗೆ ಖ್ಯಾತ ಸಂಗೀತ ನಿದೇ೯ಶಕ ಹಂಸಲೇಖಾ ಚಾಲನೆ ನೀಡಿದ್ದಾರೆ.

ತಮ್ಮ ಶಿಷ್ಯ ಹಾಗೂ ಬಲಗೈ ಬಂಟನಂತಿರುವ ಪಳನಿ ಸೇನಾಪತಿಯವರ ಸ್ಟುಡಿಯೋ ಉದ್ಘಾಟಿಸಿದ ಹಂಸಲೇಖ, ಶಿಷ್ಯನ ಸಾಧನೆಯನ್ನು ಕೊಂಡಾಡುತ್ತಾ, ಹೋಲ್ಡ್ ದಿ ಪಲ್ಸ್, ಲಿಸನ್ ದಿ ಮ್ಯೂಸಿಕ್. ಸೌಂಡ್ ಆಫ್ ಮ್ಯೂಸಿಕ್ ಇದೆ. ಸೌಂಡ್ ಆಫ್ ರುಪಿ ಬೇಕು. ಕನ್ನಡ ಚಿತ್ರರಂಗಕ್ಕೆ ಮಾರ್ಕೆಟ್ ಮಾಡುವ ಜಾಣತನ ಬೇಕಾಗಿದೆ. ನಮ್ಮ ಸಿನಿಮಾಗಳನ್ನು ಹೇಗೆ ಮಾರ್ಕೆಟ್ ಮಾಡಿಸಬೇಕು. ಇವತ್ತು ಉತ್ಪಾದನೆ ಇಷ್ಟು. ಮಾರಾಟ ಆಗುವ ಜಾಗಗಳು ಅಷ್ಟು. ಹುಷಾರಾಗಿ ಮಾರಾಟ ಮಾಡಿ ದುಡ್ಡು ವಾಪಸ್ಸು ತೆಗೆದುಕೊಳ್ಳಬೇಕಿದೆ ಎಂದರು.

ಎಂತೆಂಥ ಉಪಕರಣಗಳು ಬಂದಿದೆ. ಅವೆಲ್ಲಾ ಈಗ ಕೆಲಸ ಮಾಡ್ತಾ ಇದೆ ಅಂತ ಹೇಳೋಕೆ ಆಗೋಲ್ಲ. ಟೂಲ್ಸ್ ಅಂಡ್ ಪಲ್ಸ್ ಉತ್ತಮವಾಗಿದೆ. ಅಂಥಾ ಪಲ್ಸ್ ಪಳನಿಗೆ ಒಳ್ಳೆಯದಾಗಲಿ. ಗುಣಮಟ್ಟ ಕಾಪಾಡಿಕೊಳ್ಳೋದು ತಂತ್ರಜ್ಞನ ಕೆಲಸ. ಅದನ್ನು ಕಾಪಾಡಿಕೊಂಡರೆ ಹೆಸರು ಉಳಿಯುತ್ತದೆಂದು ಕಿವಿಮಾತು ಹೇಳಿದರು.

ನಂತರ ಮಾತನಾಡಿದ ಪಳನಿ ಸೇನಾಪತಿ, ಇಲ್ಲಿಯವರೆಗೂ ಒಂದು ಸಾವಿರಕ್ಕೂ ಹೆಚ್ಚು ಚಿತ್ರಗಳಿಗೆ ಹಿನ್ನೆಲೆ ಶಬ್ದ ಒದಗಿಸಿ, ಇಂದು ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದೇನೆ. ತಂತ್ರಜ್ಘಾನ ಮುಂದುವರಿದಂತೆ ಎಲ್ಲವೂ ಸಾಫ್ಟ್‌ವೇರ್ ಆಗಿರುವುದರಿಂದ ದೊಡ್ಡ ಜಾಗದಲ್ಲಿ ಸ್ಟುಡಿಯೋ ಮಾಡಬೇಕಾಗಿಲ್ಲ. ಚಿಕ್ಕ ಸ್ಥಳದಲ್ಲೆ ದೊಡ್ಡ ಕೆಲಸವನ್ನು ಮಾಡಬಹುದು. ಅಂತಹುದೇ ಸೇವೆಯನ್ನು ಶುರು ಮಾಡಲಾಗಿದೆ. ಹಂಸಲೇಖಾ ನನಗೆ ಗಾಡ್‌ಫಾದರ್. ಕರ್ನಾಟಕದ ತಂತ್ರಜ್ಞರು ಯಾವ ರೀತಿಯಲ್ಲೂ ಕಡಿಮೆ ಇಲ್ಲ. ಮನಸ್ಸು ಮಾಡಿದರೆ ವಂಡರ್ಸ್ ಮಾಡಬಹುದು. ಆದರೆ ಆರ್ಥಿಕ ಪರಿಸ್ಥಿತಿಯಿಂದ ಅಂದುಕೊಂಡಂತೆ ಕೆಲಸಗಳು ಆಗುತ್ತಿಲ್ಲ. ಸರ್ಕಾರವು ದೊಡ್ಡದಾದ ಸ್ಟುಡಿಯೋ ತೆರೆಯಲು ಬಂಡವಾಳ ಹೂಡಿದರೆ, ನಾವುಗಳು ಏನೆಂದು ತೋರಿಸಬಹುದು. ಬೇರೆ ಕಡೆ ಹೋದಾಗ ಕರ್ನಾಟಕದವರು ಎಂದು ತಾತ್ಸಾರ ಮಾಡುತ್ತಾರೆ ಎಂದರು.

ನಮ್ಮಲ್ಲೂ ನುರಿತ ಟೆಕ್ನಿಷಿಯನ್ಸ್ ಇದ್ದಾರೆ. ನಮ್ಮ ಪ್ರತಿಭೆಗೆ ಫಲ ಸಿಗಬೇಕೆಂಬುದೇ ನನ್ನ ಹೋರಾಟವಾಗಿದೆ. ಮೂಲೆ ಗುಂಪಾಗಿರುವ ವಾದ್ಯಗಳನ್ನು ಮುಖ್ಯ ವೇದಿಕೆಗೆ ತರೆಬೇಕೆಂಬ ತುಡಿತವಿದೆ ಎಂದು ಮನದಾಳದ ಕನಸುಗಳನ್ನು ಮಾಧ್ಯಮದ ಮುಂದೆ ಪಳನಿ ಹೊರಗೆ ಹಾಕಿದರು.

ಹಿರಿಯ ನಿರ್ದೇಶಕ ಭಗವಾನ್, ಲಹರಿವೇಲು, ವಿ.ಮನೋಹರ್, ನಟ ವಿಜಯ ‌ಮಹೇಶ, ನಿರ್ಮಾಪಕರುಗಳು ಶುಭಸಂದರ್ಭದಲ್ಲಿ ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!