Bengaluru

ಯಡಿಯೂರಪ್ಪ ಬದಲಾವಣೆ ಹೇಳಿಕೆ ಹಾಸ್ಯಾಸ್ಪದ – ರೇಣುಕಾಚಾರ್ಯ

ಬೆಂಗಳೂರು, ನ 5- ದಕ್ಷಿಣ ಭಾರತದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದವರು ಯಡಿಯೂರಪ್ಪ. ಅವರೇ ಮುಖ್ಯಮಂತ್ರಿಯಾಗಿ ಈ ಅವಧಿ ಪೂರ್ಣಗೊಳಿಸುತ್ತಾರೆ ಎಂದು ಬಿಜೆಪಿ ವರಿಷ್ಠರೇ ಹೇಳಿದ್ದಾರೆ. ಹೀಗಿರುವಾಗ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೇಣುಕಾಚಾರ್ಯ, ಕಾಂಗ್ರೆಸ್ ನಲ್ಲಿ ಪವರ್ ಸೆಂಟರ್ ಜಾಸ್ತಿ ಆಗಿವೆ. ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ ಸಿಎಂ ಆಗಲು ಪ್ರಯತ್ನ ನಡೆಸಿದ್ದಾರೆ. ನೀವು ಯಡಿಯೂರಪ್ಪ ಮೋದಿಯವರನ್ನು ಬೈದರೆ ಮತ್ತೆ ಮುಖ್ಯಮಂತ್ರಿ ಆಗುತ್ತೇನೆ ಎನ್ನುವ ಭ್ರಮೆ ಅವರಿಗೆ ಸಿದ್ದರಾಮಯ್ಯ ಅವರಿಗೆ ಇದ್ದಂತೆ ಇದೆ. ಇದೀಗ ಪ್ರತಿಪಕ್ಷದ ಸ್ಥಾನ ಕಾಯ್ದುಕೊಳ್ಳಲು ಯಡಿಯೂರಪ್ಪ ಮೋದಿ ವಿರುದ್ಧ ಮಾತನಾಡುತ್ತಿದ್ದಾರೆ ಎಂದರು.

ಲಿಂಗಾಯತ ಸಮನ್ವಯ ಸಮಿತಿ ಸಭೆಯಲ್ಲಿ ಯಡಿಯೂರಪ್ಪ ಅವರು ಬದಲಾದರೆ ಲಿಂಗಾಯತರನ್ನೇ ಸಿಎಂ ಮಾಡಬೇಕು ಎಂದು ಹೇಳಲು ನಿಮಗೆ ಅಧಿಕಾರ ಕೊಟ್ಟಿರುವುದು ಯಾರು. ಬಿಜೆಪಿಯಲ್ಲಿ ಒಂದು ವ್ಯವಸ್ಥೆ ಇದೆ. ಬಿಜೆಪಿ ನಾಯಕತ್ವ ತೀರ್ಮಾನ ಮಾಡಲು ನೀವ್ಯಾರು. ಈ ರೀತಿ ಹೇಳಿಕೆ ನೀಡಿ ಸಮಾಜದಲ್ಲಿ ಗೊಂದಲ ಮೂಡಿಸುವ ಕೆಲಸ.ಮಾಡಬೇಡಿ. ಯಡಿಯೂರಪ್ಪ ಜಾತ್ಯಾತೀತ ನಾಯಕ, ಯಡಿಯೂರಪ್ಪ ಕೇವಲ ವೀರಶೈವ ಲಿಂಗಾಯತರಿಂದ ಆಯ್ಕೆಯಾಗಿಲ್ಲ. ಎಲ್ಲ ಸಮುದಾಯದವರು ಅವರನ್ನು ಬೆಂಬಲಿಸಿದ್ದಾರೆ. ಎಂದರು.

ಬಸನಗೌಡ ಪಾಟೀಲ್ ಯತ್ನಾಳರ ವಿರುದ್ಧ ಅಧ್ಯಕ್ಷರು ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡಿದ್ದಾರೆ. ಯತ್ನಾಳ್ ತನ್ನ ಬಾಯಿ ಚಪಲಕ್ಕೆ ಮಾತನಾಡುತ್ತಿದ್ದಾರೆ. ಅಧಿಕಾರ ಸಿಕ್ಕಿಲ್ಲ ಎಂಬ ಕಾರಣಕ್ಕೆ ಹುಚ್ಚುಚ್ಚಾಗಿ ಮಾತನಾಡುತ್ತಿದ್ದಾರೆ. ವಿಧಾನ ಪರಿಷತ್ ಸದಸ್ಯರಾಗಿದ್ದಾಗ ಯತ್ನಾಳ್ ಯಡಿಯೂರಪ್ಪ ಅವರನ್ನು ಹಾಡಿ ಹೊಗಳಿದ್ದರು. ಜಗದೀಶ್ ಶೆಟ್ಟರ್ , ಪ್ರಲ್ಹಾದ್ ಜೊಷಿ ವಿರುದ್ಧ ಮಾತನಾಡಿದ್ದರು. ಈಗ ಶಾಸಕನಾಗಿ ಉನ್ನತ ಸ್ಥಾನಕ್ಕೆ ಹೋಗಿ ತಮ್ಮ ವರ್ಚಸ್ಸು ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಶಾಸಕನಾದ ಮೇಲೆ ಮಂತ್ರಿಯಾಗಬೇಕೆನ್ನುವ ಬಯಕೆ ಇದ್ದೇ ಇರುತ್ತದೆ. ನಾನು ಪಕ್ಷದ ಅಧ್ಯಕ್ಷರ ಮುಂದೆ ನನ್ನ ಭಾವನೆ ವ್ಯಕ್ತಪಡಿಸಿದ್ದೇನೆ. ಈ ಬಾರಿ ಆಶೀರ್ವಾದ ಮಾಡುವ ವಿಶ್ವಾಸ ಇದೆ. ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆಯುವ ನಾಯಕ. ಮುನಿರತ್ನ ಗೆ ಇಂಥದೇ ಖಾತೆ ಕೊಡುತ್ತೇನೆ ಎಂದು ಯಡಿಯೂರಪ್ಪ ಎಲ್ಲಿಯೂ ಹೇಳಿಲ್ಲ. ಇಂತಹದ್ದೇ ಮಂತ್ರಿಸ್ಥಾನ ಎಂದು ಆಸೆ ಇಟ್ಟುಕೊಂಡರೆ ಪ್ರಯೋಜನವಿಲ್ಲ ಎಂದರು.

ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಪಾತ್ರ ಇದೆ. ಅದಕ್ಕೆ ಸಿಬಿಐ ತನಿಖೆ ನಡೆಸುತ್ತಿದೆ ಇದರಲ್ಲಿ ಬಿಜೆಪಿ ಪಾತ್ರ ಏನೇನೂ ಇಲ್ಲ. ಸಿಬಿಐ ಸಂಸ್ಥೆಯನ್ನು ದುರುಪಯೋಗ ಪಡೆಸಿಕೊಂಡಿರುವುದು ಕಾಂಗ್ರೆಸ್ ಎಂದು ರೇಣುಕಾಚಾರ್ಯ ಟೀಕಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!