New Delhi

ಭಾರತ ತನ್ನ ಸಾರ್ವಭೌಮತೆ ಮತ್ತು ಪ್ರಾಂತೀಯ ಸಮಗ್ರತೆ ಕಾಪಾಡಲು ಬದ್ಧ; ರಾಜನಾಥ್‌ ಸಿಂಗ್‌

ನವದೆಹಲಿ, ನ 5- ಪೂರ್ವ ಲಡಾಕ್‌ನ ವಾಸ್ತವ ಗಡಿ ರೇಖೆ (ಎಲ್‌ಎಸಿ)ಯಲ್ಲಿ ಚೀನಾ ಸೇನೆಯೊಂದಿಗಿನ ಘರ್ಷಣೆಯ ನಡುವೆಯೇ, ಭಾರತ ದೇಶದ ಸಾರ್ವಭೌಮತೆ ಮತ್ತು ಪ್ರಾಂತೀಯ ಸಮಗ್ರತೆಯನ್ನು ಕಾಪಾಡಲು ಭಾರತ ಬದ್ಧವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ‌ ಸಿಂಗ್‌ ಹೇಳಿದ್ದಾರೆ.

ರಾಷ್ಟ್ರೀಯ ರಕ್ಷಣಾ ಕಾಲೇಜು (ಎನ್‌ಡಿಸಿ) ವಜ್ರ ಮಹೋತ್ಸವ ಉದ್ದೇಶಿಸಿ ಮಾತನಾಡಿದ ಅವರು, ಭಾರತ ಶಾಂತಿಪ್ರಿಯ ದೇಶವಾಗಿದೆ. ಆದರೂ, ಗಡಿಯಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿದೆ ಎಂದರು.

ಭಿನ್ನಾಭಿಪ್ರಾಯಗಳು ವಿವಾದಗಳಾಗಿ ಬದಲಾಗಬಾರದು ಎಂಬುದು ನಮ್ಮ ನಂಬಿಕೆಯಾಗಿದೆ.ನಾವು ವಿವಾದಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವುದಕ್ಕೆ ಆದ್ಯತೆ ನೀಡುತ್ತೇವೆ. ಗಡಿಯಲ್ಲಿ ಶಾಂತಿ ಕಾಪಾಡುವ ಸಂಬಂಧ ಭಾರತ ಸಹಿ ಹಾಕಿರುವ ವಿವಿಧ ಒಪ್ಪಂದಗಳು ಮತ್ತು ಶಿಷ್ಟಚಾರಗಳನ್ನು ಗೌರವಿಸುತ್ತದೆ ಎಂದರು.

ಆದರೆ, ಭಾರತ ದೇಶದ ಸಾರ್ವಭೌಮತೆ ಮತ್ತು ಪ್ರಾಂತೀಯ ಸಮಗ್ರತೆ ಕಾಪಾಡಲು ಬದ್ಧವಾಗಿದೆ. ಇದಕ್ಕಾಗಿ ಯಾವುದೇ ತ್ಯಾಗಕ್ಕೂ ದೇಶ ಸಿದ್ಧವಿದೆ ಎಂದು ಹೇಳಿದರು.

ಕಳೆದ ಆರು ವರ್ಷಗಳಲ್ಲಿ ಭಾರತ ಇಂಡೋ- ಪೆಸಿಫಿಕ್‌ ಉಪಕ್ರಮಗಳ ಭಾಗವಾಗುವ ಬದ್ಧತೆಯುಳ್ಳ ಸಮಾನ ಮನಸ್ಕ ರಾಷ್ಟ್ರಗಳೊಂದಿಗೆ ಪಾಲುದಾರಿಕೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಅಮೆರಿಕದೊಂದಿಗಿನ ನಮ್ಮ ಸಂಬಂಧ ಹಿಂದಿಗಿಂತ ಸದೃಢವಾಗಿದೆ. ಅದೇ ರೀತಿ ಕಳೆದ ಕೆಲ ವರ್ಷಗಳಲ್ಲಿ ಜಪಾನ್‌ನೊಂದಿಗಿನ ಸಂಬಂಧ ಕೂಡ ಬಲಗೊಂಡಿದೆ. 2020ರ ಜೂನ್‌ನಲ್ಲಿ ನಡೆದ ಇಂಡೋ-ಆಸ್ಟ್ರೇಲಿಯಾ ವರ್ಚ್ಯುವಲ್‌ ಶೃಂಗಸಭೆ ಅನೇಕ ಸಮಗ್ರ ಪಾಲುದಾರಿಕೆಗಳಿಗೆ ಎಡೆ ಮಾಡಿಕೊಟ್ಟಿದೆ ಎಂದರು.

ಪಾಕಿಸ್ತಾನ ಈಗಲೂ ಭಯೋತ್ಪಾದಕತೆಯನ್ನು ದೇಶದ ನೀತಿಯನ್ನಾಗಿ ಬಳಸುವುದನ್ನು ಮುಂದುವರಿಸುತ್ತಿದೆ. ಆದರೆ, ಸಮಾನ ಮನಸ್ಕ ದೇಶಗಳೊಂದಿಗಿನ ನಮ್ಮ ಕಾರ್ಯಾಚರಣೆಯಿಂದ ಪಾಕಿಸ್ತಾನದ ಆಕ್ರಮಣಕಾರಿ ನೀತಿಗಳನ್ನು ಬಯಲಿಗೆಳೆಯಲು ಸಾಧ್ಯವಾಗಿದೆ ಎಂದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!