Bengaluru

ಎಫ್ ಎಸ್ ಎಲ್ ಮಾದರಿಯನ್ನು 15 ದಿನಗಳೊಳಗೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಆದೇಶ

ಬೆಂಗಳೂರು, ನ.3- ತನಿಖಾಧಿಕಾರಿಗಳು ಅಪರಾಧ ನಡೆದ ಸ್ಥಳದಿಂದ ವಿಧಿವಿಜ್ಞಾನ ಪ್ರಯೋಗಕ್ಕಾಗಿ ಸಂಗ್ರಹಿಸುವ ಮಾದರಿಗಳನ್ನು 15 ದಿನಗಳೊಳಗೆ ಎಫ್ ಎಸ್ ಎಲ್ ಗೆ ಕಳುಹಿಸಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ ಸೂದ ಆದೇಶ ಹೊರಡಿಸಿದ್ದಾರೆ.

ಅಪರಾಧ ತನಿಖೆಯಲ್ಲಿ ಅತ್ಯಂತ ಮಹತ್ವಪಡೆದಿರುವ ಫಾರೆನ್ಸಿಕ್ಸ್ ಮಾದರಿಯನ್ನು ಕೆಲವು ಅಧಿಕಾರಿಗಳು ತಿಂಗಳಾದರೂ ಪ್ರಯೋಗಾಲಯಕ್ಕೆ ಕಳುಹಿಸದಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಡಿಜಿ ಮತ್ತು ಐಜಿಪಿ ಈ ಆದೇಶ ಹೊರಡಿಸಿದ್ದಾರೆ.

ವಿಭಾಗೀಯ ಪೊಲೀಸ್ ಅಧಿಕಾರಿಗಳು ಕಾಲಮಿತಿಯಲ್ಲಿ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಪೂರೈಸಬೇಕು. ಒಂದು ವೇಳೆ ಫಾರೆನ್ಸಿಕ್ ಮಾದರಿ ಸಲ್ಲಿಸಲು 30 ದಿನಗಳವರೆಗೆ ವಿಳಂಬವಾದರೆ ಸಂಬಂಧಪಟ್ಟ ಡಿಸಿಪಿ ಅಥವಾ ಪೊಲೀಸ್ ವರಿಷ್ಠಾಧಿಕಾರಿ ಸಹಿ ಹಾಕಿದ ಪತ್ರದೊಂದಿಗೆ ಎಫ್ ಎಸ್ ಎಲ್ ಗೆ ಕಳುಹಿಸಿಕೊಡಬೇಕು. ಸಂಗ್ರಹಿಸಿದ ಮಾದರಿಯನ್ನು ಕಳುಹಿಸಿಕೊಡಲು 30 ದಿನಗಳಿಗಿಂತ ಹೆಚ್ಚ ವಿಳಂಬವಾದರೆ, ಎಫ್ ಎಸ್ ಎಲ್ ಗೆ ಕಳುಹಿಸಿಕೊಡುವ ಮೊದಲು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ (ಅಪರಾಧ ಮತ್ತು ತಾಂತ್ರಿಕ ಸೇವೆಗಳು) ಅನುಮತಿ ಪಡೆಯಬೇಕು ಎಂದು ಆದೇಶದಲ್ಲಿ ಪ್ರವೀಣ ಸೂದ ತಿಳಿಸಿದ್ದಾರೆ.

ವಿಧಿವಿಜ್ಞಾನ ಪ್ರಯೋಗಾಲಯದಿಂದ ಸಮಯಕ್ಕೆ ಸರಿಯಾಗಿ ವರದಿ ಬಾರದ ಹಿನ್ನೆಲೆಯಲ್ಲಿ ಹಲವು ಅಪರಾಧ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸುವ ಪ್ರಸಂಗ ಉಂಟಾಗಿತ್ತು. ಇದರಿಂದ ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆಯಾಗದಿರುವುದು ಕೂಡ ನಡೆದಿತ್ತು. ಈ ಎಲ್ಲಾ ಅಂಶಗಳನ್ನು ಗಮನದಟ್ಟಿಕೊಂಡು ಪ್ರವೀಣ್ ಸೂದ್ ಈ ಸುತ್ತೋಲೆ ಹೊರಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!