Bengaluru

ನ್ಯಾಯಾಂಗ ವೃತ್ತಿ ಸಾರ್ವಜನಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದಂತೆ: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ

ಬೆಂಗಳೂರು, ನ 2 : ನ್ಯಾಯಾಂಗ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸುವುದು ಸಾರ್ವಜನಿಕ ಕ್ಷೇತ್ರದಲ್ಲಿ ಸೇವೆಸಲ್ಲಿಸಿದಂತೆ. ಹಾಗಾಗಿ ಹೆಚ್ಚಿನ ಪ್ರಮಾಣದಲ್ಲಿ ನ್ಯಾಯಾಂಗ ವ್ಯವಸ್ಥೆಗೆ ಸೇರ್ಪಡೆಯಾಗಬೇಕು ಎಂದು ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಓಕಾ ಕರೆ ನೀಡಿದ್ದಾರೆ.

ಕರ್ನಾಟಕ ವಕೀಲರ ಪರಿಷತ್ತು ಏರ್ಪಡಿಸಿದ್ದ ನ್ಯಾಯಾಂಗ ವ್ಯವಸ್ಥೆಯಲ್ಲಿ ಉದ್ಯೋಗಾವಕಾಶಗಳು ಕುರಿತು ಝೂಮ್ ಆ್ಯಪ್ ಮೂಲಕ ಉಪನ್ಯಾಸ ನೀಡಿದ ಅವರು, ನ್ಯಾಯಾಂಗ ವ್ಯವಸ್ಥೆಗೆ ಸೇರಿದರೆ ಉತ್ತಮ ಭವಿಷ್ಯವಿದ್ದು, ನ್ಯಾಯಾಂಗ ಅಧಿಕಾರಿಗಳಾದರೆ ವೃತ್ತಿ ತೃಪ್ತಿಯೂ ಸಹ ಇರುತ್ತದೆ. ಸಮಾಜದ ಎಲ್ಲಾ ಆಯಾಮಗಳನ್ನು ನೋಡಲು, ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಅವಕಾಶ ಇರುತ್ತದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಉತ್ತಮ ಭವಿಷ್ಯವಿದ್ದು, ಉತ್ತಮ ಪ್ರತಿಭಾವಂತರೂ ಇದ್ದಾರೆ. ವ್ಯವಸ್ಥೆಯಲ್ಲಿ ಸುಧಾರಣೆ ತರಲು ಇದರಿಂದ ಸಹಕಾರಿಯಾಗಲಿದೆ ಎಂದರು.

25 ವರ್ಷದ ಯುವ ವಕೀಲರು ಸಹ ಕೆಳ ಹಂತದ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರಾಗಿ ನೇಮಕವಾಗಲು ಈಗಿನ ನೇಮಕಾತಿ ನಿಯಮಗಳಲ್ಲಿ ಅವಕಾಶವಿದೆ. ಇತರೆ ಸರ್ಕಾರಿ ಉದ್ಯೋಗ, ಖಾಸಗಿ ಸಂಸ್ಥೆಗಳಿಗಿಂತಲೂ ಹೆಚ್ಚು ವೇತನ ಸೌಲಭ್ಯಗಳು ದೊರೆಯುತ್ತದೆ. ಈಗಿನ ಪರಿಸ್ಥಿತಿಯಲ್ಲಿ ನ್ಯಾಯಾಧೀಶಕರಿಗೆ ಹೆಚ್ಚಿನ ವೇತನ ದೊರೆಯುತ್ತಿದೆ.

ಓರ್ವ ಸಿವಿಲ್ ಜಡ್ಸ್ ಗೆ ಮಾಸಿಕ 87 ಸಾವಿರ ರೂ ವೇತನ, ವಿದ್ಯುತ್, ಪೇಪರ್ ಬಿಲ್ ಪಾವತಿ, ಪ್ರತಿ ತಿಂಗಳು 50 ರಿಂದ 75 ಲೀಟರ್ ಪೆಟ್ರೋಲ್ ದೊರೆಯುತ್ತದೆ. ಈ ಹಿಂದೆ ಸಿವಿಲ್ ಜಡ್ಸ್ ದ್ವಿಚಕ್ರ ವಾಹನ ಪಡೆಯಲು ಸಾಧ್ಯವಾಗಿರಲಿಲ್ಲ. ಈಗ ಎಲ್ಲವೂ ಬದಲಾಗಿದೆ. ಜಿಲ್ಲಾ ನ್ಯಾಯಾಧೀಶರಿಗೆ 1.50 ಲಕ್ಷಕ್ಕೂ ಹೆಚ್ಚು ವೇತನವಿದೆ ಎಂದು ಮಾಹಿತಿ ನೀಡಿದರು.

ನ್ಯಾಯಾಂಗ ಅಧಿಕಾರಿಯಾದರೆ ಸಾಮಾನ್ಯ ವ್ಯಕ್ತಿಗಳ ಕುಂದುಕೊರತೆಗಳನ್ನು ಬಗೆಹರಿಸುವ, ನ್ಯಾಯಕೊಡಿಸಿದ ತೃಪ್ತಿ ಇರುತ್ತದೆ. ಕುಟುಂಬಗಳನ್ನು ಒಂದುಗೂಡಿಸುವ ಕೆಲಸ ಮಾಡಬಹದು. ನ್ಯಾಯಾಧೀಶರು ಒಬ್ಬ ಉತ್ತಮ ಕೌನ್ಸಿಲರ್ ಆಗಬಹುದು. ಹೀಗೆ ಹತ್ತು ಹಲವು ಪಾತ್ರಗಳನ್ನು ನ್ಯಾಯಾಂಗ ಅಧಿಕಾರಿಗಳು ನಿರ್ವಹಿಸಬಹುದು. ಇಂತಹ ಅವಕಾಶ ಬೇರೆ ಯಾವುದೇ ವೃತ್ತಿಯಲ್ಲೂ ಇಲ್ಲ ಎಂದರು.

ವಕೀಲರ ವೃತ್ತಿ ತೃಪ್ತಿಗಿಂತ ನ್ಯಾಯಾಧೀಶರು ಅಥವಾ ನ್ಯಾಯಾಂಗ ಅಧಿಕಾರಿಗಳಿಗೆ ಹೆಚ್ಚು ಸಂತೃಪ್ತಿ ಇರುತ್ತದೆ. ವಕೀಲರು ತಮ್ಮ ದೈನಂದಿನ ವೃತ್ತಿ ಜೀವನದಲ್ಲಿ ಸಾಕಷ್ಟು ರಾಜೀ ಮಾಡಿಕೊಳ್ಳಬೇಕಾಗುತ್ತದೆ. ಆದರೆ ನ್ಯಾಯಾಧೀಶರಿಗೆ ಇಂತಹ ಯಾವುದೇ ಸಮಸ್ಯೆ ಇರುವುದಿಲ್ಲ. ನ್ಯಾಯಾಧೀಶರನ್ನು ಜಗತ್ತಿನ ಯಾವುದೇ ಶಕ್ತಿ ನಿಯಂತ್ರಿಸಲು ಸಾಧ್ಯವಿಲ್ಲ. ಅಷ್ಟೊಂದು ಸಾಮರ್ಥ್ಯ, ಶಕ್ತಿ ಇರುತ್ತದೆ. ವಕೀಲರಾಗಿ ಕೆಲಿಯುವುದಕ್ಕಿಂತ ನ್ಯಾಯಾಧೀಶಕರಾಗಿ ಹೆಚ್ಚು ಕಲಿಯಲು ಅವಕಾಶವಿದೆ. ಪ್ರತಿಯೊಂದು ವ್ಯಾಜ್ಯಕ್ಕೂ ಒಂದೊಂದು ಬಣ್ಣ ಇರುತ್ತದೆ. ಪ್ರತಿಯೊಂದು ಅಪರಾಧ ಪ್ರಕರಣಗಳ ಹಿಂದೆ ಹಲವು ಮುಖಗಳಿರುತ್ತವೆ. ಒಬ್ಬ ನ್ಯಾಯಾಧೀಶರು ಇಂಜಿನಿಯರ್ ಗಳಾಗಬಹುದು. ವೈದ್ಯರಾಗಬಹುದು. ಒಬ್ಬ ವಕೀಲರು ಒಂದು ಕ್ಷೇತ್ರದಲ್ಲಿ ಮಾತ್ರ ಪರಿಣಿತರಾಗಬಹುದು. ಆದರೆ ನ್ಯಾಯಾಧೀಶರು ಎಲ್ಲಾ ಕ್ಷೇತ್ರಗಳ ಬಗ್ಗೆಯೂ ಪರಿಣಿತಿ ಪಡೆಯಬಹುದು ಎಂದರು.

ತಾವು ಮುಂಬೈ ನಲ್ಲಿ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದನ್ನು ನೆನಪುಮಾಡಿಕೊಂಡ ಮುಖ್ಯನ್ಯಾಯಮೂರ್ತಿ ಅವರು, ಆಗ ಪ್ರತಿಯೊಂದು ಜಿಲ್ಲೆಯಲ್ಲೂ ನೇಮಕಾತಿ ಆಂದೋಲನ ನಡೆಸಿದ್ದು, ಇದರ ಪರಿಣಾಮ ಹೆಚ್ಚು ಮಂದಿ ನ್ಯಾಯಾಂಗ ವ್ಯವಸ್ಥೆಗೆ ಸೇರಲು ಸಾಧ್ಯವಾಯಿತು ಎಂದು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!