Sports

ಭಾರತ ತಂಡಕ್ಕೆ ಆಯ್ಕೆಯಾಗದ ಆಟಗಾರರಿಗೆ ರವಿಶಾಸ್ತ್ರಿ ಸಲಹೆ

ನವದೆಹಲಿ, ನ 2- ಸೂರ್ಯಕುಮಾರ‌ ಯಾದವ‌ ಸೇರಿದಂತೆ ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಮಾಡಿರುವ ಮೂರರಿಂದ ನಾಲ್ಕು ಜಯ ಆಟಗಾರರಿಗೆ ಭಾರತ ತಂಡದ ಮುಖ್ಯ ಕೋಚ್‌ ರವಿಶಾಸ್ತ್ರಿ ವಿಶೇಷ ಸಲಹೆಯೊಂದನ್ನು ನೀಡಿದ್ದಾರೆ.

ಇತ್ತೀಚೆಗೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಮೂರೂ ಸ್ವರೂಪದ ಭಾರತ ತಂಡವನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರಕಟಿಸಿತ್ತು. ಮುಂಬೈ ಇಂಡಿಯನ್ಸ್ ತಂಡದ ಸೂರ್ಯಕುಮಾರ‌ ಯಾದವ‌ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಿರಲಿಲ್ಲ. ಇದರಿಂದ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದರು.

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಅಜೇಯ 79 ರನ್‌ಗಳನ್ನು ಗಳಿಸಿದ್ದ ಸೂರ್ಯಕುಮಾರ್ ಯಾದವ್‌ ಮುಂಬೈ ಇಂಡಿಯನ್ಸ್ ತಂಡವನ್ನು ಗೆಲ್ಲಿಸಿದ್ದರು. ಪಂದ್ಯದ ಬಳಿಕ ರವಿ ಶಾಸ್ತ್ರಿ, ತಮ್ಮ ಅಧಿಕೃತ ಟ್ವಿಟರ್‌ನಲ್ಲಿ ಶಕ್ತಿಯುತ ಹಾಗೂ ತಾಳ್ಮೆಯಿಂದ ಇರಿ ಎಂದು ಸಲಹೆ ನೀಡಿದ್ದರು.

ಟೈಮ್ಸ್ ನೌ ಜತೆಗಿನ ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ್ದ ರವಿ ಶಾಸ್ತ್ರಿ, “ಸೂರ್ಯಕುಮಾರ್‌ ಯಾದವ್‌ ಸೇರಿದಂತೆ 3 ರಿಂದ 4 ಆಟಗಾರರು ಭಾರತ ತಂಡದ ಆಯ್ಕೆಯ ರೇಸ್‌ನಲ್ಲಿದ್ದಾರೆ. ಖಂಡಿತಾ ಅವರಿಗೆ ಅವಕಾಶ ಸಿಗುತ್ತದೆ, ಅಲ್ಲಿಯವರೆಗೂ ತಾಳ್ಮೆಯಿಂದ ಉತ್ತಮ ಪ್ರದರ್ಶನವನ್ನು ಮುಂದುವರಿಸಿ. ಸದಯ ತಂಡದಲ್ಲಿ ಅನುಭವಿ ಆಟಗಾರರಿದ್ದು, ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಹಾಗಾಗಿ ಸದ್ಯಕ್ಕೆ ಅವಕಾಶ ನೀಡುವುದು ಸುಲಭವಲ್ಲ,” ಎಂದು ಹೇಳಿದ್ದಾರೆ.

ಪ್ರಿಯಾಂಕ‌ ಪಾಂಚಲ್‌ ಹಾಗೂ ಅಭಿಮನ್ಯು ಈಶ್ವರನ್‌ ಅವರು ದೇಶಿ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನದ ಹೊರತಾಗಿಯೂ ಭಾರತ ಟೆಸ್ಟ್‌ ತಂಡಕ್ಕೆ ಆಯ್ಕೆಯಾಗುವಲ್ಲಿ ವಿಫಲರಾದರು. ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸ್ತ್ರಿ ಯುವ ಆಟಗಾರರು ಅವಕಾಶ ಸಿಗುವವರೆಗೂ ತಾಳ್ಮೆಯಿಂದ ಕಾಯಬೇಕು. ಅವಕಾಶ ಸಿಕ್ಕಾಗ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

“ಎಲ್ಲಾ ಯುವ ಪ್ರತಿಭೆಗಳಿಗೆ ಒಂದು ಸಂದೇಶವನ್ನು ನೀಡಲು ಬಯಸುತ್ತೇನೆ. ತಾಳ್ಮೆಯಿಂದ ಇದ್ದು ಅವಕಾಶ ಸಿಕ್ಕಾಗ ಎರಡು ಕೈಗಳಿಂದ ಅಪ್ಪಿಕೊಳ್ಳಿ. ಆ ವೇಳೆ ನೀವು ತಪ್ಪಬಾರದು. ಭಾರತಕ್ಕೆ ಆಯ್ಕೆಯಾಗದ ಬಗ್ಗೆ ನಿರಾಸೆಗೆ ಒಳಗಾಗದೆ ಮನಸ್ಸನ್ನು ಪಾಸಿಟಿವ್‌ ಆಗಿ ಇಟ್ಟುಕೊಳ್ಳಿ. ಅವಕಾಶ ಸಿಕ್ಕಾಗ ಸದುಪಯೋಗಪಡಿಸಿಕೊಳ್ಳಿ,” ಎಂದು ರವಿಶಾಸ್ತ್ರಿ ಹೇಳಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!