New Delhi

ದೇಶಾದ್ಯಂತ ಈದ್ ಮಿಲಾದ್ ಸರಳ ಆಚರಣೆ: ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಿ ಶುಭಾಶಯ

ನವದೆಹಲಿ, ಅ.30- ಪ್ರವಾದಿ ಮುಹಮ್ಮದ್ ಅವರ ಜನ್ಮದಿನವಾದ ಈದ್ ಮಿಲಾದ್ ಅಥವಾ ಮೀಲಾದುನ್ನಬಿಯನ್ನು ದೇಶದ ಹಲವು ಭಾಗಗಳಲ್ಲಿ ಇಂದು ಸರಳವಾಗಿ ಆಚರಿಸಲಾಗುತ್ತಿದೆ.

ಕೋವಿಡ್-19 ಹಿನ್ನೆಲೆಯಲ್ಲಿ ಮೀಲಾದ್ ಮೆರವಣಿಗೆ ನಡೆಸದೆ ಸರಳವಾಗಿ ಆಚರಿಸಲು ಹಲವು ಸಂಘಟನೆಗಳು, ಸಮಿತಿಗಳು ತೀರ್ಮಾನ ಕೈಗೊಂಡಿವೆ. ಆದರೂ ಕೋವಿಡ್ ಮಾರ್ಗಸೂಚಿ ಪಾಲಿಸಿ ಹಲವೆಡೆ ಮೀಲಾದ್ ಮೆಹ್ಫಿಲ್ ಮತ್ತು ಸೀರತ್ ಮಜಾಲಿಸ್ ಗಳು ನಡೆಯುತ್ತಿವೆ.

ಈದ್ ಮಿಲಾದ್ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ದೇಶದ ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದ್ದಾರೆ.

ಪ್ರವಾದಿ ಮುಹಮ್ಮದ್ ಅವರು ಪ್ರೀತಿ ಮತ್ತು ಸಹೋದರತ್ವದ ಸಂದೇಶವನ್ನು ನೀಡಿದ್ದು, ಜಗತ್ತನ್ನು ಮಾನವೀಯತೆಯ ಹಾದಿಗೆ ಕೊಂಡೊಯ್ದಿದಿದ್ದಾರೆ ಎಂದು ರಾಷ್ಟ್ರಪತಿ ಕೋವಿಂದ್ ತಿಳಿಸಿದ್ದಾರೆ.

ಪ್ರವಾದಿ ಮುಹಮ್ಮದ್ ಅವರು ಸಮಾನತೆ ಮತ್ತು ಸಾಮರಸ್ಯವನ್ನು ಆಧರಿಸಿದ ಸಮಾಜವನ್ನು ನಿರ್ಮಿಸಲು ಬಯಸಿದ್ದರು. ಪವಿತ್ರ ಕುರ್‌ಆನ್‌ ಸಂದೇಶದಂತೆ ಪ್ರವಾದಿ ಮುಹಮ್ಮದ್ ಅವರ ಬೋಧನೆಗಳ ಪ್ರಕಾರ ಸಮಾಜದ ಯೋಗಕ್ಷೇಮ ಮತ್ತು ದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆಗಾಗಿ ಕೆಲಸ ಮಾಡುವಂತೆ ರಾಷ್ಟ್ರಪತಿಗಳು ಕರೆ ನೀಡಿದ್ದಾರೆ.

‘ಎಲ್ಲ ನಾಗರಿಕರಿಗೆ, ವಿಶೇಷವಾಗಿ ಭಾರತದಲ್ಲಿ ಮತ್ತು ಹೊರ ರಾಷ್ಟ್ರಗಳಲ್ಲಿರುವ ಮುಸ್ಲಿಂ ಸೋದರ ಮತ್ತು ಸೋದರಿಯರಿಗೆ ಶುಭಾಶಯಗಳು. ಸಮಾಜದ ಒಳಿತಿಗಾಗಿ, ದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆಗಾಗಿ ನಾವೆಲ್ಲರೂ ಅವರ ಬೋಧನೆಗಳನ್ನು ಅನುಸರಿಸೋಣ ಎಂದು ರಾಷ್ಟ್ರಪತಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ತಮ್ಮ ಸಂದೇಶದಲ್ಲಿ, ಪ್ರವಾದಿ ಮುಹಮ್ಮದ್ ಪ್ರೀತಿ ಮತ್ತು ಸಾರ್ವತ್ರಿಕ ಸಹೋದರತ್ವದ ಸತ್ಪಥವನ್ನು ಮಾನವೀಯತೆಯ ಮೂಲಕ ತೋರಿಸಿದ್ದಾರೆ. ಮೀಲಾದುನ್ನಬಿ ಕುಟುಂಬ ಮತ್ತು ಸ್ನೇಹಿತರು ಒಗ್ಗೂಡಿ ಪ್ರಾರ್ಥನೆ ಸಲ್ಲಿಸುವ ಸಂದರ್ಭವಾಗಿದೆ. ಕೋವಿಡ್ -19 ಆರೋಗ್ಯ ಮತ್ತು ನೈರ್ಮಲ್ಯ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಮೀಲಾದುನ್ನಬಿಯನ್ನು ಸರಳವಾಗಿ ಆಚರಿಸಬೇಕೆಂದು ಮನವಿ ಮಾಡಿದ್ದಾರೆ.

ಟ್ವೀಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಿಲಾದುನ್ನಬಿಯ ಶುಭ ಕೋರಿದ್ದಾರೆ. ಈದ್ ಮಿಲಾದ್ ಪ್ರೀತಿ ಮತ್ತು ಸಹೋದರತ್ವವನ್ನು ಹೆಚ್ಚಿಸಲಿ ಎಂದು ಹಾರೈಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!