Belagavi

ಮಹಾರಾಷ್ಟ್ರದ ‘ಕರಾಳದಿನ’, ಗಂಭೀರ ಪರಿಗಣಿಸಲು ಸರಕಾರಕ್ಕೆ ಕನ್ನಡ ಸಂಘಟನೆಗಳ ಆಗ್ರಹ

ಬೆಳಗಾವಿ : ಕರ್ನಾಟಕ ರಾಜ್ಯೋತ್ಸವ ದಿನದಂದು ಮಹಾರಾಷ್ಟ್ರ ಸರಕಾರ ಕರಾಳ ದಿನ ಆಚರಿಸುತ್ತಿರುವ

“ಒಕ್ಕೂಟ ವ್ಯವಸ್ಥೆಯ ವಿರೋಧಿ” ಕ್ರಮದ ಬಗ್ಗೆ ಕರ್ನಾಟಕ ಸರಕಾರ ಗಂಭೀರವಾಗಿ ಪರಿಗಣಿಸಬೇಕೆಂದು ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಸರಕಾರವನ್ನು ಆಗ್ರಹಿಸಿದೆ.

ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಪತ್ರ ಬರೆದಿರುವ ಸಮಿತಿ ಅಧ್ಯಕ್ಷ ಅಶೋಕ್ ಚಂದರಗಿ ಇದೇ ನವ್ಹೆಂಬರ್ ಒಂದರಂದು ಕರ್ನಾಟಕವು ರಾಜೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಮಹಾರಾಷ್ಟ್ರ ಸರಕಾರವು ಕರಾಳ ದಿನವನ್ನು ಆಚರಿಸುವ ನಿರ್ಧಾರ ಕೈಗೊಂಡಿರುವದು ಅತ್ಯಂತ ಗಂಭೀರ ವಿಷಯವಾಗಿದ್ದು ಇದು ಒಕ್ಕೂಟ ವ್ಯವಸ್ಥೆಯ ವಿರೋಧಿ ಕ್ರಮವಾಗಿದೆ. ಉಭಯ ರಾಜ್ಯಗಳ ನಡುವಣ ಗಡಿವಿವಾದವು 2004 ರಿಂದ ಸರ್ವೋನ್ನತ ನ್ಯಾಯಾಲಯದ ಮುಂದಿದ್ದು ರಾಜ್ಯೋತ್ಸವ ದಿನದಂದು ಮಹಾರಾಷ್ಟ್ರ ಸರಕಾರದ ಮಂತ್ರಿ ಮಂಡಳದ ಸಚಿವರು ಕೈಗೆ ಕಪ್ಪು ಪಟ್ಟಿ ಧರಿಸಿಯೇ ಕಾರ್ಯ ನಿರ್ವಹಿಸುವ ನಿರ್ಧಾರ ಕೈಗೊಂಡಿರುವದು ಸರ್ವೋನ್ನತ ನ್ಯಾಯಾಲಯದ ನಿಂದನೆಯಾಗಿದೆ.

ಒಂದು ರಾಜ್ಯವು ರಾಜ್ಯೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ಮತ್ತೊಂದು ರಾಜ್ಯವು ಈ ರೀತಿ ಅಧಿಕೃತವಾಗಿ ಕರಾಳ ದಿನ ಆಚರಿಸುವದು ನಮ್ಮ ರಾಜ್ಯದ ಮೇಲೆ ನಡೆಸಿದ “ಸರಕಾರಿ ದಾಳಿಯೇ” ಸರಿ. ಈ ಕ್ರಮವು ನಾವು ಒಪ್ಪಿದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂಥ ಕ್ರಮವಾಗಿದೆ. ಇದನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಬೇಕಲ್ಲದೇ ಮಹಾರಾಷ್ಟ್ರಕ್ಕೆ ತನ್ನ ಅಧಿಕೃತ ಪ್ರತಿಭಟನೆಯನ್ನು ತಿಳಿಸಬೇಕು.

ಮಹಾರಾಷ್ಟ್ರ ಸರಕಾರದ ನಿರ್ಧಾರದ ಬಗ್ಗೆ ಅಲ್ಲಿಯ ಗಡಿ ಉಸ್ತುವಾರಿ ಸಚಿವರುಗಳಾದ ಛಗನ್ ಭುಜಬಲ ಮತ್ತು ಏಕನಾಥ ಶಿಂಧೆ ಅವರು ನೀಡಿದ ಹೇಳಿಕೆಯು ಮರಾಠಿ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಶಿಂಧೆಯವರ ಹೇಳಿಕೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ ಆಗಿದೆ ಎಂದಿರುವ ಕ್ರಿಯಾ ಸಮಿತಿ ಅವುಗಳನ್ನು ಸರಕಾರಕ್ಕೂ ಕಳುಹಿಸಿದೆ.

ಮಹಾರಾಷ್ಟ್ರ ಸರಕಾರದ ನಿರ್ಧಾರದ ಬಗ್ಗೆ ಕರ್ನಾಟಕ ಸರಕಾರ ತನ್ನ ತೀವ್ರ ಆಕ್ಷೇಪ ಮತ್ತು ಪ್ರತಿಭಟನೆ
ವ್ಯಕ್ತಪಡಿಸದೇ ಮೌನ ವಹಿಸಿದರೆ ರಾಜ್ಯದ ಕನ್ನಡಿಗರಿಗೆ ತಪ್ಪು ಸಂದೇಶ ಹೋಗುವದು ನಿಶ್ಚಿತ. ಆದ್ದರಿಂದ ಸರಕಾರ ಈ ವಿಷಯದ ಗಂಭೀರತೆಯನ್ನು ಅರಿತುಕೊಳ್ಳಬೇಕಾಗಿ ಆಗ್ರಹಿಸಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!