New Delhi

ಆಹಾರ ಸಾಮಾಗ್ರಿ ಪ್ಯಾಕ್‌ ಮಾಡಲು ಸೆಣಬಿನ ಬ್ಯಾಗ್‌ ಬಳಕೆ ಕಡ್ಡಾಯ

ನವದೆಹಲಿ, ಅ 29- ಆಹಾರ ಧಾನ್ಯಗಳು ಶೇ.100ರಷ್ಟು ಮತ್ತು ಶೇ.20ರಷ್ಟು ಸಕ್ಕರೆಯನ್ನು ವೈವಿಧ್ಯಮಯ ಸೆಣಬಿನ ಚೀಲಗಳಲ್ಲಿ ತುಂಬಿಸುವುದನ್ನು ಕಡ್ಡಾಯಗೊಳಿಸುವ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಗುರುವಾರ ಅನುಮೋದನೆ ನೀಡಿದೆ.
ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್, ಸಕ್ಕರೆಯನ್ನು ಸೆಣಬಿನ ಚೀಲಗಳಲ್ಲಿ ಪ್ಯಾಕ್ ಮಾಡುವ ನಿರ್ಧಾರದಿಂದ ಸೆಣಬಿನ ಉದ್ಯಮದ ಅಭಿವೃದ್ಧಿಗೆ ಪ್ರೋತ್ಸಾಹ ದೊರೆಯಲಿದೆ ಎಂದರು.
ಆಹಾರ ಧಾನ್ಯಗಳನ್ನು ಪ್ಯಾಕ್ ಮಾಡಲು ಸೆಣಬಿನ ಚೀಲಗಳ ಇಂಡೆಂಟ್‌ಗಳ ಪೈಕಿ ಶೇ.10ರಷ್ಟನ್ನು ಜೆಮ್ ಪೋರ್ಟಲ್‌ನಲ್ಲಿ ರಿವರ್ಸ್ ಹರಾಜು ಹಾಕಲಾಗುವುದು. ಇದಕ್ಕಾಗಿ ಸೆಣಬಿನ ಪ್ಯಾಕೇಜಿಂಗ್ ವಸ್ತು(ಜೆಪಿಎಂ) ಕಾಯ್ದೆ, 1987 ರ ಅಡಿಯಲ್ಲಿ ಕಡ್ಡಾಯ ಪ್ಯಾಕೇಜಿಂಗ್ ಮಾನದಂಡಗಳ ವ್ಯಾಪ್ತಿಯನ್ನು ಸರ್ಕಾರ ವಿಸ್ತರಿಸಿದೆ ಎಂದರು.
ಸೆಣಬಿನ ಪ್ಯಾಕೇಜಿಂಗ್ ಸಾಮಗ್ರಿಗಳ ಪೂರೈಕೆಯಲ್ಲಿ ಕೊರತೆ ಉಂಟಾದಲ್ಲಿ, ಜವಳಿ ಸಚಿವಾಲಯ ಸಂಬಂಧಪಟ್ಟ ಬಳಕೆದಾರ ಸಚಿವಾಲಯಗಳೊಂದಿಗೆ ಸಮಾಲೋಚಿಸಿ, ಈ ನಿಬಂಧನೆಗಳನ್ನು ಸಡಿಸಲು ಈ ನಿಯಮ ಅನುಮತಿ ನೀಡುತ್ತದೆ.
ಸೆಣಬು ವಲಯವನ್ನು ಅವಲಂಬಿಸಿ ಸುಮಾರು 3.7 ಲಕ್ಷ ಕಾರ್ಮಿಕರು ಮತ್ತು ಹಲವಾರು ಲಕ್ಷ ಕೃಷಿ ಕುಟುಂಬಗಳು ಜೀವನ ನಡೆಸುತ್ತಿದ್ದಾರೆ. ಅವರಿಗೆ ನೆರವಾಗುವ ಸಲುವಾಗಿ ಕಚ್ಚಾ ಸೆಣಬಿನ ಗುಣಮಟ್ಟ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದು, ಸೆಣಬಿನ ಉತ್ಪನ್ನಗಳಿಗೆ ಬೇಡಿಕೆಯನ್ನು ಹೆಚ್ಚಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳಲಿದೆ ಎಂದರು.
ಈ ಯೋಜನೆ ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ, ಅಸ್ಸಾಂ, ಆಂಧ್ರಪ್ರದೇಶ, ಮೇಘಾಲಯ ಮತ್ತು ತ್ರಿಪುರ ರಾಜ್ಯಗಳಲ್ಲಿರುವ ರೈತರು ಮತ್ತು ಕಾರ್ಮಿಕರಿಗೆ ಲಾಭ ತಂದುಕೊಡಲಿದೆ.ಸದ್ಯ ಸೆಣಬಿನ ಉದ್ಯಮ ಸರ್ಕಾರಿ ವಲಯದ ಮೇಲೆ ಅವಲಂಬಿತವಾಗಿದ್ದು, ಆಹಾರ ಧಾನ್ಯಗಳನ್ನು ಪ್ಯಾಕ್ ಮಾಡಲು ಪ್ರತಿವರ್ಷ 7,500 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಸೆಣಬಿನ ಚೀಲಗಳನ್ನು ಖರೀದಿಸುತ್ತದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!