New Delhi

ಡ್ಯಾಮ್‌ ಪುನರ್ವಸತಿ ಮತ್ತು ಸುಧಾರಣಾ ಯೋಜನೆ-ಎರಡು ಮತ್ತು ಮೂರನೇ ಹಂತಕ್ಕೆ ಸಂಪುಟ ಅನುಮೋದನೆ

ಹೊಸದಿಲ್ಲಿ, ೨೯- ದೇಶದಾದ್ಯಂತ ಆಯ್ದ ಅಣೆಕಟ್ಟುಗಳ ಸುರಕ್ಷತೆ ಮತ್ತು ಕಾರ್ಯಾಚರಣೆಯ ಕಾರ್ಯಕ್ಷಮತೆ ಸುಧಾರಿಸಲು ಅಣೆಕಟ್ಟು ಪುನರ್ವಸತಿ ಮತ್ತು ಸುಧಾರಣಾ ಯೋಜನೆ (ಡಿಆರ್‌ಪಿ) ಹಂತ II ಮತ್ತು ಮೂರನೇ ಹಂತದ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ ಗುರುವಾರ ಅನುಮೋದನೆ ನೀಡಿತು.
ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ವಿಶ್ವ ಬ್ಯಾಂಕ್ (ಡಬ್ಲ್ಯುಬಿ) ಮತ್ತು ಏಷ್ಯನ್ ಮೂಲಭೂತ ಸೌಕರ್ಯಗಳ ಹೂಡಿಕೆ ಬ್ಯಾಂಕ್ (ಎಐಐಬಿ) ಹಣಕಾಸಿನ ನೆರವಿನೊಂದಿಗೆ 10,211 ಕೋಟಿ ರೂ. ವೆಚ್ಚದ ಅಣೆಕಟ್ಟು ಪುನರ್ವಸತಿ ಮತ್ತು ಸುಧಾರಣಾ ಯೋಜನೆ (ಡಿಆರ್‌ಐಪಿ) ಹಂತ II ಮತ್ತು ಮೂರನೇ ಹಂತಗಳನ್ನು ಜಾರಿಗೆ ತರಲಾಗುವುದು. ಇದನ್ನು ಸಿಸ್ಟಮ್ ವೈಡ್ ಮ್ಯಾನೇಜ್ಮೆಂಟ್ ವಿಧಾನದೊಂದಿಗೆ ಜಾರಿಗೊಳಿಸಲಾಗುವುದು ಎಂದರು.
ಈ ಯೋಜನೆ 2021 ರ ಏಪ್ರಿಲ್‌ನಿಂದ 2031 ರ ಮಾರ್ಚ್‌ವರೆಗೆ ಎರಡು ವರ್ಷಗಳ ಹೆಚ್ಚುವರಿ ಅವಧಿಯೊಂದಿಗೆ 10 ವರ್ಷಗಳ ಅವಧಿಯಲ್ಲಿ ಕಾರ್ಯಗತಗೊಳಿಸಲಾಗುವುದು. ಪ್ರತಿ ಹಂತಕ್ಕೆ ಆರು ವರ್ಷಗಳನ್ನು ನಿಗದಿಪಡಿಸಲಾಗಿದೆ ಎಂದರು.
ಒಟ್ಟು ಯೋಜನೆಯ ವೆಚ್ಚದ ಬಾಹ್ಯ ಹಣಕಾಸಿನ ನೆರವು 7 ಸಾವಿರ ಕೋಟಿ ರೂ.ಗಳಾಗಿವೆ. ಬಾಕಿ 3,211 ಕೋಟಿ ರೂ.ಗಳನ್ನು ಸಂಬಂಧಪಟ್ಟ ಜಾರಿಗೊಳಿಸುವ ಏಜೆನ್ಸಿಗಳು (ಐಎ) ಭರಿಸಲಿವೆ. ಕೇಂದ್ರ ಸರ್ಕಾರ 1,024 ಕೋಟಿ ರೂ. ಸಾಲದ ಹೊಣೆಗಾರಿಕೆ ಮತ್ತು ಕೇಂದ್ರ ಘಟಕಕ್ಕೆ 285 ಕೋಟಿ ರೂ.ಪ್ರತಿ-ಭಾಗ ನಿಧಿ ಭರಿಸಲಿದೆ.
ಡಿಆರ್‌ಐಪಿ ಎರಡು ಹಾಗೂ ಮೂರನೇ ಹಂತಗಳು ಯೋಜನೆಯಲ್ಲಿ ಭಾಗವಹಿಸುವ ರಾಜ್ಯಗಳಲ್ಲಿ ಅಣೆಕಟ್ಟು ಸುರಕ್ಷತಾ ಸಾಂಸ್ಥಿಕ ಸೆಟಪ್ ಅನ್ನು ಬಲಪಡಿಸಲು ಅಸ್ತಿತ್ವದಲ್ಲಿರುವ ಆಯ್ದ ಅಣೆಕಟ್ಟುಗಳ ಸುರಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸುವ ಗುರಿ ಹೊಂದಿವೆ.
ಈ ಯೋಜನೆ ಆಂಧ್ರಪ್ರದೇಶ, ಛತ್ತೀಸಗಡ, ಗೋವಾ, ಗುಜರಾತ, ಜಾರ್ಖಂಡ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಒಡಿಶಾ, ಪಂಜಾಬ್‌, ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ 736 ಅಣೆಕಟ್ಟುಗಳ ಸಮಗ್ರ ಪುನರ್ವಸತಿ ಯೋಜನೆಯನ್ನು ಒಳಗೊಂಡಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!