Sawadatti

ರಾಜ್ಯ ಸಾರಿಗೆ ಇಲಾಖೆ 3000 ಕೋಟಿ ರೂಪಾಯಿ ನಷ್ಟದಲ್ಲಿದೆ -ಸವದಿ

ಸವದತ್ತಿ, ೨೭- ಕೊರೋನಾ ಸೋಂಕಿನ ಭೀತಿಯಲ್ಲಿ ಜನ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಲು ಹಿಂಜರಿಯುತ್ತಿದ್ದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ 3000 ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿದೆ. ರಾಜ್ಯ ಸರಕಾರ ವಿದ್ಯಾರ್ಥಿ ಪಾಸ್ ಸೌಲಭ್ಯದ 2960 ಕೋಟಿ ರೂಪಾಯಿ ಶೀಘ್ರ ನೀಡಿದರೆ ಸಂಸ್ಥೆ ಉಸಿರಾಡಬಹುದು ಎಂದು ಸಾರಿಗೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಸವದತ್ತಿಯಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಹೈಟೆಕ್ ಬಸ್ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ನಂತರ ಮಾಮನಿ ಕಲ್ಯಾಣ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದ ಅವರು ಕೋವಿಡ್-೧೯ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ನಾಲ್ಕೂ ಸಾರಿಗೆ ನಿಗಮಗಳು ಹಾನಿಯಲ್ಲಿದ್ದು, ಬಿಎಮ್‌ಟಿಸಿ ಒಂದರಿಂದಲೇ ಪ್ರತಿ ದಿನ ೧.೧೭ಕೋಟಿ ರೂ.ಗಳ ಹಾನಿಯನ್ನು ಅನುಭವಿಸಲಾಗುತ್ತಿದೆ ಎಂದರು.

ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ರಾಜ್ಯಾದ್ಯಂತ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸಾರಿಗೆ ನೌಕರರ 6 ತಿಂಗಳ ಸಂಬಳವನ್ನು ಸರಕಾರವು ಭರಿಸಿದ್ದು, ಮುಂದಿನ ಜನೆವರಿಯವರೆಗೆ ಸರಕಾರ ಸಾರಿಗೆ ನೌಕರರ ಹಿತ ಕಾಪಾಡುವ ನಿಟ್ಟಿನಲ್ಲಿ ಸಂಬಳಕ್ಕೆ ಅನುಕೂಲ ಕಲ್ಪಿಸಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿರುವದಾಗಿ ಹೇಳಿದರು.

೨೦೧೪ರಿಂದ ಡಿಸೈಲ್ ಮತ್ತು ಉಪಕರಣಗಳ ದರಗಳು ಹೆಚ್ಚುತ್ತಾ ಹೋಗಿದ್ದರೂ ಪ್ರಯಾಣಿಕರ ದರವನ್ನು ಹೆಚ್ಚಿಸದೆ ಸಾರಿಗೆ ಸಂಸ್ಥೆ ಯತಾಸ್ಥಿತಿಯನ್ನು ಕಾಪಾಡಿಕೊಂಡು ಬಂದಿದೆ. ಬಡವರ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲ ಕಲ್ಪಿಸಲು ಸಾರಿಗೆ ಸಂಸ್ಥೆ ನಷ್ಟ ಅನುಭವಿಸಿದರೂ ಪ್ರಯಾಣ ದರದಲ್ಲಿ ವ್ಯತ್ಯಾಸವನ್ನು ಮಾಡಿಲ್ಲ. ಇತ್ತೀಚಿನ ದಿನಗಳಲ್ಲಿ ಸಾರಿಗೆ ಸಂಸ್ಥೆಯಲ್ಲಿ ಜನ ಸಂಚಾರ ಕಡಿಮೆಯಾಗುತ್ತಿದ್ದು, ಬರುವ ಆದಾಯದಲ್ಲಿ ಡಿಸೈಲ್‌ಗೆ ಹಣ ಸರಿದೂಗುತ್ತಿಲ್ಲ ಎಂದರು.

ಸವದತ್ತಿ ತಾಲೂಕಿನ ಶ್ರೀ ಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಾರಿಗೆ ಇಲಾಖೆಯಿಂದ ಸೋಲಾರ ಅಳವಡಿಕೆಯ ಆಧುನಿಕ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ಹಳೆಯ ಬಸ್‌ಗಳನ್ನು ಬಳಸಿಕೊಂಡು ಪುರುಷರಿಗೆ ಮತ್ತು ಮಹಿಳೆಯರಿಗೆ ಎಲ್ಲ ಸೌಲಭ್ಯಗಳುಳ್ಳ ತಲಾ ಎರಡು ಸಂಚಾರಿ ಶೌಚಾಲಯಗಳನ್ನು ನೀಡಲಾಗುತ್ತಿದೆ ಎಂದರು.

Leave a Reply

Your email address will not be published. Required fields are marked *

Back to top button
error: Content is protected !!