Gokak

ಪ್ರಕಾಶ ಹುಕ್ಕೇರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ “ಪ್ರವೇಶವಿಲ್ಲ” -ಸತೀಶ ಜಾರಕಿಹೊಳಿ

ಗೋಕಾಕ, ೨೭- ಪಕ್ಷದ ಹಿರಿಯ ಮುಖಂಡರಾಗಿರುವ ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಅವರು ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ದಿವಂಗತ ಸುರೇಶ ಅಂಗಡಿ ಕುಟುಂಬ ಬೆಂಬಲಿಸುವ ಕುರಿತು ತೆಗೆದುಕೊಳ್ಳಬೇಕಾದ ಕ್ರಮದ ಕುರಿತು ಪಕ್ಷದ ಪ್ರಮುಖರು ನಿರ್ಧರಿಸುತ್ತಾರೆ, ಆದರೆ ಅವರು ಬೆಳಗಾವಿಯಿಂದ ಕಾಂಗ್ರೆಸ್ ನಿಂದ ಸ್ಪರ್ಧಿಸುವದಕ್ಕೆ ಅವಕಾಶವೇ ಇಲ್ಲ. ಅವರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದ ರಾಜಕಾರಣದಲ್ಲಿ ನೋ ಎಂಟ್ರಿ, ಏನಿದ್ದರೂ ಚಿಕ್ಕೋಡಿ ಲೋಕಸಭಾ ಕ್ಷೇತ್ರವನ್ನು ಅವರು ನೋಡಿಕೊಳ್ಳಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, “ದಿ ಅಂಗಡಿ ಕುಟುಂಬಕ್ಕೇ ಬಿಜೆಪಿ ಟಿಕೆಟ್ ನೀಡಬೇಕು, ಹಾಗಾದರೆ ಕಾಂಗ್ರೆಸ್ ನಲ್ಲಿದ್ದೂ ಅವರನ್ನು ಗೆಲ್ಲಿಸಿಕೊಂಡು ಬರುವೆ. ಟಿಕೆಟ್ ಕೊಡದಿದ್ದರೆ ನಾನು ಕಾಂಗ್ರೇಸ್ ಇಲ್ಲವೇ ಟಿಕೆಟ್ ಕೊಡುವ ಯಾವುದೇ ಪಕ್ಷದಿಂದ ಸ್ಪರ್ಧಿಸುವೆ” ಎಂದು ಹುಕ್ಕೇರಿ ನೀಡಿದ್ದ ಹೇಳಿಕೆಗೆ ಇಂದು ಮತ್ತೊಮ್ಮೆ ಪ್ರತಿಕ್ರಿಯಿಸಿರುವ ಜಾರಕಿಹೊಳಿ, ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪರವಾಗಿ ಸ್ಪರ್ಧಿಸಲು ತುಂಬಾ ಅಭ್ಯರ್ಥಿಗಳಿದ್ದಾರೆ. ಪ್ರಕಾಶ ಹುಕ್ಕೇರಿಯವರು ಬೇಕಿದ್ದರೆ ಚಿಕ್ಕೋಡಿ ಕ್ಷೇತ್ರದಲ್ಲಿಯೇ ಮತ್ತೊಮ್ಮೆ ಪ್ರಯತ್ನಿಸಲಿ ಎಂದು ಹೇಳಿದರು.

ಚಿಕ್ಕೋಡಿ ಕ್ಷೇತ್ರ ಹುಕ್ಕೇರಿಯವರಿಗೆ ಮೀಸಲಿಟ್ಟಿದ್ದು, ಕಳೆದ ಚುನಾವಣೆಯಲ್ಲಿ ಸೋತಿರುವ ಅವರಿಗೆ ಅಲ್ಲಿ ಹಿಡಿತ ಸಾಧಿಸಲು ಇನ್ನು ಮೂರು ವರ್ಷ ಸಮಯವಿದೆ. ಅದಷ್ಟರಲ್ಲಿ ಗಟ್ಟಿ ಮಾಡಿಕೊಂಡು ಕುಸ್ತಿಗೆ ಮತ್ತೊಮ್ಮೆ ರೆಡಿಯಾಗಲಿ ಎಂದರು.

ಒಂದು ಪಕ್ಷದಲ್ಲಿ ಇದ್ದುಕೊಂಡು ಮತ್ತೊಂದು ಪಕ್ಷಕ್ಕೆ ಬೆಂಬಲ ಮಾಡುವುದು ಸರಿಯಲ್ಲ. ಹಿರಿಯ ಮುಖಂಡರಾಗಿರುವ ಹುಕ್ಕೇರಿ ಅವರು, ಜಿಲ್ಲಾ ಪಂಚಾಯಿತಿಯಿಂದ ಹಿಡಿದು ಎಲ್ಲ ಹುದ್ದೆಗಳನ್ನು ಅನುಭವಿಸಿದ್ದಾರೆ. ಇನ್ನೊಂದು ಪಕ್ಷಕ್ಕೆ ಬೆಂಬಲ ಮಾಡುವುದಾಗಿ ಹೇಳಿರುವುದು ನಿಜಕ್ಕೂ ಆಶ್ಚರ್ಯವಾಗಿದೆ. ಹೈಕಮಾಂಡ್ ಕೂಡ ಇದನ್ನು ಗಮನಿಸಿರುತ್ತದೆ ಎಂದು ಹೇಳಿದರು.

Leave a Reply

Your email address will not be published. Required fields are marked *

Back to top button
error: Content is protected !!