Editorial

ಹಬ್ಬ ಮತ್ತು ಉಪವಾಸ

ಹಬ್ಬಕ್ಕೂ ಉಪವಾಸಕ್ಕೂ ಎಲ್ಲಿಂದೆಲ್ಲಿಯ ಸಂಬಂಧ ಎಂದು ಯಾರಾದರೂ ಕೇಳಬಹುದು. ಹಬ್ಬ ಎಂದರೇ ಭೂರಿ ಭೋಜನ ಎಂಬುದು ಸರ್ವವಿಧಿತ. ಆದರೂ ಕೆಲವೊಂದು ಕಾರಣಗಳಿಗಾಗಿ ಎಲ್ಲ ಧರ್ಮಗಳಲ್ಲೂ ಉಪವಾಸ ಆಚರಣೆ ನಡೆದುಕೊಂಡು ಬಂದಿದೆ.

ಹಿಂದೂ ಆಚಾರವಂತರ ಮನೆಗಳಲ್ಲಿ ಏಕಾದಶಿ ಉಪವಾಸ ಆಚರಣೆ ಇರುತ್ತದೆ. ಹೀಗಾಗಿ ಅವರು ವರ್ಷದಲ್ಲಿ ಸುಮಾರು 28 ದಿನ ಉಪವಾಸ ಮಾಡಿದಂತಾಗುತ್ತದೆ. ಇಸ್ಲಾಂ ಧರ್ಮದಲ್ಲಿಯೂ ಸುಮಾರು ಇಷ್ಟೇ ಅವಧಿಯ ಉಪವಾಸ ವ್ರತವನ್ನು ಕೈಗೊಳ್ಳುವ ಸಂಪ್ರದಾಯ ಇದೆ. ಕ್ರಿಶ್ಚಿಯನ್ ಮತ್ತು ಯಹೂದಿ ಧರ್ಮಗಳಲ್ಲಿಯೂ ವಿಶೇಷ ಸಂದರ್ಭಗಳಲ್ಲಿ ಉಪವಾಸ ಆಚರಿಸುವ ಕ್ರಮ ಇದೆ. ಇದಲ್ಲದೇ ವಾರದ ನಿರ್ದಿಷ್ಟ ದಿನದಂದು ಉಪವಾಸ ನಡೆಸುವ ಹಿಂದೂ ಸಂಪ್ರದಾಯಸ್ಥರೂ ಇದ್ದಾರೆ. ಒಟ್ಟಿನಲ್ಲಿ ಹಬ್ಬದ ಹಾಗೇ ಉಪವಾಸ ಕೂಡ ಬಹುಮುಖ್ಯ ಆಚರಣೆ ಎನ್ನುವುದು ನಿಜ.

ಹಬ್ಬದ ಸಮಯದಲ್ಲಿ ಉಪವಾಸ ಆಚರಣೆ ಮಾಡುವ ಕ್ರಮ ಉತ್ತರ ಭಾರತದಲ್ಲಿ ಪ್ರಚಲಿತವಿದೆ. ನಮ್ಮಲ್ಲಿ ಸಾಮಾನ್ಯವಾಗಿ ದಸರಾ ಎಂದರೆ ಪೂರ್ವಜರ ಸ್ಮರಣೆ, ಅವರ ಋಣ ಸಂದಾಯಕ್ಕೆ ಕೆಲವು ಕರ್ಮಗಳನ್ನು ನಡೆಸುವುದು ವಾಡಿಕೆ. ಹಾಗೇ ಇದರ ಜೊತೆಗೇ ಮಹಾಲಯ ಅಮಾವಾಸ್ಯೆ ನಂತರ ನವದುರ್ಗಾ ಪೂಜೆಗೆ ತೊಡಗುವ ಸಂಪ್ರದಾಯ ಹಳೆ ಮೈಸೂರು ಭಾಗದಲ್ಲಿ ಇದೆ. ಅದು ಬೊಂಬೆಗಳ ಹಬ್ಬ ಕೂಡ. ಅದೇ ಉತ್ತರ ಕರ್ನಾಟಕದಲ್ಲಿ ನವರಾತ್ರಿಯ ಒಂಭತ್ತು ದಿನಗಳ ಕಾಲ ನಿರಂತರ ಜ್ಯೋತಿ ಬೆಳಗಿಸುವ ಆಚರಣೆ ಇದೆ. ಇದು ಅವರವರ ಪೂರ್ವಜರ ಸ್ಮರಣೆಗೆ ಮತ್ತು ಆ ಸಂದರ್ಭದಲ್ಲಿ ಅವಸಾನ ಹೊಂದಿದ ವಂಶದ ಪೂರ್ವಜರು ಭೇಟಿ ನೀಡಿ ತಮ್ಮನ್ನು ಹರಸುತ್ತಾರೆ ಎಂಬ ನಂಬಿಕೆ ಇದೆ.

ಉತ್ತರ ಭಾರತದ ಹಲವು ಕಡೆ ಶರನ್ನವರಾತ್ರಿ ವೇಳೆ ಉಪವಾಸ ವ್ರತದ ಜೊತೆಗೇ ನವ ದುರ್ಗೆಯರ ಪೂಜೆ ಇಲ್ಲವಾದಲ್ಲಿ ದುರ್ಗಾ ಪೂಜೆ ಕೈಗೊಳ್ಳುವುದು ಸಂಪ್ರದಾಯ. ಬಂಗಾಳದಲ್ಲಿ ದುರ್ಗಾ ಪೂಜೆ ಸಂಭ್ರಮದ ಆಚರಣೆ. ನಾವಿಲ್ಲಿ ಗಣೇಶನ ವಿಗ್ರಹ ಬೀದಿ ಬೀದಿಯಲ್ಲಿ ಮಂಟಪ ಮಾಡಿ ಕೂರಿಸಿ ಪೂಜಿಸುವ ಹಾಗೆ ಅಲ್ಲಿ ದುರ್ಗಾ ವಿಗ್ರಹಗಳನ್ನು ಸ್ಥಾಪಿಸಿ, ಒಂಭತ್ತು ದಿನ ಪೂಜೆ ಮಾಡಿ ಅನಂತರ ನೀರಿಗೆ ವಿಸರ್ಜನೆ ಮಾಡಲಾಗುತ್ತದೆ. ಆದರೆ ಉತ್ತರ ಭಾರತದ ಬಹಳಷ್ಟು ಭಾಗಗಳಲ್ಲಿ ‘ರಾಮಲೀಲಾ’ ಆಡುವ ಸಂಪ್ರದಾಯ ಕಾಣುತ್ತದೆ. ವಿಜಯ ದಶಮಿ ದಿನ ಶ್ರೀರಾಮ ರಾವಣನನ್ನು ಕೊಂದ ನೆನಪಿಗೆ ಮತ್ತು ದುಷ್ಟ ಶಕ್ತಿಯ ಎದುರು ಒಳ್ಳೆಯ ಶಕ್ತಿ ಗೆಲುವು ಪಡೆದ ಸ್ಮರಣೆಗೆ ಈ ಪ್ರದರ್ಶನ. ಹಲವೆಡೆ ಅಲ್ಲಿ ಒಂಭತ್ತು ದಿನವೂ ಹಗಲು ಉಪವಾಸ ಮಾಡಿ, ರಾತ್ರಿ ದೇವರ ಪೂಜೆ ಮುಗಿಸಿದ ನಂತರ ಆಹಾರ ಸೇವಿಸುವುದು ಒಂದು ಕ್ರಮ.

ಈ ಮಾದರಿಯನ್ನು ಕಟ್ಟುನಿಟ್ಟಾಗಿ ಭಾರತದ ಪಶ್ಚಿಮ ಭಾಗದ ಗುಜರಾತ, ರಾಜಸ್ಥಾನ ಮತ್ತು ಭಾಗಶಃ ಮಹಾರಾಷ್ಟ್ರದಲ್ಲಿ ಆಚರಿಸಲಾಗುತ್ತದೆ. ದಸರಾ ಸಮಯದಲ್ಲಿ ಹಗಲಿನಲ್ಲಿ ಉಪವಾಸ ಇರುವುದು ಮತ್ತು ದೇವರ ಪೂಜೆ ನಂತರ ಕೇವಲ ಸಾತ್ವಿಕ ಆಹಾರ ಸೇವಿಸುವ ಕ್ರಮ ಅಲ್ಲೆಲ್ಲ ಜಾರಿಯಲ್ಲಿ ಇರುತ್ತದೆ. ಇಂಥ ವ್ರತದ ಸಮಯಕ್ಕೆ ತಯಾರಿಸುವ ಅಡುಗೆಗಳ ಪಟ್ಟಿಯೇ ಒಂದು ಇರುತ್ತದೆ. ನಾವು ಹೇಗೆ ಗಣೇಶನ ಹಬ್ಬಕ್ಕೆ ಮೋದಕ, ಉಗಾದಿಯಂದು ಹೋಳಿಗೆ ಎಂದು ನಿಗದಿ ಮಾಡಿಕೊಂಡ ಹಾಗೆ ಅಲ್ಲಿ ವ್ರತ ಆಚರಿಸುವ ಸಂದರ್ಭದಲ್ಲಿ ತಯಾರಿಸಬಹುದಾದ ನೈವೇದ್ಯ ಹೀಗೆಯೇ ಇರಬೇಕು ಎಂಬ ಕಟ್ಟುಪಾಡು ಇರುತ್ತದೆ. ಮುಖ್ಯವಾಗಿ ಈರುಳ್ಳಿ, ಬೆಳ್ಳುಳ್ಳಿ ಬಳಸುವಂತಿಲ್ಲ. ಗೋಧಿ ಮತ್ತು ಸಾಬೂದಾನಾದಿಂದ ತಯಾರಾದ ಖಾದ್ಯಗಳಾದರೆ ಒಳ್ಳೆಯದು ಎಂಬುದು ಸರ್ವಸಮ್ಮತ ಅಭಿಪ್ರಾಯ.

ಈ ಆಚರಣೆಯನ್ನು ಕಟ್ಟುನಿಟ್ಟಾಗಿ ಆಚರಿಸುವ ಗುಜರಾತ್‍ನಲ್ಲಿ ಮತ್ತೊಂದು ವಿಶೇಷ ಎಂದರೆ ದಾಂಡಿಯಾ ರಾಸ್. ಇದನ್ನು ಗರ್ಭಾ ರಾಸ್ ಎಂದೂ ಕರೆಯುತ್ತಾರೆ. ಭಾರತದ ಬಹುಪಾಲು ಕಡೆ ದಸರಾ ರಾಮ ಮತ್ತು ನವ ದುರ್ಗೆಯರಿಗೆ ಸಂಬಂಧಿಸಿದ ಹಬ್ಬವಾದರೆ, ಇಲ್ಲಿ ಮಾತ್ರ ಅದು ಕೃಷ್ಣ ಮತ್ತು ಆತನ ಸಂಗಡಿಗರು ಸೇರಿ ನಡೆಸುತ್ತಿದ್ದ ನೃತ್ಯಕ್ಕೆ ಆದ್ಯತೆ. ಇಡೀ ರಾತ್ರಿ ನಡೆಯುವ ಈ ನೃತ್ಯ ಕಾರ್ಯಕ್ರಮಗಳಿಗೆ ಬಹು ಬೆಲೆಯ ಟಿಕೇಟ್ ಖರೀದಿಸಿ ತೆರಳಬೇಕು. ಈ ಸಂದರ್ಭದಲ್ಲಿ ಹಾಡುವ ಗಾಯಕರಿಗೆ ವಿಶೇಷ ಆದ್ಯತೆ ಮತ್ತು ಅತಿ ಹೆಚ್ಚಿನ ಬೇಡಿಕೆ ಇರುತ್ತದೆ. ಈ ದಸರಾ ಮಂಟಪಗಳ ನೃತ್ಯ ಪ್ರದರ್ಶನಕ್ಕೆ ಹೆಸರಾಂತ ವ್ಯಕ್ತಿಗಳನ್ನು ಕರೆಸಲಾಗುತ್ತದೆ. ಅಲ್ಲಿ ಒಂದೆಡೆ ಗಾಯನ ನಡೆಯುತ್ತಿದ್ದರೆ ಮತ್ತೊಂದೆಡೆ ಯುವಕ ಯುವತಿಯರು ದಾಂಡಿಯಾ ನೃತ್ಯದಲ್ಲಿ ಮಗ್ನರಾಗಿರುತ್ತಾರೆ. ಅಂಥ ನೃತ್ಯ ಮಾಡಲು ಅವರು ಮೊದಲಿನ ಕೆಲವು ತಿಂಗಳು ಅಥವಾ ದಿನಗಳು ನೃತ್ಯ ಗುರುಗಳಿಂದ ತರಬೇತಿ ಕೂಡ ಪಡೆಯುತ್ತಾರೆ.

ಹೀಗೆ ಉಪವಾಸ ಒಂದೆಡೆಯಾದರೆ ದೇಹಕ್ಕೆ ಉಲ್ಲಾಸ ಮತ್ತು ಆಯಾಸ ಎರಡನ್ನೂ ತರುವ ನೃತ್ಯ ಇನ್ನೊಂದೆಡೆ. ಆದರೆ ಆಚಾರವಂತ ಕುಟುಂಬಗಳು ಈ ಭಾಗದಲ್ಲಿ ಈಗಲೂ ದಸರಾ ಸಮಯದ ಒಂಭತ್ತು ದಿನಗಳ ಕಾಲ ಹಗಲಿಡೀ ಉಪವಾಸ ಮಾಡುವುದನ್ನು ಮಾತ್ರ ತಪ್ಪಿಸುವುದಿಲ್ಲ. ಮನುಷ್ಯ ನಿತ್ಯ ಸೇವಿಸುವ ಆಹಾರದಿಂದ ಕೆಲವು ಕಾಲ ಬಿಡುವು ಪಡೆಯುವುದು ಮತ್ತು ಸಾತ್ವಿಕ ಆಹಾರ ಸೇವಿಸುವುದು ದೇಹಾರೋಗ್ಯಕ್ಕೆ ಒಳ್ಳೆಯದು. ಹಾಗಾಗಿಯೇ ‘ಲಂಘನಂ ಪರಮೌಷಧಂ’ ಎನ್ನುವ ಉಕ್ತಿ ಹುಟ್ಟಿಕೊಂಡಿದೆ. ‘ಲಂಘನ’ ಎಂದರೆ ಉಪವಾಸ. ವೈದ್ಯರ ಈ ಸಲಹೆ ಕೇಳಿದ ಹೊಟ್ಟೆ ನೋವಿನಿಂದ ನರಳುತ್ತಿದ್ದ ವ್ಯಕ್ತಿಯೊಬ್ಬ ಇಲ್ಲಿಂದಲ್ಲಿಗೆ ಹಾರಲು ತೊಡಗಿದ. ಇದನ್ನು ಗಮನಿಸಿದ ವೈದ್ಯ, ಲಂಘನ ಎಂದರೆ ಏನು ಎಂದು ವಿವರಿಸಿ, ಮತ್ತಿಷ್ಟು ಅನಾಹುತ ಆಗುವುದನ್ನು ತಪ್ಪಿಸಿದ ಕತೆಯೂ ನಮ್ಮಲ್ಲಿ ಇದೆ.

ಸಾಮಾನ್ಯ ಜನರಿಗಿಂತ ವಿಭಿನ್ನವಾಗಿ ಬದುಕುವ ಯೋಗಿ, ಸನ್ಯಾಸಿಗಳು ಒಂದು ಹೊತ್ತು ಮಾತ್ರ ಊಟ ಮಾಡಬೇಕು ಎಂಬ ಕಟ್ಟುಪಾಡಿದೆ. ಅದರಿಂದಲೇ ‘ಒಂದು ಹೊತ್ತು ಉಂಡವ ಯೋಗಿ, ಎರಡು ಹೊತ್ತು ಉಂಡವ ಭೋಗಿ’ ಎನ್ನುವ ಮಾತು ಹುಟ್ಟಿಕೊಂಡಿತು. ಇದನ್ನು ಮೀರಿ ನಡೆದರೆ ಅನಾರೋಗ್ಯ ಕಟ್ಟಿಟ್ಟದ್ದು. ಆದರೂ ಚಪಲ ಮತ್ತು ಸಾಮಾಜಿಕ ಒತ್ತಡಗಳಿಂದಾಗಿ ಹೆಚ್ಚು ಬಾರಿ ಆಹಾರ ಸೇವನೆ ಅನಿವಾರ್ಯ. ಅದರಿಂದ ಆಗಬಹುದಾದ ಬಾಧೆ ತಪ್ಪಿಸಲು ಈ ಉಪವಾಸದ ಕ್ರಮ ಜಾರಿಗೆ ತಂದಿರಬಹುದು. ಅದೂ ಹಬ್ಬದ ಸಮಯದಲ್ಲಿ ಇಂಥ ಕಟ್ಟುನಿಟ್ಟು ಏಕೆಂದರೆ ಹಬ್ಬಗಳ ಸಾಲಿನ ದಿನಗಳಲ್ಲಿ ಸತತ ಹಬ್ಬದೂಟ ಉಂಡು ಮೈ ಕೆಡಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಹಾಗಾಗಿಯೇ ಹಬ್ಬದ ಜೊತೆಗೇ ಉಪವಾಸ ಕೂಡ ಮಾಡುವ ಪದ್ಧತಿ ಇರಬಹುದು.

Related Articles

Leave a Reply

Your email address will not be published. Required fields are marked *

Back to top button
error: Content is protected !!