Bengaluru

ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ಬಂಡವಾಳ ಆಕರ್ಷಿಸಿದ ರಾಜ್ಯ: ಯಡಿಯೂರಪ್ಪ

ಬೆಂಗಳೂರು, ಅ 22 – ಕೊರೋನಾ ಲಾಕ್ ಡೌನ್ ನಡುವೆಯೂ ರಾಜ್ಯದಲ್ಲಿ ಕೈಗಾರಿಕಾಭಿವೃದ್ಧಿಗೆ ಸಂಬಂಧಿಸಿದಂತೆ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದು, ಈ ಮೂಲಕ ರಾಜ್ಯದಲ್ಲಿ ಕೈಗಾರಿಕೆಗಳಿಗೆ ಪೂರಕ ವಾತಾವರಣ ನಿರ್ಮಿಸಿ ಹೆಚ್ಚು ಬಂಡವಾಳ ಆಕರ್ಷಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಪಬ್ಲಿಕ್ ಅಫೇರ್ ಆಫ್ ಇಂಡಿಯಾ (ಪಾಫಿ) ಸಹಯೋಗದಲ್ಲಿ ರಾಜ್ಯ ಸರ್ಕಾರ ಆಯೋಜಿಸಿದ್ದ ವೀಡಿಯೋ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಹೂಡಿಕೆಗೆ ವಿಪುಲ ಅವಕಾಶಗಳಿವೆ. ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಗಳು ಬಂಡವಾಳ ಹೂಡಲು ಮುಂದಾಗಬೇಕು. ಐಟಿ, ಐಟಿಇಎಸ್‌ ಸೇವೆಗಳು, ಮೆಷಿನ್‌ ಟೂಲಿಂಗ್‌, ಉತ್ಪಾದನೆ, ಏರೋಸ್ಪೇಸ್, ಜೈವಿಕ ತಂತ್ರಜ್ಞಾನ, ಎಂಜನಿಯರಿಂಗ್‌ ವಿನ್ಯಾಸ ಸೇರಿದಂತೆ ಹಲವು ವಲಯಗಳಲ್ಲಿ ಹೂಡಿಕೆಗೆ ಉತ್ತಮ ಅವಕಾಶಗಳಿವೆ ಎಂದರು.

“ಫಾರ್ಚೂನ್ 500 ಕಂಪನಿಗಳ ಪೈಕಿ 400 ಕಂಪನಿಗಳು, ಸುಮಾರು 400 ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಗಳಿಗೆ ರಾಜ್ಯ ನೆಲೆಯಾಗಿದೆ. ಈ ವರ್ಷದ ಜೂನ್ ಗೆ ಕೊನೆಗೊಂಡ ಅವಧಿಯಲ್ಲಿ ರಾಜ್ಯ ವಿದೇಶಿ ನೇರ ಹೂಡಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಉದ್ದಿಮೆದಾರರ ನೆಚ್ಚಿನ ತಾಣ ಎನಿಸಿಕೊಂಡಿದೆ,”ಎಂದು ತಿಳಿಸಿದರು.

“ಉದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ವಲಯಗಳಲ್ಲಿ ಪ್ರಬಲ ಸಾಮರ್ಥ್ಯ ಹೊಂದಿರುವ ರಾಜ್ಯ, ಜೈವಿಕ ತಂತ್ರಜ್ಞಾನ, ಆರೋಗ್ಯ ರಕ್ಷಣೆ, ಸೆಮಿಕಂಡಕ್ಟರ್‌, ಕೃಷಿ, ವಾಹನ ಮುಂತಾದ ನಾನಾ ಕ್ಷೇತ್ರಗಳನ್ನು ಉತ್ತೇಜಿಸಲು ‘ಉದ್ಯಮ ನಿರ್ದಿಷ್ಟ ನೀತಿ’ ಜಾರಿ ತರುವ ಮೂಲಕ ಉದ್ಯಮ ಸ್ನೇಹಿ ಆಡಳಿತ ವ್ಯವಸ್ಥೆ ರೂಪಿಸಿದೆ,” ಎಂದರು.

“ಕೈಗಾರಿಕೆಯಲ್ಲಿ ಮುಂದುವರಿದ ರಾಜ್ಯಗಳ ಪೈಕಿ ಒಂದಾಗಿರುವ ಕರ್ನಾಟಕ, ಸುಮಾರು 250 ಶತಕೋಟಿ ಡಾಲರ್ ಆರ್ಥಿಕತೆಯ ರಾಜ್ಯ ಪ್ರಬಲ ಆರ್ಥಿಕತೆಯಾಗಿ ಹೊರಹೊಮ್ಮುತ್ತಿದೆ. ಹಲವು ವಲಯಗಳಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ. ಯಂತ್ರೋಪಕರಣಗಳು, ಬೃಹತ್‌ ಯಂತ್ರೋಪಕರಣಗಳು, ವಾಹನಗಳು, ಎಲೆಕ್ಟ್ರಾನಿಕ್ಸ್, ಏರೋಸ್ಪೇಸ್ ಮತ್ತು ಡಿಫೆನ್ಸ್‌, ಜೈವಿಕ ತಂತ್ರಜ್ಞಾನದಂತಹ ಕೈಗಾರಿಕೆಗಳಲ್ಲಿ ಪ್ರಾಬಲ್ಯ ಸಾಧಿಸಿದೆ,” ಎಂದರು.

“ನೀತಿ ಆಯೋಗ ಬಿಡುಗಡೆ ಮಾಡುವ ಹೊಸ ಆವಿಷ್ಕಾರಗಳ ಸೂಚಿ 2019ರ ಪಟ್ಟಿಯಲ್ಲಿ ನಮ್ಮ ರಾಜ್ಯ ಅಗ್ರ ಸ್ಥಾನ ಪಡೆದಿದೆ. ನುರಿತ ಮಾನವ ಸಂಪನ್ಮೂ, ಹೆಸರಾಂತ ಉನ್ನತ ಶಿಕ್ಷಣ ಸಂಸ್ಥೆಗಳು, ಪ್ರಮುಖ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು, ಉತ್ತಮ ಆಡಳಿತ ಹಾಗೂ ಹೂಡಿಕೆಗೆ ಪೂರಕ ವಾತಾವರಣದಿಂದಾಗಿ ರಾಜ್ಯ ಅಗ್ರ ಸ್ಥಾನ ಪಡೆಯಲು ಸಾಧ್ಯವಾಗಿದೆ,”ಎಂದು ಮುಖ್ಯಮಂತ್ರಿ ಹೇಳಿದರು.

ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಸಚಿವ ಜಗದೀಶ ಶೆಟ್ಟರ್‌ ಮಾತನಾಡಿ, “ಹೂಡಿಕೆದಾರರನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ, ಹೊಸ ಕೈಗಾರಿಕಾ ನೀತಿ 2020-2025 ಪರಿಚಯಿಸಿದೆ ರಾಜ್ಯವನ್ನು ಪ್ರಗತಿ ಪಥದಲ್ಲಿ . ಕೊಂಡೊಯ್ಯುವ ಜತೆಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಗೆ ಹೊಸ ನೀತಿ ನೆರವಾಗಲಿದೆ. ಉದ್ದಿಮೆಗೆ ಪೂರಕವಾದ ಭತ್ಯೆ ಸೇರಿದಂತೆ ಭೂ ಲಭ್ಯತೆ, ಕಾರ್ಮಿಕ ಕಾನೂನಿನ ಸುಧಾರಣೆಯನ್ನು ಈ ನೀತಿ ಒಳಗೊಂಡಿದೆ. ಈ ಎಲ್ಲ ಪೂರಕ ಕ್ರಮಗಳ ಮೂಲಕ ಆರ್ಥಿಕ ಮತ್ತು ಕೈಗಾರಿಕಾ ಅಭಿವೃದ್ಧಿಯನ್ನು ಉತ್ತೇಜಿಸುವುದು ನಮ್ಮ ಸರ್ಕಾರದ ಮೊದಲ ಆದ್ಯತೆ,” ಎಂದು ಹೇಳಿದರು.

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ -ಗೌರವ ಗುಪ್ತ ಮಾತನಾಡಿ, ಪ್ರಸ್ತುತ ಸನ್ನಿವೇಶ ಸದೃಢ ವ್ಯವಸ್ಥೆ ನಿರ್ಮಾಣದ ಮಹತ್ವ ತಿಳಿಸಿಕೊಟ್ಟಿದೆ. ಕೈಗಾರಿಕೆಯಲ್ಲಿ ಮುಂಚೂಣಿ ಸಾಧಿಸಿರುವ ಕರ್ನಾಟಕ, ಸ್ಥಳೀಯ ಪೂರೈಕೆ ಸರಪಳಿಯನ್ನು ಬಲಪಡಿಸುವ ಜತೆಗೆ, ಸುಲಲಿತ ಕಾರ್ಯಾಚರಣೆಗೆ ಅನುವುಮಾಡಿಕೊಟ್ಟಿದೆ. ಕಡಿಮೆ ವೆಚ್ಚದಲ್ಲಿ ಸುಸ್ಥಿರ ಪರಿಹಾರಗಳನ್ನು ಕಂಡುಕೊಳ್ಳುವ ಮೂಲಕ ಸ್ಥಳೀಯ ಉದ್ದಿಮೆ ವ್ಯವಸ್ಥೆಗೆ ಒತ್ತು ನೀಡಲಾಗುವುದು.

Related Articles

Leave a Reply

Your email address will not be published. Required fields are marked *

Back to top button
error: Content is protected !!