Belagavi

ರಾಜ್ಯೋತ್ಸವದ ದಿನ ಕರವೇಯಿಂದಲೂ ಬೈಕ್ ರ್ಯಾಲಿ

ಬೆಳಗಾವಿ, ೨೨- ಮಹಾರಾಷ್ಟ್ರ ಏಕೀಕರಣ ಸಮಿತಿ ಕರ್ನಾಟಕ ರಾಜ್ಯೋತ್ಸವ ದಿನದಂದು ಕಪ್ಪುದಿನ ಆಚರಣೆಗೆ ಅನುಮತಿ ನೀಡಬಾರದು. ಕನ್ನಡಿಗರು ನಿರ್ಭೀತಿಯಿಂದ, ಸಂಭ್ರಮದಿಂದ ರಾಜ್ಯೋತ್ಸವ ಆಚರಿಸಲು ಅವಕಾಶ ಮಾಡಿಕೊಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಸರಕಾರವನ್ನು ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಎಚ್.ಎಸ್.ಸೋಂಪುರ, ಬೆಳಗಾವಿಯಲ್ಲಿ ಎಂಇಎಸ್‍ನವರು ಮತ್ತೆ ಬಾಲ ಬಿಚ್ಚುತ್ತಿದ್ದಾರೆ. ಸರಕಾರವಾಗಲಿ ಬೇರೆ ಯಾವುದೇ ರಾಜಕಾರಣಿಗಳೂ ಇದಕ್ಕೆ ಅವಕಾಶ ನೀಡಬಾರದು. ಕರಾಳ ದಿನಾಚರಣೆ, ಕಪ್ಪು ಬಾವುಟ ಪ್ರದರ್ಶನಕ್ಕೆ ಯತ್ನಿಸಿದರೆ ಎಂಇಎಸ್‍ಗೆ ಕರವೇ ಪಾಠ ಕಲಿಸಲಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಭೆ ನಡೆಸಿ ಕರವೇ ಕಾರ್ಯಕರ್ತರನ್ನು ಸಜ್ಜುಗೊಳಿಸಿದ್ದೇವೆ. ಕನ್ನಡ ನೆಲದಲ್ಲಿ ಇದ್ದುಕೊಂಡು ನಾಡಿಗೆ ದ್ರೋಹ ಬಗೆಯುವ ನೀತಿಯನ್ನು ಸಹಿಸುವುದಿಲ್ಲ ಎಂದರು.

ರಾಜ್ಯೋತ್ಸವದ ಅಂಗವಾಹಿ ಅಂದು ಸಂಘಟನೆಯು ಪೀರಣವಾಡಿಯಲ್ಲಿರುವ ಸಂಗೊಳ್ಳಿ ರಾಯಣ್ಣ ಪುತ್ತಳಿಯಿಂದ ರಾಣಿ ಚನ್ನಮ್ಮ ವೃತದವರೆಗೆ ಬೈಕ್ ರ್ಯಾಲಿ ನಡೆಸಲಿದೆ. ಸರ್ಕಾರದ ಎಲ್ಲ ಮಾರ್ಗಸೂಚಿಗಳನ್ನು ಅನುಸರಿಸಿ ಕಾರ್ಯಕ್ರಮ ನಡೆಸುತ್ತೇವೆ. ಸರ್ಕಾರ ಈ ಸಂಭ್ರಮಕ್ಕೆ ಎಲ್ಲ ಸಹಕಾರ ನೀಡಬೇಕು, ಅನುಮತಿಗೆ ದೊರೆಯದಿದ್ದರೂ ರ್ಯಾಲಿ ನಡೆದೇ ನಡೆಯುತ್ತದೆ ಎಂದರು.

ಎಂಇಎಸ್ ಸಂಘಟನೆಯ ಪುಂಡಾಟಿಕೆ ಕೊನೆಗೊಳಿಸಲು ರಾಜ್ಯ ಸರ್ಕಾರ ಕಠಿಣ ನಿಲುವು ತಳೆಯಬೇಕು. ರಾಜಕಾರಣ, ಮತ ಬ್ಯಾಂಕ್‍ಗಾಗಿ ಎಂಇಎಸ್‍ನಂತಹ ಸಂಘಟನೆಗಳೊಂದಿಗೆ ಒಳ ಒಪ್ಪಂದ ಮಾಡಿಕೊಳ್ಳುವುದನ್ನು ಕೈ ಬಿಡಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ದೀಪಕ ಗುಡಗನಟ್ಟಿ, ಸಂಘಟನೆ ಸದಸ್ಯರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!