Sports

ಯುವ ಆಟಗಾರರಿಗೆ ಅವಕಾಶ ನೀಡದ ಧೋನಿ ಮೇಲೆ ಶ್ರೀಕಾಂತ್‌ ಗರಂ

ಅಬುಧಾಬಿ, ಅ 20- ರಾಜಸ್ಥಾನ‌ ರಾಯಲ್ಸ್ ವಿರುದ್ಧ ಸೋಲು ಅನುಭವಿಸಿದ ಬೆನ್ನಲ್ಲೆ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿಯನ್ನು ಟೀಕಿಸಿದ ಭಾರತ ತಂಡದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ‌, ತಂಡದ ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಿದ್ದಾರೆ.

“ಎಂಎಸ್‌ ಧೋನಿ ಅವರ ಈ ಪ್ರಕ್ರಿಯೆಯನ್ನು ನಾನೆಂದೂ ಸ್ವೀಕರಿಸುವುದಿಲ್ಲ. ಈ ಪ್ರಕ್ರಿಯೆ ಕುರಿತು ಅವರು ಮಾತನಾಡುತ್ತಿರುವುದಕ್ಕೆ ಅರ್ಥವೇ ಇಲ್ಲ. ಪ್ರಕ್ರಿಯೆ..ಪ್ರಕ್ರಿಯೆ ಎಂದು ಸದಾ ಮಾತನಾಡುತ್ತಾರೆ, ಆದರೆ ಅವರ ಆಯ್ಕೆ ಪ್ರಕ್ರಿಯೆಯೇ ತಪ್ಪು,” ಎಂದು ಸ್ಟಾರ್‌ಸ್ಪೋರ್ಟ್ಸ್‌ ತಮಿಳು ವಾಹಿನಿಗೆ ಅವರು ತಿಳಿಸಿರುವುದನ್ನು ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ವರದಿ ಮಾಡಿದೆ.

ಸೋಮವಾರ ರಾಜಸ್ಥಾನ್‌ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್ 7 ವಿಕೆಟ್‌ಗಳ ಸೋಲು ಅನುಭವಿಸಿದ ಬಳಿಕ ಮಾತನಾಡಿದ್ದ ಎಂಎಸ್‌ ಧೋನಿ,”
ಯುವ ಆಟಗಾರರಿಗೆ ಕೆಲವು ಅವಕಾಶಗಳು ಇದ್ದವು. ನಾವು ನೀಡಿದ ಅವಕಾಶದಲ್ಲಿ ಯುವ ಆಟಗಾರರಲ್ಲಿ ಪಂದ್ಯ ಗೆಲ್ಲಿಸಿಕೊಡವಂಥ ಸಾಮರ್ಥ್ಯ ನಮಗೆ ಕಾಣಿಸಲಿಲ್ಲ. ಈ ಕಾರಣದಿಂದ ಅನುಭವಿ ಆಟಗಾರರಿಗೆ ಮಣೆ ಹಾಕಲಾಯಿತು. ಗುಂಪು ಹಂತದ ಪಂದ್ಯಗಳಲ್ಲಿ ಯುವ ಆಟಗಾರರಿಗೆ ಅವಕಾಶ ನೀಡಲಾಗಿತ್ತು. ಆದರೆ, ನಮ್ಮ ಪರ ಫಲಿತಾಂಶ ಮೂಡಿ ಬಂದಿರಲಿಲ್ಲ,” ಎಂದು ಧೋನಿ ಹೇಳಿದ್ದರು.

ಪ್ರಸಕ್ತ ಆವೃತ್ತಿಯಲ್ಲಿ ಯುವ ಆಟಗಾರರಾದ ನಾರಾಯಣ ಜಗದೀಸನ್‌ ಹಾಗೂ ಋತುರಾಜ್‌ ಗಾಯಕ್ವಾಡ್‌ ಅವರು ಕ್ರಮವಾಗಿ ಒಂದು ಮತ್ತು ಎರಡು ಪಂದ್ಯಗಳಾಡಿದ್ದಾರೆ. ರಾಯಲ್‌ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಜಗದೀಸನ್‌ 33 ರನ್‌ಗಳನ್ನು ಗಳಿಸಿದ್ದಾರೆ. ಮತ್ತೊಂದೆಡೆ ಗಾಯಕ್ವಾಡ್‌, ಎರಡು ಪಂದ್ಯಗಳಿಂದ ಗಳಿಸಿದ್ದು ಕೇವಲ ಐದು ರನ್‌ಗಳು ಮಾತ್ರ.

ಏನೇ ಆಗಲಿ ಚೆನ್ನೈ ಫ್ರಾಂಚೈಸಿಯಲ್ಲಿ ಕೆಲ ಅನುಭವಿ ಆಟಗಾರರು ವಿಫಲರಾದರು. ಕೇದಾರ್ ಜಾಧವ್‌ ಆಡಿದ ಎಂಟು ಪಂದ್ಯಗಳಿಂದ ಗಳಿಸಿದ್ದು ಕೇವಲ 62 ರನ್‌ಗಳು ಮಾತ್ರ. ಕೇದಾರ್‌ ಜಾಧವ್‌ ಹಾಗೂ ಪಿಯೂಷ್‌ ಚಾವ್ಲಾ ಅವರಿಗೆ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಅವಕಾಶ ನೀಡಿದ ಕ್ರಮವನ್ನು ಶ್ರೀಕಾಂತ್‌ ಪ್ರಶ್ನೆಸಿದ್ದಾರೆ. ಮಾಡಿದ ಮೂರು ಓವರ್‌ಗಳಲ್ಲಿ ಚಾವ್ಲಾ 32 ರನ್‌ಗಳನ್ನು ನೀಡಿದ್ದರು.

“ಧೋನಿಯ ಒಪ್ಪಂದವೇನು? ಜಗದೀಸನ್‌ಗೆ ಸ್ಪಾರ್ಕ್‌(ಕಿಡಿ) ಇಲ್ಲ ಎಂದು ಅವರು ಹೇಳುತ್ತಾರೆ, ಆದರೆ ‘ಸ್ಕೂಟರ್’ ಜಾಧವ್‌ಗೆ ಆ ಸ್ಪಾರ್ಕ್‌ (ಕಿಡಿ) ಇದೆಯೇ? ಇದು ಹಾಸ್ಯಸ್ಪದ. ಇಂದಿನ(ಸೋಮವಾರ) ಉತ್ತರವನ್ನು ನಾನು ಸ್ವೀಕರಿಸುವುದಿಲ್ಲ. ಈ ಎಲ್ಲಾ ಪ್ರಕ್ರಿಯೆಯ ಚರ್ಚೆ ಮತ್ತು ಚೆನ್ನೈನ ಫ್ಲೇ ಆಫ್‌ ಬಹುತೇಕ ಅಂತ್ಯವಾಗಿ ಒತ್ತಡದಲ್ಲಿರುವುದರಿಂದ ಧೋನಿ ಈಗ ಯುವಕರಿಗೆ ಅವಕಾಶ ನೀಡುತ್ತಾರೆ ಎಂದು ಹೇಳುತ್ತಾರೆ,” ಎಂದು ಗುಡುಗಿದರು.

“ಆಯ್ಕೆ ಪ್ರಕ್ರಿಯೆಯ ಈ ಕಸ ನನಗೆ ಅರ್ಥವಾಗುತ್ತಿಲ್ಲ. ಜಗದೀಸನ್‌ನಲ್ಲಿ ಅವರು ಯಾವ (ಸ್ಪಾರ್ಕ್‌)ಕಿಡಿಯನ್ನು ನೋಡಲಿಲ್ಲ? ಕೇದಾರ‌ ಜಾಧವ‌ ಹಾಗೂ ಪಿಯೂಷ‌ ಚಾವ್ಲರಲ್ಲಿ ಅವರು ಯಾವ ಕಿಡಿ ಕಂಡಿದ್ದಾರೆ? ಕರ್ಣ‌ ಶರ್ಮಾ ಕನಿಷ್ಠ ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ, ಚಾವ್ಲಾ ಪಂದ್ಯ ಮುಗಿದ ಸಮಯದಲ್ಲಿ ಬಂದು ಬೌಲಿಂಗ್‌ ಮಾಡಿ ಹೋಗುತ್ತಾರೆ. ಎಂಎಸ್‌ ಧೋನಿ ಬಿಗ್‌ ಶಾಟ್‌ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಅವರು ಶ್ರೇಷ್ಠ ನಾಯಕ, ಆದರೆ, ಆಯ್ಕೆ ಪ್ರಕ್ರಿಯೆ ವಿಷಯ ಬಂದಾಗ ಇದನ್ನು ಒಪ್ಪಲು ಸಾಧ್ಯವಿಲ್ಲ,” ಎಂದು ಶ್ರೀಕಾಂತ ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!