Sports

ಗೆಲುವಿನ ಬೆನ್ನಲ್ಲೆ ಜೋಸ್‌ ಬಟ್ಲರ್‌ ಅವರನ್ನು ಶ್ಲಾಘಿಸಿದ ಸ್ಟೀವನ್‌ ಸ್ಮಿತ್‌

ಅಬುಧಾಬಿ, ಅ 20- ಚೆನ್ನೈ ಸೂಪರ್‌ ಕಿಂಗ್ಸ್(ಸಿಎಸ್‌ಕೆ) ವಿರುದ್ಧ ಏಳು ವಿಕೆಟ್‌ಗಳ ಅಮೋಘ ಜಯ ಸಾಧಿಸಿದ ಬಳಿಕ ಮಾತನಾಡಿದ ರಾಜಸ್ಥಾನ್‌ ರಾಯಲ್ಸ್ ತಂಡದ ನಾಯಕ ಸ್ಟೀವನ್‌ ಸ್ಮಿತ್‌, ಅಬುಧಾಬಿ ವಿಕೆಟ್‌ ಬ್ಯಾಟಿಂಗ್‌ಗೆ ಉತ್ತಮವಾಗಿರಲಿಲ್ಲ ಎಂದು ಹೇಳಿದ್ದಾರೆ.

ಈ ಗೆಲುವಿನೊಂದಿಗೆ ರಾಜಸ್ಥಾನ್‌ ರಾಯಲ್ಸ್‌ 10 ಪಂದ್ಯಗಳಿಂದ ಎಂಟು ಅಂಕಗಳನ್ನು ಕಲೆ ಹಾಕುವ ಮೂಲಕ 2020ರ ಐಪಿಎಲ್‌ನ ಪಾಯಿಂಟ್ಸ್‌ ಟೇಬಲ್‌ನಲ್ಲಿ ಐದನೇ ಸ್ಥಾನಕ್ಕೇರಿತು. ಸೋಲಿನೊಂದಿಗೆ ಚೆನ್ನೈ ಸೂಪರ್‌ ಕಿಂಗ್ಸ್ ಆರು ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ ಪಾತಳಕ್ಕೆ ಕುಸಿಯಿತು.
ಸಿಎಸ್‌ಕೆ ನೀಡಿದ್ದ 126 ರನ್‌ಗಳ ಗುರಿಯನ್ನು ರಾಜಸ್ಥಾನ್‌ ರಾಯಲ್ಸ್ ಇನ್ನೂ 15 ಎಸೆತಗಳು ಬಾಕಿ ಇರುವಂತೆಯೆ ಏಳು ವಿಕೆಟ್‌ಗಳ ಜಯ ಸಾಧಿಸಿತು.

ಅದ್ಭುತ ಪ್ರದರ್ಶನ ತೋರಿದ ಜೋಸ್‌ ಬಟ್ಲರ್‌ 48 ಎಸೆತಗಳಲ್ಲಿ ಅಜೇಯ 70 ರನ್‌ಗಳನ್ನು ಗಳಿಸಿದರೆ, ಮತ್ತೊಂದು ತುದಿಯಲ್ಲಿ ಇವರಿಗೆ ಸಾಥ್‌ ನೀಡಿದ ಸ್ಟೀವನ್‌ ಸ್ಮಿತ್‌ ಅಜೇಯ 26 ರನ್‌ಗಳನ್ನು ಗಳಿಸಿದರು.
ಪಂದ್ಯದ ಬಳಿಕ ಸ್ಟಾರ್‌ಸ್ಪೋರ್ಟ್ಸ್‌ ಜತೆ ಮಾತನಾಡಿದ ಸ್ಟೀವನ್‌ ಸ್ಮಿತ್‌, “ಶಾರ್ಜಾ ವಿಕೆಟ್‌ ಇಲ್ಲಿಗಿಂತ ಸ್ವಲ್ಪ ವಿಭಿನ್ನವಾಗಿದೆ. ಬ್ಯಾಟಿಂಗ್‌ಗೆ ಈ ವಿಕೆಟ್‌ ಉತ್ತಮವಾಗಿರಲಿಲ್ಲ, ಆದರೆ ಗೆಲುವು ಸಾಧಿಸಿರುವುದು ಖುಷಿ ತಂದಿದೆ. ಪವರ್‌ಪ್ಲೇನಲ್ಲಿ ನಾವು ಬೌಲಿಂಗ್‌ ಚೆನ್ನಾಗಿ ಮಾಡಿದ್ದೇವೆ. ಸ್ಪಿನ್ನರ್‌ಗಳು ಗುಡ್‌ ಲೈನ್‌ ಅಂಡ್‌ ಲೆನ್ತ್‌, ಗೂಗ್ಲಿಗಳನ್ನು ಹಾಕುವ ಮೂಲಕ ಸಾಕಷ್ಟು ಒತ್ತಡವನ್ನು ಹಾಕಿದರು,” ಎಂದು ಹೇಳಿದರು.

“ತೆವಾಟಿಯಾ ಹಾಗೂ ಶ್ರೇಯಸ್‌ ಅಯ್ಯರ್‌ ನಮ್ಮ ಕಡೆ ಸಂವೇದನಾಶೀಲರಾಗಿದ್ದಾರೆ. ನನ್ನಲ್ಲಿ ಇದ್ದ ಪಂದ್ಯದ ಒತ್ತಡವನ್ನು ಜೋಸ್‌ ಬಟ್ಲರ್‌ ಒಬ್ಬರೇ ನಿಭಾಯಿಸಿದರು. ಸನ್ನಿವೇಶಕ್ಕೆ ತಕ್ಕಂತೆ ನಾನು ಬ್ಯಾಟಿಂಗ್‌ ಮಾಡಿದರೆ, ಅವರು ಯಾವಾಗಲೂ ಆಡುವಂತೆ ಬ್ಯಾಟ್‌ ಬೀಸಿದರು. ಅವರು ಎಂದಿನಂತೆ ಉತ್ತಮ ಸ್ಟ್ರೈಕ್‌ ರೇಟ್‌ ಅನ್ನು ಹೊಂದಿದ್ದಾರೆ,” ಎಂದು ಸಹ ಆಟಗಾರನನ್ನು ಗುಣಗಾನ ಮಾಡಿದರು.

126 ರನ್‌ಗಳನ್ನು ಗುರಿ ಹಿಂಬಾಲಿಸಿದ್ದ ರಾಜಸ್ಥಾನ್‌ ರಾಯಲ್ಸ್ ಒಂದು ಹಂತದಲ್ಲಿ 28 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ವೇಳೆ ಮೂರನೇ ವಿಕೆಟ್‌ಗೆ ಜತೆಯಾದ ಜೋಸ್‌ ಬಟ್ಲರ್‌ ಹಾಗೂ ಸ್ಟೀವನ್‌ ಸ್ಮಿತ್‌ ಜೋಡಿ 98 ರನ್‌ಗಳ ನಿರ್ಣಾಯಕ ಜತೆಯಾಟವನ್ನು ಆಡಿದರು. ಆ ಮೂಲಕ ತಂಡವನ್ನು ಗೆಲ್ಲಿಸಿದರು. ಸಿಎಸ್‌ಕೆ ಪರ ಉತ್ತಮ ಬೌಲಿಂಗ್‌ ಮಾಡಿದ ದೀಪಕ್‌ ಚಹರ್‌ ನಾಲ್ಕು ಓವರ್‌ಗಳಿಗೆ 18 ರನ್‌ಗಳನ್ನು ನೀಡಿ ಎರಡು ವಿಕೆಟ್‌ಗಳನ್ನು ಕಿತ್ತರು.

ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್ ತಂಡವನ್ನು ರಾಜಸ್ಥಾನ್‌ ರಾಯಲ್ಸ್ ಬೌಲರ್‌ಗಳು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 125 ರನ್‌ಗಳಿಗೆ ನಿಯಂತ್ರಿಸಿದರು. ರವೀಂದ್ರ ಜಡೇಜಾ 30 ಎಸೆತಗಳಲ್ಲಿ ಅಜೇಯ 35 ರನ್‌ಗಳನ್ನು ಗಳಿಸುವ ಮೂಲಕ ವೈಯಕ್ತಿಕ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು.
200ನೇ ಐಪಿಎಲ್‌ ಪಂದ್ಯವಾಡಿದ ಮಹೇಂದ್ರ ಸಿಂಗ್‌ ಧೋನಿ, 28 ಎಸೆತಗಳಲ್ಲಿ 28 ರನ್‌ಗಳನ್ನು ಗಳಿಸಿದರು ಹಾಗೂ ಐದನೇ ವಿಕೆಟ್‌ಗೆ ಜಡೇಜಾ ಅವರೊಂದಿಗೆ 51 ರನ್‌ಗಳ ಜತೆಯಾಟವಾಡಿದರು. ಧೋನಿ ಹಾಗೂ ಜಡೇಜಾ ಉತ್ತಮ ಹೋರಾಟ ನಡೆಸಿದರು. ಆದರೆ, ಸ್ವಲ್ಪ ತಡವಾಗಿತ್ತು. ಎರಡನೇ ರನ್ ಓಡಲು ಪ್ರಯತ್ನಿಸಿದ ಧೋನಿ 18ನೇ ಓವರ್‌ನಲ್ಲಿ ರನೌಟ್‌ ಆದರು.

ರಾಜಸ್ಥಾನ್‌ ರಾಯಲ್ಸ್ ಅಕ್ಟೋಬರ್‌ 22 ರಂದು ಗುರುವಾರ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ ಸೆಣಸಲಿದೆ.
ಯುಎನ್‌ಐ ಆರ್‌ಕೆ 1020

Related Articles

Leave a Reply

Your email address will not be published. Required fields are marked *

Back to top button
error: Content is protected !!