Belagavi

ಕಳೆದ ಬಾರಿಯ ಪ್ರವಾಹದಿಂದ ಬಿದ್ದ ಮನೆಗಳನ್ನೇ ಇನ್ನೂ ಕಟ್ಟಿ ಕೊಟ್ಟಿಲ್ಲ: ಸಿದ್ದರಾಮಯ್ಯ

ಬೆಳಗಾವಿ ಅ.19- ಉಪಚುನಾವಣೆಯಲ್ಲಿ ಆರ್.ಆರ್ ನಗರದಲ್ಲಿ ಕಾಂಗ್ರೆಸ್- ಬಿಜೆಪಿ ಮಧ್ಯೆ ನೇರ ಸ್ಪರ್ಧೆಯಿದ್ದರೆ, ಶಿರಾದಲ್ಲಿ ತ್ರಿಕೋನ ಸ್ಪರ್ಧೆಯಿದೆ. ಎರಡೂ ಕ್ಷೇತ್ರಗಳ ಜನರ ಒಲವು ಹೆಚ್ಚಾಗಿ ಕಾಂಗ್ರೆಸ್ ಪಕ್ಷದ ಪರವಾಗಿ ಕಂಡುಬರುತ್ತಿರುವುದರಿಂದ ಎರಡರಲ್ಲೂ ಕಾಂಗ್ರೆಸ್ ಗೆ ಗೆಲ್ಲುವ ಹೆಚ್ಚಿನ ಅವಕಾಶವಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂಪ್ಪರ ಬಿಜೆಪಿ ಸರ್ಕಾರ ಪರ್ಸಂಟೇಜ್ ಸರ್ಕಾರವಾಗಿದ್ದು, ಲಂಚ ನೀಡದೇ ನಯಾಪೈಸೆ ಇಲ್ಲಿ ಬಿಡುಗಡೆಯಾಗುವುದಿಲ್ಲ. ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಹೊಸ ಅನುದಾನ ನೀಡುತ್ತಿಲ್ಲ. ಅಲ್ಲದೇ ಹಿಂದೆ ಘೋಷಿಸಲಾಗಿದ್ದ ಅನುದಾನವನ್ನೂ ತಡೆಹಿಡಿಯಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಒಮ್ಮೆ ಗೋಲಿಬಾರ್ ನಡೆಸಿ ರೈತರನ್ನು ಕೊಂದರು, ಎರಡನೇ ಬಾರಿ ಮುಖ್ಯಮಂತ್ರಿಯಾದಾಗ ಎರಡು ಬಾರಿ ಗೋಲಿಬಾರ್ ನಡೆಸಿ ಅಮಾಯಕರನ್ನು ಕೊಂದರು. ಇದು ಕಾನೂನು ಮತ್ತು ಸುವ್ಯವಸ್ಥೆನಾ ? ಎಂದು ಪ್ರಶ್ನಿಸಿದರು.

ಕೇಂದ್ರ ತಂಡ ರಾಜ್ಯದ ಪ್ರವಾಹ ಸಮೀಕ್ಷೆ ನಡೆಸಿ ಇಷ್ಟು ದಿನವಾಯಿತು, ಆದರೂ ಒಂದು ರೂಪಾಯಿಯಾದ್ರೂ ಪರಿಹಾರ ಬಂದಿದೆಯಾ? ಸಚಿವ ಆರ್. ಅಶೋಕ ಅವರು ಪರಿಹಾರ ಇವತ್ತು ಬರುತ್ತೆ, ನಾಳೆ ಬರುತ್ತೆ ಎಂದೇ ದಿನ ದೂಡುತ್ತಿದ್ದಾರೆ, ಜನ ಕಷ್ಟದಲ್ಲಿರುವಾಗ ಪರಿಹಾರ ಕೊಡದೆ ಯಾವಾಗ ಕೊಡ್ತೀರಾ ? ಎಂದು ಟೀಕಾಪ್ರಹಾರ ನಡೆಸಿದರು.

ನಮ್ಮ ಸರ್ಕಾರ ಪ್ರಾರಂಭಿಸಿದ್ದ ಯೋಜನೆಗಳನ್ನೆಲ್ಲ ಒಂದೊಂದಾಗಿ ನಿಲ್ಲಿಸುತ್ತಿದ್ದಾರೆ. ಅನ್ನಭಾಗ್ಯದ ಅಕ್ಕಿಯನ್ನು 7 ಕೆ.ಜಿಯಿಂದ 5ಕ್ಕೆ ಇಳಿಸಿದ್ದಾರೆ. ಇಂದಿರಾ ಕ್ಯಾಂಟೀನ್ ಗೆ ದುಡ್ಡು ಕೊಡದೆ ಮುಚ್ಚಲು ಹೊರಟಿದ್ದಾರೆ. ದನ-ಕುರಿ ಸತ್ತರೆ ಪರಿಹಾರ ಕೊಡುತ್ತಿಲ್ಲ, ಕ್ಷೀರಧಾರೆಯಲ್ಲಿ ಹಾಲಿನ ಸಬ್ಸಿಡಿ ಕಡಿಮೆ ಮಾಡಿದ್ದಾರೆ. ಕೃಷಿಭಾಗ್ಯವೂ ನಿಂತಿದೆ. ಕಳೆದ ವರ್ಷದ ಪ್ರವಾಹದಲ್ಲಿ ಬಿದ್ದ ಮನೆಗಳನ್ನೇ ಇನ್ನೂ ಕಟ್ಟಿಸಿಕೊಟ್ಟಿಲ್ಲ ಎಂದು ಕಿಡಿಕಾರಿದರು.

ಪ್ರವಾಹ ಪರಿಸ್ಥಿತಿ ಇರುವಾಗ ವೈಮಾನಿಕ ಸಮೀಕ್ಷೆ ಮಾಡುವುದು ಸರಿಯಾದರೂ ಈಗ ಪ್ರವಾಹ ಪೀಡಿತ ಸ್ಥಳಗಳಿಗೆ ರಸ್ತೆ ಮೂಲಕ ಸಂಚರಿಸಲು, ನಿರಾಶ್ರಿತ ಕೇಂದ್ರಗಳಲ್ಲಿರುವ ಜನರನ್ನು ಭೇಟಿ ಮಾಡಲು ಅವಕಾಶವಿದ್ದಾಗ್ಯೂ ಮುಖ್ಯಮಂತ್ರಿ ವಿಮಾನದಲ್ಲೇ ಸಮೀಕ್ಷೆ ಮಾಡಲು ಮುಂದಾಗಿದ್ದಾರೆ. ಹೀಗೆ ದೂರದಿಂದಲೇ ವೈಮಾನಿಕ ಸಮೀಕ್ಷೆ ಮಾಡಿದರೆ ಜನರ ಕಷ್ಟ ತಿಳಿಯಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಈ ವರ್ಷದ ಪ್ರವಾಹದಲ್ಲಿ ಇನ್ನಷ್ಟು ಮನೆಗಳು ಬಿದ್ದಿವೆ. ಜಿಲ್ಲಾಧಿಕಾರಿಗಳಿಗೆ ದುಡ್ಡು ಕೊಟ್ಟಿದ್ದೇವೆ ಎಂದು ಯಡಿಯೂರಪ್ಪ ಹೇಳಿದ್ದಾರಾದರೂ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಹಣವಿದ್ದ ಮಾತ್ರಕ್ಕೆ ಅದು ಸಂತ್ರಸ್ತರಿಗೆ ತಲುಪಲು ಸಾಧ್ಯವಿಲ್ಲ. ಈ ವರ್ಷ ಯಾರಿಗೂ ಪರಿಹಾರ ಕೊಟ್ಟಿಲ್ಲ ಎಂದು ಆರೋಪಿಸಿದರು.

ರಾಜ್ಯದಲ್ಲಿ ರೈತರು, ನೇಕಾರರು, ಕೂಲಿ ಕಾರ್ಮಿಕರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ, ಇದನ್ನು ತಡೆಯಲು ಯಡಿಯೂರಪ್ಪ ಏನನ್ನೂ ಮಾಡಿಲ್ಲ. ಮೊದಲು ಜನರಿಗೆ ಲಾಕ್‌ಡೌನ್ ಮತ್ತು ಪ್ರವಾಹದಿಂದ ಉಂಟಾದ ನಷ್ಟವನ್ನು ತುಂಬಿಕೊಡುವ ವ್ಯವಸ್ಥೆ ಮಾಡಬೇಕು. ಭಾಷಣದಿಂದ ಜನರ ಹೊಟ್ಟೆ ತುಂಬುವುದಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.

ತಾನಿರುವ ಹುದ್ದೆಯ ಗೌರವದ ಅರಿವಿಲ್ಲದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ್ ಒಬ್ಬ ಯಕಶ್ಚಿತ್ ರಾಜಕಾರಣಿ. ಬೆಂಕಿ ಹಾಕುವುದು, ಸಮುದ್ರಕ್ಕೆ ಬಿಸಾಕುವುದು ಬರೀ ಇಂತಹುದನ್ನೇ ತಲೆಯಲ್ಲಿ ತುಂಬಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ನುಡಿದರು.

ಕಾಂಗ್ರೆಸ್ ಪಕ್ಷಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಕಾಂಗ್ರೆಸ್ ನ್ನು ಮುಳುಗಿಸುತ್ತೇನೆ ಎಂದು ಬಂದ ಹಲವು ಜನರನ್ನು ನಾನು ನೋಡಿದ್ದೇನೆ ಎಂದು ಸವಾಲೆಸೆದರು.

ಕಳೆದ ವರ್ಷ ಹಾಗೂ ಈ ಬಾರಿ ರಾಜ್ಯದಲ್ಲಿ ಪ್ರವಾಹ ಬಂದಿದೆಯಾದರೂ ಪ್ರಧಾನಿ ಮೋದಿ ಒಮ್ಮೆಯೂ ರಾಜ್ಯಕ್ಕೆ ಭೇಟಿ ನೀಡಿ ಜನರ ಕಷ್ಟ ಕೇಳಿಲ್ಲ. ಬಿಜೆಪಿಯ 25 ಸಂಸದರನ್ನು ಲೋಕಸಭೆಗೆ ಕಳುಹಿಸಿ ಕೊಟ್ಟ ಕರ್ನಾಟಕ ರಾಜ್ಯವನ್ನೇ ಮೋದಿ ತಾತ್ಸಾರ ಮಾಡಿದ್ದಾರೆ. ಸಮುದಾಯ ಭವನಗಳ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ.‌ ಅವುಗಳಿಗೆ ಹಣ ಬಿಡುಗಡೆ ಮಾಡಲು ಸಮಾಜ ಕಲ್ಯಾಣ ಖಾತೆ ಸಚಿವ ಶ್ರೀರಾಮುಲು ಇಲಾಖೆಗೆ ಸರ್ಕಾರ ನಯಾಪೈಸೆ ಹಣ ಕೊಟ್ಟಿಲ್ಲ ಎಂದು ರಾಮುಲೇ ಹೇಳಿದ್ದಾರೆ. ಅಂದಮೇಲೆ ಸರ್ಕಾರ ದಿವಾಳಿಯಾಗಿರುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!