Bengaluru

ಸಂತ್ರಸ್ತರ ಮೊರೆ ಆಲಿಸಬೇಕಾದ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ; ಸಿದ್ದರಾಮಯ್ಯ

ಬೆಂಗಳೂರು, ಅ.17- ನೆರೆ ಹಾವಳಿಯಿಂದಾಗಿ ಕಲ್ಯಾಣ ಕರ್ನಾಟಕ ನಲುಗಿ ಹೋಗಿದ್ದರೂ ಸಂತ್ರಸ್ತರ ಮೊರೆ ಆಲಿಸಬೇಕಾದ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರವಾಹದಿಂದ ಕಲ್ಯಾಣ ಕರ್ನಾಟಕ ಕೊಚ್ಚಿ ಹೋಗುತ್ತಿದೆ. ಜನ ತಮ್ಮ ಜೀವ ಉಳಿದರೆ ಸಾಕು ಎಂದು ಒದ್ದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಂತ್ರಸ್ತ್ರರ ಮೊರೆ ಆಲಿಸಬೇಕಾದ, ಅವರಿಗೆ ಸಾಂತ್ವನ ಹೇಳಬೇಕಾದ ಸಚಿವರು ನಾಪತ್ತೆಯಾಗಿದ್ದಾರೆ. ಕೆಲ ಸಚಿವರು ಉಪ ಚುನಾವಣೆಯಲ್ಲಿ ಮುಳುಗಿ ಹೋಗಿದ್ದಾರೆ. ಸರ್ಕಾರ ಭ್ರಷ್ಟಾಚಾರದಲ್ಲಿ ನಿರತವಾಗಿ ಪ್ರವಾಹದ ಬಗ್ಗೆ ಮೈ ಮರೆತಿದೆ ಎಂದು ಅವರು ಟೀಕಿಸಿದ್ದಾರೆ.

ಇಂದು ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಇನ್ನಾದರೂ ಸರ್ಕಾರ ಪ್ರವಾಹ ಸಂತ್ರಸ್ತರನ್ನು ಕಣ್ತೆರೆದು ನೋಡಲಿ. ಕೂಡಲೇ ಅವರ ನೆರವಿಗೆ ಧಾವಿಸಲಿ. ಕೊರೊನಾ ನೆಪ ಹೇಳಿ ಜಿಲ್ಲಾ ಉಸ್ತುವಾರಿ ಸಚಿವರುಗಳು ಬೆಂಗಳೂರಿನಲ್ಲಿ ಸಭೆಗಳನ್ನು ನಡೆಸುವುದನ್ನು ಬಿಟ್ಟು ನೆರೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ಕೊಟ್ಟು ನೊಂದವರಿಗೆ ಧೈರ್ಯ ತುಂಬುವ ಕೆಲಸ ಮಾಡಲಿ ಎಂದರು.

ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಸಕಲ ನೆರವು ಎಂದು ಬಾಯಿ ಮಾತಿನಲ್ಲಿ ಹೇಳುತ್ತಾರೆ. ರಾಜ್ಯ ಸರ್ಕಾರ ಹಲವು ಬಾರಿ ಮನವಿ ಸಲ್ಲಿಸಿದರೂ ಕೇಂದ್ರ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಅತಿವೃಷ್ಟಿಯಿಂದಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 10-15 ಸಾವಿರ ಕೋಟಿ ರೂ. ನಷ್ಟವಾಗಿದೆ. ಈ ರೀತಿಯ ದಪ್ಪ ಚರ್ಮದ ಸರ್ಕಾರವನ್ನು ಎಂದೂ ನೋಡಿಲ್ಲ. ಪ್ರವಾಹದ ಬಗ್ಗೆ ಮುಂಜಾಗ್ರತೆ ವಹಿಸುವಂತೆ ಮೊದಲೇ ಹೇಳಿದ್ದರೂ ಸರ್ಕಾರ ಕಿವಿಗೊಡಲಿಲ್ಲ. ನಮ್ಮ ಸಲಹೆಗಳನ್ನು ಗಂಭೀರವಾಗಿಯೂ ಪರಿಗಣಿಸುವುದಿಲ್ಲ. ಎಷ್ಟೇ ಪತ್ರ ಬರೆದರೂ ಉತ್ತರ ನೀಡುವುದಿಲ್ಲ ಎಂದು ಟೀಕಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!