Bengaluru

ಸಿಬಿಸಿಎಸ್ ಪದ್ಧತಿಯಿಂದ ಕನ್ನಡ ಪ್ರಾಧ್ಯಾಪಕರ ಉದ್ಯೋಗಕ್ಕೆ ಮಾರಕ

ಬೆಂಗಳೂರು,ಅ.16- ಸಿಬಿಸಿಎಸ್ ಪದ್ಧತಿಯಿಂದಾಗಿ ಕನ್ನಡ ಭಾಷಾ ಬೋಧನೆಯ ಕಾರ್ಯಭಾರ ಕಡಿಮೆಯಾಗಿರುವ ಪರಿಣಾಮ ಕನ್ನಡ ಪ್ರಾಧ್ಯಾಪಕರ ಉದ್ಯೋಗಕ್ಕೆ ಮಾರಕವಾಗಿದ್ದು, ಪೂರಕ ಕ್ರಮಗಳನ್ನು ಕೈಗೊಳ್ಳುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರು ಉಪಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ ಅವರಲ್ಲಿ ಮನವಿ ಮಾಡಿದ್ದಾರೆ.

ಯುಜಿಸಿ ಜಾರಿಗೆ ತರಲಾಗಿರುವ ಸಿಬಿಸಿಎಸ್ ಪದ್ಧತಿಯ ಅನುಷ್ಠಾನದಲ್ಲಾದ ಗೊಂದಲಗಳ ಬಗ್ಗೆ ಈಗಾಗಲೇ 2-3 ಬಾರಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಸಂಬಂಧಪಟ್ಟ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಪತ್ರ ಬರೆಯಲಾಗಿದ್ದರೂ ರಾಜ್ಯದ ಬಹುತೇಕ ವಿಶ್ವವಿದ್ಯಾಲಯಗಳು ಸಿಬಿಸಿಎಸ್ ಪದ್ಧತಿಯ ಮಾರ್ಗಸೂಚಿ ಮಾದರಿಗಳನ್ನೇ ಕಾನೂನು ಎಂಬ ರೀತಿಯಲ್ಲಿ ಭಾವಿಸಿಕೊಂಡು ಇಂಗ್ಲಿಷ್ ಭಾಷೆಯನ್ನು ಕಡ್ಡಾಯಗೊಳಿಸಿ ಕನ್ನಡ ಭಾಷಾ ವಿಷಯದ ಬೋಧನಾ ಕಾರ್ಯಭಾರವನ್ನು ಕಡಿತಗೊಳಿಸಿರುವುದರಿಂದ ಕನ್ನಡ ಪ್ರಾಧ್ಯಾಪಕರು ತೊಂದರೆಗೆ ಸಿಲುಕುವಂತಾಗಿದೆ ಎಂದು ಉಪಮುಖ್ಯಮಂತ್ರಿಗಳಿಗೆ ಬರೆಯಲಾಗಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕೃಪಾಂಕಗಳನ್ನು ನೀಡುವಾಗಲೂ ಸಹ ಕನ್ನಡ ಭಾಷೆಗೆ ಕಡಿಮೆ ಕೃಪಾಂಕಗಳನ್ನು ನೀಡುವ ಮೂಲಕ ಭಾಷಾ ವಿಷಯದಲ್ಲಿ ತಾರತಮ್ಯವನ್ನು ಎಸಗಿವೆ. ಇದರಿಂದಾಗಿ ಕನ್ನಡದ ನೆಲದಲ್ಲಿಯೇ ಕನ್ನಡಕ್ಕೆ ಅನಾಥಪ್ರಜ್ಞೆ ಕಾಡುವಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ರಾಜ್ಯಭಾಷಾ ಅಧಿನಿಯಮ 1963 ಹಾಗೂ ರಾಜ್ಯ ಸರ್ಕಾರಗಳು ಕಾಲಕಾಲಕ್ಕೆ ಹೊರಡಿಸಿದ ಕನ್ನಡಪರ ಆಜ್ಞೆ, ಆದೇಶಗಳು ಕರ್ನಾಟಕದಲ್ಲಿ ಕನ್ನಡವನ್ನು ಸಾರ್ವಭೌಮ ಭಾಷೆಯಾಗಿ ಘೋಷಿಸಿದೆ. ಆದರೆ ಸಿಬಿಸಿಎಸ್ ಪದ್ಧತಿಯಿಂದಾಗಿ ಕನ್ನಡ ಭಾಷಾ ಬೋಧನೆಯ ಕಾರ್ಯಭಾರ ಕಡಿಮೆಯಾಗಿ ಕನ್ನಡ ಪ್ರಾಧ್ಯಾಪಕರ ಉದ್ಯೋಗಕ್ಕೆ ಮಾರಕವಾಗಿರುವುದರಿಂದ ಸಿಬಿಸಿಎಸ್ ಪದ್ಧತಿಯ ಅನುಷ್ಠಾನದಲ್ಲಿ ಕನ್ನಡ ಭಾಷಾ ಬೋಧನೆಯನ್ನು ಕಡ್ಡಾಯಗೊಳಿಸಿ ಆದೇಶಿಸುವಂತೆ ನಾಗಾಭರಣ ಕೋರಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!