Bengaluru

ಧರಣಿ ನಿರತ ಉಪನ್ಯಾಸಕರಿಗೆ ಕಾಲೇಜು ಆರಂಭವಾದ ತಕ್ಷಣ ನೇಮಕಾತಿ ಆದೇಶ

ಬೆಂಗಳೂರು,ಅ 15- ಕೇಂದ್ರ ಸರ್ಕಾರದ ಸೂಚನೆಯಂತೆ ಅತಿ ಶೀಘ್ರದಲ್ಲಿಯೇ ಕಾಲೇಜುಗಳು ಆರಂಭವಾಗುತ್ತಿದ್ದು, ಅದರಂತೆ ರಾಜ್ಯದಲ್ಲಿ ಕಾಲೇಜುಗಳು ಆರಂಭವಾದ ಕೂಡಲೇ ಕೌನ್ಸೆಲಿಂಗ್‌ ಮುಗಿಸಿಕೊಂಡು ನೇಮಕಾತಿ ಅದೇಶದ ನೀರಿಕ್ಷೆಯಲ್ಲಿರುವ ಎಲ್ಲ ಉಪನ್ಯಾಸಕರಿಗೆ ನೇಮಕಾತಿ ಪತ್ರವನ್ನು ನೀಡಲು ಸರಕಾರ ನಿರ್ಧರಿಸಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ನೇಮಕಾತಿ ಪತ್ರ ನೀಡಬೇಕೆಂದು ಒತ್ತಾಯಿಸಿ ಮಲ್ಲೇಶ್ವರಂನ ಪಿಯುಸಿ ಮಂಡಳಿ ಎದುರು ಧರಣಿ ನಡೆಸುತ್ತಿರುವ ಭಾವಿ ಉಪನ್ಯಾಸಕರನ್ನು ಗುರುವಾರ ಭೇಟಿಯಾದ ಅವರು,ಹಣಕಾಸು ಇಲಾಖೆಯ ಕೆಲ ಆಕ್ಷೇಪಗಳ ಕಾರಣಕ್ಕೆ ನೇಮಕಾತಿ ಪತ್ರಗಳನ್ನು ನೀಡುವುದು ತಡವಾಗಿದೆ.ಇದಕ್ಕೆ ಕೋವಿಡ್‌ ಕೂಡ ಒಂದು ಪ್ರಮುಖ ಕಾರಣ.ಇದೀಗ ಸ್ವತಃ ಮುಖ್ಯಮಂತ್ರಿಗಳೇ ಹಣಕಾಸು ಇಲಾಖೆ ಎತ್ತಿದ್ದ ಆಕ್ಷೇಪಗಳನ್ನು ನಿವಾರಿಸಿ ಕಾಲೇಜುಗಳು ಆರಂಭವಾದ ಕೂಡಲೇ ನೇಮಕಾತಿ ಆದೇಶಗಳನ್ನು ನೀಡುವಂತೆ ಸೂಚಿಸಿದ್ದಾರೆಂದು ತಿಳಿಸಿದರು.

ದಿನೇದಿನೆ ಕೋವಿಡ್‌ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಲೇಜುಗಳು ಶುರುವಾಗುವುದು ಇನ್ನೂ ತಡವಾಗಬಹುದು .ಹೀಗಾಗಿ ಈಗಲೇ ಆದೇಶ ಪತ್ರಗಳನ್ನು ನೀಡಿ ಎಂದು ಉಪನ್ಯಾಸಕರು ಒತ್ತಾಯ ಮಾಡಿದರು.ಇದಕ್ಕೆ ಉತ್ತರಿಸಿದ ಉಪ ಮುಖ್ಯಮಂತ್ರಿ,ಕಾಲೇಜುಗಳನ್ನು ಅರಂಭ ಮಾಡಿ ಎಂದು ಈಗಾಗಲೇ ಕೇಂದ್ರ ಸರಕಾರ ಸ್ಪಷ್ಟ ಸೂಚನೆ ನೀಡಿದೆ.ಆ ನಿಟ್ಟಿನಲ್ಲಿ ರಾಜ್ಯ ಸರಕಾರ ಕೆಲಸ ಮಾಡುತ್ತಿದೆ ಹಾಗೂ ಕೆಲ ಮೂಲಭೂತ ಸೌಕರ್ಯಗಳ ತಯಾರಿ ಮಾಡಿಕೊಳ್ಳುತ್ತಿದೆ.ನಿಮಗೆ ಅನುಮಾನವೇ ಬೇಡ.ಕಾಲೇಜುಗಳು ಖಂಡಿತ ವಾಗಿಯೂ ಆರಂಭವಾಗುತ್ತವೆ.ಸರ ಕಾರದ ಮೇಲೆ ನಂಬಿಕೆ ಇಡಿ ಎಂದು ಮನವಿ ಮಾಡಿದರು.

ಎಲ್ಲರಿಗೂ ಗೊತ್ತಿರುವಂತೆ ಶೈಕ್ಷಣಿಕ ವರ್ಷ ನಿಲ್ಲಬಾರದು ಎಂಬ ಉದ್ದೇಶದಿಂದ ಸರಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ.ಪಿಯುಸಿ,ಎಸ್ಸೆಸೆಲ್ಸಿ,ಸಿಇಟಿ,ನೀಟ್‌ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದೆ.ಯಾವುದೇ ಕಾರಣ ಕ್ಕೂ ಅಕಾಡೆಮಿಕ್‌ ವರ್ಷ ನಿಲ್ಲುವುದಿಲ್ಲ.ಶೈಕ್ಷಣಿಕ ಚಟುವಟಿಕೆಗಳು ನಿರಾತಂಕವಾಗಿ ನಡೆಯಲೇ ಬೇಕು.ಜೊತೆ ಗೆ ನಮ್ಮ ಸರಕಾರವು ಶಿಕ್ಷಕರು,ಉಪನ್ಯಾಸಕರ ಪರವಾಗಿದೆ.ನಿಮ್ಮ ಬೇಡಿಕೆಯನ್ನು ಸ್ವತಃ ಮುಖ್ಯಮಂತ್ರಿಗಳೇ ಒಪ್ಪಿದ್ದಾರೆಂದು ಉಪ ಮುಖ್ಯಮಂತ್ರಿ ಹೇಳಿದರು.

ಕೋವಿಡ್‌ ಕಾರಣದಿಂದ ದೇಶದ ಯಾವುದೇ ರಾಜ್ಯದಲ್ಲೂ ನೇಮಕಾತಿಗಳು ನಡೆಯುತ್ತಿಲ್ಲ.ಅಷ್ಟೇ ಏಕೆ? ನಮ್ಮ ರಾಜ್ಯದ ಎಲ್ಲ ಇಲಾಖೆಗಳಲ್ಲೂ ಹೊಸ ನೇಮಕಾತಿಯನ್ನು ಸಂಪೂರ್ಣವಾಗಿ ತಡೆಹಿಡಿಯಲಾಗಿದೆ.ಆದರೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉಪನ್ಯಾಸಕರ ನೇಮಕಕ್ಕೆ ಸರಕಾರ ಎಲ್ಲ ಅಡ್ಡಿಗಳನ್ನು ಬದಿಗೊತ್ತಿ ಒಪ್ಪಿ ಕೊಂಡಿದೆ ಎಂದು ಡಿಸಿಎಂ ವಿವರಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!