New Delhi

‘ಹಾಥರಸ್’ ಕುಕೃತ್ಯದ ತನಿಖೆ ಅಲಹಾಬಾದ ಹೈಕೋರ್ಟ್ ನಿಗಾದಲ್ಲಿ -ಸುಪ್ರೀಂ ಕೋರ್ಟ್

ನವದೆಹಲಿ, ಅ 15- ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದ ‘ಹಾಥರಸ್’ ಘಟನೆ ಕುರಿತ ತನಿಖೆ ಅಲಹಾಬಾದ್ ಹೈಕೋರ್ಟ್ ನಿಗಾದಲ್ಲಿ ನಡೆಯಲಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ತಿಳಿಸಿದೆ.

ಸಾಮಾಜಿಕ ಕಾರ್ಯಕರ್ತರು ಹಾಗೂ ವಕೀಲರು ಸಲ್ಲಿಸಿದ್ದ ಆರ್ಜಿಗಳಿಗೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯ ಈ ಭರವಸೆ ನೀಡಿದೆ.

ಉತ್ತರ ಪ್ರದೇಶದ ಹಾಥರಸ್ ಜಿಲ್ಲೆಯಲ್ಲಿ 19 ವರ್ಷದ ದಲಿತ ಯುವತಿ ಸಾಮೂಹಿಕ ಅತ್ಯಾಚಾರಕ್ಕೆ ಗುರಿಯಾಗಿ, ತೀವ್ರ ಗಾಯಗಳಿಂದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು.

ಸೆಪ್ಟೆಂಬರ್ 14 ರಂದು ಆಕೆಯ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ಆಕೆ ಸೆಪ್ಟೆಂಬರ್ 29 ರಂದು ದೆಹಲಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಈ ಪ್ರಕರಣದ ತನಿಖೆ ದೋಷಪೂರಿತವಾಗಿದೆ ಹಾಗೂ ಉತ್ತರ ಪ್ರದೇಶದಲ್ಲಿ ನಿಷ್ಪಕ್ಷಪಾತ ವಿಚಾರಣೆ ಸಾಧ್ಯತೆ ಇಲ್ಲ ಎಂದು ಆರೋಪಿಸಿ ಕೆಲ ಸಾಮಾಜಿಕ ಕಾರ್ಯಕರ್ತರು, ವಕೀಲರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಆರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಿತು.

ಅರ್ಜಿದಾರರ ಕಳವಳಗಳಿಗೆ ಸ್ಪಂದಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ನ್ಯಾಯಪೀಠ, “ತನಿಖೆಯ ಮೇಲೆ ಅಲಹಾಬಾದ್ ಹೈಕೋರ್ಟ್ ನಿಗಾ ವಸಲಿದೆ, ಯಾವುದಾದರೂ ಸಮಸ್ಯೆ ಎದುರಾದರೆ ನಾವು ಪರಿಹರಿಸುತ್ತೇವೆ ಎಂದು ಭರವಸೆ ನೀಡಿತು.

ಈ ಆರ್ಜಿಗಳ ಬಗ್ಗೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹರೀಶ್ ಸಾಳ್ವೆ, ಇಂದಿರಾ ಜೈಸಿಂಗ್ ಮತ್ತು ಸಿದ್ಧಾರ್ಥ್ ಲುಥ್ರಾ ವಾದ ಮಾಡಿದರು.

ಸಂತ್ರಸ್ತೆಯ ಕುಟುಂಬ ಸದಸ್ಯರ ಪರವಾಗಿ ವಾದಗಳನ್ನು ಮಂಡಿಸಿದ ವಕೀಲರು, ಈ ಪ್ರಕರಣವನ್ನು ಉತ್ತರ ಪ್ರದೇಶದ ಹೊರಗೆ ದೆಹಲಿಯ ಯಾವುದಾದರೂ ನ್ಯಾಯಾಲಯಕ್ಕೆ ವರ್ಗಾಯಿಸಬೇಕು ಎಂದು ಹೇಳಿದರು.

ವಕೀಲೆ ಇಂದಿರಾ ಜೈಸಿಂಗ್, ಸಾಕ್ಷಿಗಳ ರಕ್ಷಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಉತ್ತರಪ್ರದೇಶದಲ್ಲಿ ನಿಷ್ಪಕ್ಷಪಾತ ವಿಚಾರಣೆ ನಡೆಯುವುದಿಲ್ಲ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸಂತ್ರಸ್ತೆಯ ಕುಟುಂಬ ಸದಸ್ಯರು ಹಾಗೂ ಸಾಕ್ಷಿಗಳಿಗೆ ಉತ್ತರ ಪ್ರದೇಶ ಸರ್ಕಾರ ಒದಗಿಸಿದ ಭದ್ರತೆಯ ವಿವರ ತಿಳಿಸಿದರು.

ಉತ್ತರ ಪ್ರದೇಶ ಸರ್ಕಾರ ಈ ಪ್ರಕರಣವನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಿದೆ. ತನಿಖೆಯ ಮೇಲ್ವಿಚಾರಣೆಯನ್ನು ಸುಪ್ರೀಂ ಕೋರ್ಟ್ ವಹಿಸಬೇಕೆಂದು ಕೋರಿದೆ ಎಂದು ಮಾಹಿತಿ ನೀಡಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!