Belagavi

ಹುಕ್ಕೇರಿ ಸಿಪಿಆಯ್ ಕಲ್ಯಾಣಶೆಟ್ಟಿ ವಿರುದ್ಧ ಹಲ್ಲೆ, ಅತ್ಯಾಚಾರಕ್ಕೆ ಯತ್ನ ದೂರು ದಾಖಲು

ಬೆಳಗಾವಿ, ೧೫- ತಮ್ಮ ಕುಟುಂಬದವರು ಮತ್ತು ಜೊತೆಗಿದ್ದವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೇ ತಮ್ಮನ್ನೂ ಸೇರಿ ತಮ್ಮ ಜೊತೆಯಲ್ಲಿದ್ದ ಇತರ ಮಹಿಳೆಯರ ಮೇಲೂ ಅತ್ಯಾಚಾರ ಮಾಡಲು ಹುಕ್ಕೇರಿಯ ಪೊಲೀಸ್ ಇನ್ ಸ್ಪೆಕ್ಟರ್ ಕಲ್ಯಾಣಶೆಟ್ಟಿ ಯತ್ನಿಸಿದ್ದಾರೆಂದು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇನ್ಸಪೆಕ್ಟರ್ ಕಲ್ಯಾಣಶೆಟ್ಟಿ ಅವರು ಕೂಡ ಪ್ರತಿದೂರು ನೀಡ್ದಿದ್ದು, ತಾವೂ ಸೇರಿದಂತೆ ತಮ್ಮ ಜೊತೆಗಿದ್ದ ಪುರುಷರು, ಮಹಿಳೆಯರ ಮೇಲೆ ದೂರು ನೀಡಿರುವ ಮಹಿಳೆಯ ಜೊತೆಯಿದ್ದವರು ಹಲ್ಲೆ ನಡೆಸಿದ್ದಾರೆ, ತಮ್ಮ ಕಾರುಗಳಿಗೆ ಕಲ್ಲೆಸೆಯಲಾಗಿದೆ ಎಂದು ಆರೋಪಿಸಿದ್ದಾರೆ.

ಬೆಳಗಾವಿ ಶಹಾಪುರದ ಅಳವನ ಗಲ್ಲಿಯ ನಿವಾಸಿ 34 ವರ್ಷದ ಪ್ರಿಯಾಂಕಾ ಸುನೀಲ ಕುರಣಕರ ಎನ್ನುವವರು ಕಲ್ಯಾಣಶೆಟ್ಟಿ ವಿರುದ್ಧ ದೂರು ದಾಖಲಿಸಿದ್ದಾರೆ.

ಮಹಿಳೆಯ ದೂರಿನ ಸಾರಾಂಶ ಇಂತಿದೆ :

“13ರಂದು ರಾತ್ರಿ 11.15 ರ ಸುಮಾರಿಗೆ ತಾವು ಸಂಬಂಧಿಕರ ಹುಟ್ಟುಹಬ್ಬದ ಪಾರ್ಟಿ ಮುಗಿಸಿ ಖಾನಾಪುರ ತಾಲೂಕಿನ ಕುಸಮಳ್ಳಿಯ ರೆಸಾರ್ಟ್ ನಿಂದ ಹಿಂತಿರುಗುತ್ತಿದ್ದೆವು. ಈ ವೇಳೆ, ಕೆಟ್ಟ ರಸ್ತೆಯಲ್ಲಿ ನಾವು ಪ್ರಯಾಣಿಸುತ್ತಿದ್ದ ಇನೋವಾ ಕಾರು ಮುಂದಿದ್ದ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ನಾವು ಅವರ ಬಳಿ ಕ್ಷಮೆ ಕೇಳಿ, ಕಾರಿನ ದುರಸ್ತಿ ವೆಚ್ಚ ಭರಿಸುವುದಾಗಿ ತಿಳಿಸಿದೆವು.

ಮಾತುಕತೆ ಮುಂದುವರಿಯುತ್ತಿದ್ದಾಗಲೇ ಅಲ್ಲಿಗೆ ಬಂದ ಹುಕ್ಕೇರಿ ಸಿಪಿಐ ಕಲ್ಯಾಣ ಶೆಟ್ಟಿ ಮತ್ತು ಇತರ 4 -5 ಜನರು ರಿವಾಲ್ವರ್ ತೋರಿಸಿ ನಮಗೆ ಜೀವ ಬೆದರಿಕೆ ಹಾಕಿದರು. ನಮ್ಮ ಜೊತೆಗಿದ್ದ ನನ್ನ ಪತಿ ಮತ್ತು ಸಂಬಂಧಿಕರಿಗೆಲ್ಲ ಮನಬಂದಂತೆ ಥಳಿಸಿದರು. ನಾನು ಸೇರಿದಂತೆ ಜೊತೆಗಿದ್ದ ಕೆಲವು ಮಹಿಳೆಯರ ಮಾನಭಂಗಕ್ಕೆ ಯತ್ನಿಸಿದರು. ನಿಮ್ಮೆಲ್ಲರ ಮೇಲೆ ಅತ್ಯಾಚಾರ ಮಾಡಿ ತೆಗ್ಗಿನಲ್ಲಿ ಹಾಕಿ ಹೋಗುತ್ತೇನೆ. ನಾನು ಬೆಳಗಾವಿಯ ಡಾನ್. ನನ್ನನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಯಾರಿಗಾದರೂ ತಿಳಿಸಿದರೆ ನಿಮ್ಮನ್ನು ಮುಗಿಸಿ ಬಿಡುತ್ತೇನೆ ಎಂದು ಜೀವ ಬೆದರಿಕೆ ಹಾಕಿದರು” ಎಂದು ದೂರಿನಲ್ಲಿ ತಿಳಿಸಲಾಗಿದೆ.

ಎದುರುದಾರರ ದೂರು

ಆದರೆ, ಕಲ್ಯಾಣ ಶೆಟ್ಟಿ ಮತ್ತು ಕುಟುಂಬ ಸಹ ದೂರು ದಾಖಲಿಸಿದೆ. ಕಲ್ಯಾಣ ಶೆಟ್ಟಿ ಕುಟುಂಬ ಸಹ ಒಂದು ಹುಟ್ಟು ಹಬ್ಬದ ಪಾರ್ಟಿ ಮುಗಿಸಿಕೊಂಡು 2 ವಾಹನಗಳಲ್ಲಿ ಬರುತ್ತಿತ್ತು. ಕಲ್ಯಾಣ ಶೆಟ್ಟಿ ಕಾರು ಮುಂದೆ ಹೋಗಿತ್ತು. ಹಿಂದಿನಿಂದ ಅವರ ತಾಯಿ ಮತ್ತಿತರರು ಬರುತ್ತಿದ್ದರು. ಆ ಕಾರಿಗೆ ಪ್ರಿಯಾಂಕಾ ಎನ್ನುವವರು ಬರುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ.

ಢಿಕ್ಕಿ ಹೊಡೆದವರು 12 -15 ಜನರಿದ್ದರು. ಕಲ್ಯಾಣಶೆಟ್ಟಿ ಕುಟುಂಬದವರು ಕೇವಲ 5 ಜನರಿದ್ದರು. ತಾವೇ ಡಿಕ್ಕಿ ಹೊಡೆದು ಕಾರಿಗೆ ಕಲ್ಲು ತೂರಿ, ಹಲ್ಲೆ ನಡೆಸಿದ್ದಾರೆ. ಸುದ್ದಿ ತಿಳಿದ ತಕ್ಷಣ ಕಲ್ಯಾಣ ಶೆಟ್ಟಿ ವಾಪಸ್ ಬಂದಿದ್ದಾರೆ. ಆದರೆ ಕಲ್ಯಾಣ ಶೆಟ್ಟಿ ಬಳಿ ರಿವಾಲ್ವರಿ ಇರಲಿಲ್ಲ. ಅವರು ರಜೆಯ ಮೇಲಿದ್ದರು, ಪೊಲೀಸ್ ಡ್ರೆಸ್ ನಲ್ಲಿರಲಿಲ್ಲ. ಅವರ ತಾಯಿ ಮತ್ತು ಕುಟುಂಬದ ಮೇಲೆ ಹಲ್ಲೆ ನಡೆಸಿ, ಕಾರಿಗೆ ಕಲ್ಲು ತೂರಿದ್ದರಿಂದ ಕಲ್ಯಾಣ ಶೆಟ್ಟಿ ಅವರನ್ನು ಥಳಿಸಿದ್ದಾರೆ ಎನ್ನಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!