Washington

ಕೋವಿಡ್ ಲಸಿಕೆಗಳಿಗಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ವಿಶ್ವಬ್ಯಾಂಕ್ ನಿಂದ 12 ಶತಕೋಟಿ ಡಾಲರ್ ನೆರವು

ವಾಷಿಂಗ್ಟನ್, ಅ 14- ತಮ್ಮ ದೇಶದ ನಾಗರಿಕರಿಗಾಗಿ ಕೋವಿಡ್-19 ಲಸಿಕೆಗಳ ಖರೀದಿ ಮತ್ತು ವಿತರಣೆ, ಪರೀಕ್ಷೆಗಳು ಮತ್ತು ಚಿಕಿತ್ಸೆಗಳಿಗಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ 12 ಶತಕೋಟಿ ಡಾಲರ್ ನೆರವು ಒದಗಿಸಲು ವಿಶ್ವಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕರ ಮಂಡಳಿ ಅನುಮೋದಿಸಿದೆ.

100 ಕೋಟಿ ಜನರಿಗೆ ಲಸಿಕೆ ಹಾಕುವುದನ್ನು ಬೆಂಬಲಿಸುವ ಗುರಿಯನ್ನು ಹೊಂದಿರುವ ಈ ಹಣಕಾಸು ನೆರವು, ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸಾಂಕ್ರಾಮಿಕ ರೋಗ ವಿರುದ್ಧದ ಹೋರಾಟಕ್ಕೆ ಸಹಾಯ ಮಾಡಲು ಜೂನ್ 2021 ರ ವೇಳೆಗೆ ಒಟ್ಟಾರೆ 160 ಶತಕೋಟಿ ಡಾಲರ್ ಒದಗಿಸುವ ವಿಶ್ವಬ್ಯಾಂಕ್ ಪ್ಯಾಕೇಜ್ ನ ಭಾಗವಾಗಿದೆ ಎಂದು ಮಂಗಳವಾರ ಬಿಡುಗಡೆ ಮಾಡಿದ ವಿಶ್ವಬ್ಯಾಂಕ್ ನ ಪ್ರಕಟಣೆ ತಿಳಿಸಿದೆ.

111 ದೇಶಗಳನ್ನು ತಲುಪುತ್ತಿರುವ ವಿಶ್ವ ಬ್ಯಾಂಕ್ ನ ಕೊವಿಡ್ ತುರ್ತುನಿರ್ವಹಣಾ ಕಾರ್ಯಕ್ರಮಗಳಿಗೆ ಹೊಸ ನೆರವು ಸೇರಲಿದೆ. ‘ಕೋವಿಡ್ ತುರ್ತು ಪರಿಸ್ಥಿತಿಯ ನಿರ್ವಹಣೆಗೆ ವೇಗದ ಮಾರ್ಗವನ್ನು ವಿಸ್ತರಿಸುತ್ತಿದ್ದೇವೆ. ಇದರಿಂದ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಲಸಿಕೆಗಳು ಕಡಿಮೆ ದರದಲ್ಲಿ ಸುಲಭವಾಗಿ ಲಭ್ಯವಾಗಲಿದೆ ಎಂದು ವಿಶ್ವ ಬ್ಯಾಂಕ್ ಸಮೂಹದ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಹೇಳಿದ್ದಾರೆ.

‘ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಗಳು ಮತ್ತು ಬಲಪಡಿಸಿದ ವಿತರಣಾ ವ್ಯವಸ್ಥೆಗಳಿಂದ ಸಾಂಕ್ರಾಮಿಕ ರೋಗದ ಹಾದಿಯನ್ನು ಬದಲಿಸಲು ಮತ್ತು ಕೋವಿಡ್ ನಿಂದ ಆರ್ಥಿಕ ಪರಿಣಾಮಗಳನ್ನು ಎದುರಿಸುತ್ತಿರುವ ದೇಶಗಳು ಚೇತರಿಕೆಯತ್ತ ಸಾಗಲು ಸಹಾಯವಾಗಲಿದೆ.’ಎಂದು ಮಾಲ್ಪಾಸ್ ಹೇಳಿದ್ದಾರೆ.

ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವರದಿಯಂತೆ, ಜಾಗತಿಕ ಕೊವಿಡ್-19 ಪ್ರಕರಣಗಳು ಮಂಗಳವಾರ ರಾತ್ರಿ ವೇಳೆಗೆ 3 ಕೋಟಿ 80 ಲಕ್ಷ ದಾಟಿವೆ.

Leave a Reply

Your email address will not be published. Required fields are marked *

Back to top button
error: Content is protected !!