Editorial

ರಾಜನ್ ಮತ್ತು ನಾಗೇಂದ್ರ

ಭಾರತೀಯ ಸಿನಿಮಾದ ವಿಶಿಷ್ಟತೆಯೇ ಅದರ ಸಂಗೀತ ಮತ್ತು ಹಾಡುಗಳು. ಬೇರೆ ಯಾವುದೇ ದೇಶ ಮತ್ತು ಅಲ್ಲಿನ ಭಾಷೆ ಇಂಥ ಕಲ್ಪನೆ ಮೈಗೂಡಿಸಿಕೊಂಡಿದ್ದು ಇಲ್ಲ. ಇಡೀ ಒಂದು ಸನ್ನಿವೇಶದ ಭಾವವನ್ನು ಹಾಡಿನ ಮೂಲಕ ಕಟ್ಟಿ ಕೊಡುವ ಇಲ್ಲಿನ ಅನನ್ಯತೆಯನ್ನು ಬೇರೆ ದೇಶದವರು ಬೆರಗಿನಿಂದ ಗಮನಿಸುತ್ತಾರೆ. ಇಂಥ ಕಲ್ಪನೆಗೆ ಮೂಲ ಕಾರಣ ಇಲ್ಲಿನ ನಾಟಕಗಳಿಂದ ನಮ್ಮ ಸಿನೆಮಾ ವಿಕಾಸ ಹೊಂದಿದ್ದು. ನಾಟಕದಲ್ಲಿ ಹಾಡುಗಳು ಅಗತ್ಯವೋ ಇಲ್ಲವೋ ಆದರೆ ಭರ್ಜರಿಯಾಗಿ ಇರುತ್ತಿದ್ದವು. ಮೊದಲು ತೆರೆಕಂಡ ಭಾರತೀಯ ಸಿನಿಮಾಗಳಲ್ಲಿ ಇಪ್ಪತ್ತರ ವರೆಗೂ ಹಾಡುಗಳು ಇರುತ್ತಿದ್ದವು.

ಹೀಗೆ ಸಿನೆಮಾಗಳಿಗೆ ಸಂಗೀತ ಹೊಂದಿಸುವ ಹೊಸ ಪರಂಪರೆ ಹುಟ್ಟಿಕೊಂಡ ಇಲ್ಲಿ, ಪೈಪೋಟಿಯೂ ಇತ್ತು. ಒಂದೊಂದು ಕಾಲಕ್ಕೆ ಒಬ್ಬೊಬ್ಬ ಸಂಗೀತ ನಿರ್ದೇಶಕ ಜನಪ್ರಿಯ ಇದ್ದರು. ಯಾರೂ ಹೆಚ್ಚು ಕಾಲ ತಮ್ಮ ಜನಪ್ರಿಯತೆ ಉಳಿಸಿಕೊಳ್ಳಲು ಆಗುತ್ತಿರಲಿಲ್ಲ. ಅಂಥದರಲ್ಲಿ ಸತತ ಮೂರೂವರೆ ದಶಕಗಳಿಗಿಂತಲೂ ಹೆಚ್ಚು ಅವಧಿಯ ವರೆಗೆ ಮಹತ್ತರ ಸಾಧನೆ ಮಾಡಿದವರು ಶಂಕರ ಮತ್ತು ಜೈಕಿಶನ್ ಜೋಡಿ. ಅದರಂತೆ ಸತತ ನಾಲ್ಕು ದಶಕಗಳ ವರೆಗೆ ತಮ್ಮ ಜನಪ್ರಿಯತೆ ಸತತವಾಗಿ ಉಳಿಸಿಕೊಂಡು ಬಂದಿದ್ದು ಲಕ್ಷ್ಮೀಕಾಂತ ಮತ್ತು ಪ್ಯಾರೇಲಾಲ ಜೋಡಿ. ಅದೇ ರೀತಿ ಕನ್ನಡದಲ್ಲಿ ಹೆಚ್ಚಿನ ಕಾಲ ಸಾಧನೆ ಮಾಡಿದ್ದು ರಾಜನ್ ಹಾಗು ನಾಗೇಂದ್ರ ಜೋಡಿ.

ಉಳಿದ ದಕ್ಷಿಣ ಭಾರತೀಯ ಚಿತ್ರಗಳಂತೆ ಕನ್ನಡ ಚಿತ್ರಗಳ ತಯಾರಿಕೆಯ ನೆಲೆ ಆಗಿದ್ದು ಅಂದಿನ ಮದ್ರಾಸಿನಲ್ಲಿ. ಸೀಮಿತ ಮಾರುಕಟ್ಟೆಯ ಕನ್ನಡ ಚಿತ್ರಗಳಿಗೆ ಹೆಚ್ಚಿನ ಖರ್ಚು ಮಾಡುವುದು ಅಸಾಧ್ಯ ಆಗಿದ್ದ ದಿನಗಳವು. ಆಗ ಅನಿವಾರ್ಯವಾಗಿ ಕನ್ನಡೇತರ ಸಂಗೀತ ನಿರ್ದೇಶಕ ಮತ್ತು ಹಾಡುಗಾರರನ್ನು ಬಳಸಿಕೊಳ್ಳುವುದು ಅನಿವಾರ್ಯ ಆಗಿತ್ತು. ಐವತ್ತರ ದಶಕದಲ್ಲಿ ಬಹು ಬೇಡಿಕೆಯ ಸಂಗೀತ ನಿರ್ದೇಶಕ ಆಗಿದ್ದ ಜಿ.ಕೆ.ವೆಂಕಟೇಶ ಅವರ ಬಿಡುವಿಲ್ಲದ ಕೆಲಸದಿಂದಾಗಿ ಬೇರೆ ಸಂಗೀತ ನಿರ್ದೇಶಕರನ್ನು ಆಶ್ರಯಿಸುವುದು ಅನಿವಾರ್ಯ ಆಯಿತು. ಆಗ ಈ ರಂಗದಲ್ಲಿ ಕಾಣಿಸಿಕೊಂಡವರು ಕನ್ನಡಿಗರೇ ಆದ ವಿಜಯ ಭಾಸ್ಕರ ಮತ್ತು ರಾಜನ್ ನಾಗೇಂದ್ರ ಜೋಡಿ. ಮೈಸೂರಿನವರಾದ ರಾಜನ್ ಮತ್ತು ನಾಗೇಂದ್ರ ಇಬ್ಬರೂ ಎರಡು ದೇಹ ಒಂದು ಜೀವ ಎಂಬಂತೆ ಇದ್ದವರು. ಬಹುಕಾಲ ರಾಜನ್ ನಾಗೇಂದ್ರ ಬೇರೆ ಬೇರೆ ಎಂದು ಕೂಡ ಬಹಳಷ್ಟು ಜನರಿಗೆ ಗೊತ್ತಿರಲಿಲ್ಲ.

ಇವರು ಸಂಗೀತ ನೀಡಿದ ಪ್ರತಿ ಚಿತ್ರದ ಎಲ್ಲ ಹಾಡುಗಳೂ ಜನಪ್ರಿಯ ಆಗುತ್ತಿದ್ದುದು ವಿಶೇಷ. ಒಂದೊಂದು ಸಿನೆಮಾ ಏನು ಹೇಳಲು ಬಯಸುತ್ತಿದೆ ಎಂದು ಅರ್ಥ ಮಾಡಿಕೊಂಡು, ಅದರ ಓಟದ ಸೆಲೆಗೆ ಪೂರಕವಾಗಿ ಹಾಡುಗಳನ್ನು ರಚಿಸುತ್ತಾ ಇದ್ದುದು ಇವರ ವಿಶೇಷ. ‘ಪರಸಂಗದ ಗೆಂಡೆ ತಿಮ್ಮ’ ಸಿನೆಮಾದಲ್ಲಿ ಜಾನಪದ ಶೈಲಿಯ ಹಾಡುಗಳನ್ನು ಬಳಸಿದರೆ, ‘ಮಂತ್ರಾಲಯ ಮಹಾತ್ಮೆ’ ಸಿನೆಮಾದಲ್ಲಿ ಶಾಸ್ತ್ರೀಯ ನೆಲೆಗಟ್ಟಿನ ಹಾಡು ಬಳಸಿದ ಹಾಗೆ ‘ಬಯಲು ದಾರಿ’ಯಲ್ಲಿ ಸರಳ ಭಾವಗೀತಾತ್ಮಕ ರಚನೆ ಬಳಸಿದ್ದನ್ನು ಗಮನಿಸಿದರೆ ಇವರ ಸಂಗೀತದ ವ್ಯಾಪ್ತಿ ಮತ್ತು ವಿಸ್ತಾರ ಗಮನಿಸಬಹುದು. ಹಾಗೇ ಪಾಶ್ಚಿಮಾತ್ಯ ಶೈಲಿಗೂ ಸೈ ಎಂದು ತೋರಿಸಿ ಕೊಟ್ಟ ಜೋಡಿ ಇದು.

ಇವರ ಹಾಡುಗಳ ಜನಪ್ರಿಯತೆಗೆ ಬಹುಮುಖ್ಯ ಕಾರಣ ಅವರು ಬಳಸುತ್ತಿದ್ದ ಜನಪ್ರಿಯ ಮತ್ತು ಸರಳ ಧಾಟಿಗಳನ್ನು. ರಾಘವೇಂದ್ರ ಸ್ವಾಮಿಗಳಿಂದ ವಿರಚಿತ ‘ಇಂದು ಎನಗೆ ಗೋವಿಂದ’ ಹಾಡು ಬಹಳ ಜನಪ್ರಿಯ. ಆದರೆ ಇದಕ್ಕೆ ಬಳಸಿದ್ದ ಧಾಟಿ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಜನಪ್ರಿಯವಾದ ದಾಸರ ಪದ ‘ಓಡಿ ಬಾರಯ್ಯ ವೈಕುಂಠಪತಿ ನೋಡುವೆ ನಿನ್ನ ಮನದಣಿಯ’ ಎಂಬುದಾಗಿತ್ತು ಎಂದು ಸಂಗೀತ ನಿರ್ದೇಶಕರೇ ಖುದ್ದು ಹೇಳಿದ್ದರು. ಮದರಾಸಿನಿಂದ ಬೆಂಗಳೂರಿಗೆ ಸಿನೆಮಾ ನಿರ್ಮಾಣ ವರ್ಗಾವಣೆಯಾದ ಮೇಲಂತೂ ಪೂರ್ತಿ ಕನ್ನಡತನವೇ ತುಂಬಿದ ಸಂಗೀತದ ಸುಧೆಯೇ ಸಿನೆಮಾದಲ್ಲಿ ಮೆರೆಯಲಾರಂಭಿಸಿತು. ಆಗ ಅತಿ ಹೆಚ್ಚು ಬೇಡಿಕೆಯಲ್ಲಿ ಇದ್ದುದು ಮತ್ತು ಯಶಸ್ಸು ಸಾಧಿಸಿದ್ದು ರಾಜನ್ ನಾಗೇಂದ್ರ ಜೋಡಿ. ಒಂದು ಸಿನೆಮಾಕ್ಕೆ ಐದು ಹಾಡುಗಳು ಇರಬೇಕು ಎಂದಾದರೆ ಒಂದೊಂದು ಹಾಡಿಗೂ ಮೂರು ವಿಭಿನ್ನ ಧಾಟಿಗಳನ್ನು ಸೃಜಿಸಿ ಒಟ್ಟು ಹದಿನೈದು ಹಾಡುಗಳ ಧಾಟಿಯನ್ನು ಒಪ್ಪಿಸುತ್ತಾ ಇದ್ದುದು ಅವರ ರೀತಿ. ಅದರಲ್ಲಿ ಒಂದೊಂದೂ ಮೆಚ್ಚುವಂಥದ್ದೇ ಇರುತ್ತಿತ್ತು. ಹೀಗಾಗಿ ಅವರು ಸೂಚಿಸಿದ ಹದಿನೈದು ಧಾಟಿಗಳಲ್ಲಿ ಯಾವುದನ್ನು ಒಪ್ಪುವುದು, ಯಾವುದನ್ನು ಬಿಡುವುದು ಎನ್ನುವುದೇ ಸಿನೆಮಾ ತಯಾರಕರಿಗೆ ಕಷ್ಟ ಆಗುತ್ತಿತ್ತು. ಆದರೆ ಆ ಸಿನೆಮಾಗಳ ಎಲ್ಲ ಹಾಡುಗಳೂ ಜನಪ್ರಿಯ ಆಗುತ್ತಿದ್ದುದು ಮಾತ್ರ ಖಂಡಿತ.

ಸಾಹಿತ್ಯ ಮತ್ತು ಹಾಡುಗಾರಿಕೆ ಉಸ್ತುವಾರಿಯನ್ನು ರಾಜನ್ ನೋಡಿಕೊಂಡರೆ ವಾದ್ಯ ವೃಂದದ ಉಸ್ತುವಾರಿಯನ್ನು ನಾಗೇಂದ್ರ ನೋಡಿಕೊಳ್ಳುತ್ತಿದ್ದರು. ಇಂದಿನ ಹಾಗೆ ಸಿಂಥೈಸರ್ ಮೂಲಕ ಸಂಗೀತ ಸೃಜಿಸುವ ಕಾಲ ಅದಲ್ಲ. ನೂರಾರು ಜನ ವಾದ್ಯ ವೃಂದದವರನ್ನು ಇಟ್ಟುಕೊಂಡು, ವಾದ್ಯ ವೃಂದದ ಜೊತೆಗೇ ಗಾಯಕ ಹಾಡಬೇಕಿತ್ತು. ಕಾಲ ಬದಲಾದಂತೆ ಕೇಳುಗರ ಅಭಿರುಚಿ ಮತ್ತು ಅವಸರದ ಅಡುಗೆ ತಯಾರಿಯ ಮಂದಿ ಹೆಚ್ಚಿದ ಪರಿಣಾಮವಾಗಿ ಈ ಜೋಡಿ ಕ್ರಮೇಣ ಹಿಂದೆ ಸರಿಯಿತು. 2000ದಲ್ಲಿ ನಾಗೇಂದ್ರ ವಿಧಿವಶರಾದರು. ಅಲ್ಲಿಗೆ ಈ ಇಬ್ಬರ ಮಾಂತ್ರಿಕ ಯುಗ ಸಮಾಪ್ತಿ ಆಯಿತು.

‘ಸೌಭಾಗ್ಯ ಲಕ್ಷ್ಮಿ’ ಸಿನೆಮಾದಿಂದ ಆರಂಭಿಸಿ ಸತತ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯ ಜೋಡಿ ಎನಿಸಿಕೊಂಡಿದ್ದು ಕಡಿಮೆ ಸಾಧನೆ ಏನಲ್ಲ. ಹಿಂದಿ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಜೋಡಿಗಳ ಸಾಲೇ ಇದೆ. ಶಂಕರ-ಜೈಕಿಷನ್, ಲಕ್ಷ್ಮೀಕಾಂತ-ಪ್ಯಾರೇಲಾಲ, ಕಲ್ಯಾಣಜೀ-ಆನಂದಜೀ, ಸೋನಿಕ-ಓಮಿ, ನದೀಮ-ಶ್ರವಣ, ಜತೀನ-ಲಲಿತ, ಆನಂದ-ಮಿಲಿಂದ, ಶಿವ-ಹರಿ, ವಿಶಾಲ-ಶೇಖರ, ಸಲೀಮ-ಸುಲೇಮಾನ, ಸಾಜೀದ-ವಾಜೀದ, ದಿಲೀಪ ಸೇನ್-ಸಮೀರ ಸೇನ್ ಇದ್ದಾರೆ. ಆದರೆ ಕನ್ನಡದ ಮಟ್ಟಿಗೆ ಇನ್ನೊಂದು ಸಂಗೀತ ನಿರ್ದೇಶಕ ಜೋಡಿ ಹುಟ್ಟಿತಾದರೂ ಅದು ಬಹಳ ಕಾಲ ಬಾಳಲಿಲ್ಲ, ಅದು ಅಶ್ವಥ ವೈದಿ ಜೋಡಿ. ಇವರಿಬ್ಬರೂ ಅಪರೂಪ ಎನಿಸುವ ರೀತಿಯಲ್ಲಿ ಕೆಲಸ ಮಾಡಿದರಾದರೂ ಅವರನ್ನು ಬಳಸಿಕೊಳ್ಳಲು ಕನ್ನಡದ ವಾಣಿಜ್ಯ ಚಿತ್ರರಂಗ ತಯಾರಿರಲಿಲ್ಲ. ತಮಿಳಿನಿಂದ ಬಂದ ಶಂಕರ ಗಣೇಶ ಕೂಡ ಇಲ್ಲಿ ಹೆಚ್ಚು ಕಾಲ ಉಳಿಯಲಿಲ್ಲ. ಅಂಥದರಲ್ಲಿ ತಮ್ಮ ಜನಪ್ರಿಯತೆ ಉಳಿಸಿಕೊಂಡು ಕನ್ನಡದ ಸಿನೆಮಾಗಳಿಗೆ ಸುದೀರ್ಘ ಕಾಲ ಅತ್ಯುತ್ತಮ ಸಂಗೀತ ನೀಡಿದ ಜೋಡಿಯ ಕೊನೆಯ ಕೊಂಡಿ ರಾಜನ್ ಇತ್ತೀಚೆಗೆ ನಿಧನರಾದರು. ಅದರೊಂದಿಗೆ ಕನ್ನಡ ಚಿತ್ರಸಂಗೀತ ಜಗತ್ತಿನ ಮತ್ತೊಂದು ಅಧ್ಯಾಯ ಕೊನೆಯಾದಂತಾಗಿದೆ.

-ಎ.ಬಿ.ಧಾರವಾಡಕರ

Related Articles

Leave a Reply

Your email address will not be published. Required fields are marked *

Back to top button
error: Content is protected !!