Mysore

ಲಾಕ್ ಡೌನ್ ನಿಂದ ಕೆಎಸ್ ಆರ್ ಟಿಸಿಗೆ 1,600 ಕೋಟಿ ರೂ.ನಷ್ಟ

ಮೈಸೂರು, ಅಕ್ಟೋಬರ್ 12 – ರಾಜ್ಯದಲ್ಲಿ ಕೊರೊನಾ ಲಾಕ್ ಡೌನ್ ನಿಂದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ-ಕೆಎಸ್ ಆರ್ ಟಿಸಿಗೆ 1600 ಕೋಟಿ ರೂ.ನಷ್ಟವಾಗಿದೆ ಎಂದು ಶಾಸಕ ಹಾಗೂ ಕೆ.ಎಸ್.ಆರ್.ಟಿ.ಸಿ ಅಧ್ಯಕ್ಷ ಎಂ.ಚಂದ್ರಪ್ಪ ತಿಳಿಸಿದ್ದಾರೆ.

ಮೈಸೂರು ನಗರದ ಗ್ರಾಮಾಂತರ ಕೆ.ಎಸ್.ಆರ್.ಟಿ.ಸಿ ಕಚೇರಿಯಲ್ಲಿಂದು ಮೈಸೂರು ನಗರ ಹಾಗೂ ಗ್ರಾಮಾಂತರ ವಿಭಾಗದ ಕೆ.ಎಸ್.ಆರ್.ಟಿ.ಸಿ ವಿಭಾಗದ ಅಧಿಕಾರಿಗಳ ಸಭೆಯ ನಂತರ ಅವರು ಈ ವಿಷಯ ತಿಳಿಸಿದರು.

ಕೊರೊನಾದಿಂದ ಮೈಸೂರು ವಿಭಾಗದಲ್ಲಿ 70 ಕೋಟಿ ರೂ.ನಷ್ಟವಾಗಿದೆ. ಲಾಭದ ದೃಷ್ಟಿಗಿಂತ ಸಾರ್ವಜನಿಕರ ಸೇವೆಯೇ ನಿಗಮದ ಗುರಿಯಾಗಿದೆ ಎಂದರು.
ಕಟ್ಟಡ ಕಾರ್ಮಿಕರಿಗೆ ಉಚಿತವಾಗಿ ರಾಜ್ಯ ವ್ಯಾಪಿ ಸಂಚರಿಸಲು ಪಾಸ್ ನೀಡಲಾಗುವುದು. ಈ ಬಗ್ಗೆ ಪ್ರತಿ ಜಿಲ್ಲೆಯ ಕಾರ್ಮಿಕ ಇಲಾಖೆಯ ಅಧಿಕಾರಿಗಳೊಡನೆ ಸಮಾಲೋಚನೆ ನಡೆಸಲಾಗುವುದು. ಕೋವಿಡ್19 ನಿಂದ ತತ್ತರಿಸಿ ಹೋಗಿದ್ದ ಕೂಲಿ ಕಾರ್ಮಿಕರಿಗೆ ನೆರವಾಗಲೆಂದು ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ. ಇದರಿಂದ ಜಿಲ್ಲೆಯಿಂದ ಜಿಲ್ಲೆಗೆ ಕೂಲಿ ಕಾರ್ಮಿಕರು ಪ್ರಯಾಣ ಬೆಳೆಸಿ ತಮ್ಮ ಕೆಲಸ ಕಾರ್ಯಗಳಿಗೆ ಉಚಿತವಾಗಿ ತೆರಳಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ದಸರಾಗೆ 90 ಬಸ್ ವ್ಯವಸ್ಥೆ: ದಸರಾ ಆಚರಣೆ ಹಿನ್ನೆಲೆಯಲ್ಲಿ ಸಾರ್ವಜನಿಕರ ಅಗತ್ಯತೆ ಅನುಸಾರವಾಗಿ ಮೈಸೂರು ಗ್ರಾಮಾಂತರ ವಿಭಾಗದ 70 ಹಾಗೂ ಮೈಸೂರು ನಗರ ವಿಭಾಗದಿಂದ 20 ಬಸ್ ಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದು ಚಂದ್ರಪ್ಪ ತಿಳಿಸಿದರು.

ಮೈಸೂರು ಜಿಲ್ಲೆಯ ಗ್ರಾಮಾಂತರ ಹಾಗೂ ನಗರ ವಿಭಾಗಗಳನ್ನು ಒಂದೇ ವಿಭಾಗವಾಗಿ ಮಾಡಲಾಗುವುದು. ಖಾಸಗಿ ಬಸ್ ಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗುವುದು. ಕೋವಿಡ್ ನಿಂದ ಮೃತಪಟ್ಟಿರುವ ಕುಟುಂಬಗಳಿಗೆ ಸರ್ಕಾರದ ಜೊತೆ ಮಾತುಕತೆ ನಡೆಸಿ ಪರಿಹಾರ ನೀಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Leave a Reply

Your email address will not be published. Required fields are marked *

Back to top button
error: Content is protected !!