New Delhi

ಕೃಷಿ ಕಾನೂನುಗಳನ್ನು ಪ್ರಶ್ನಿಸಿ ಅರ್ಜಿ; ಪ್ರತಿಕ್ರಿಯಿಸಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ನವದೆಹಲಿ, ಅ 12- ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಹೊಸ ಕೃಷಿ ಸಂಬಂಧಿ ಕಾಯ್ದೆಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ಸಂಬಂಧ ಪತ್ರಿಕ್ರಿಯೆ ನೀಡುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೋಮವಾರ ಸೂಚಿಸಿದೆ.

ವಕೀಲ ಎಂ.ಎಲ್.ಶರ್ಮ, ಛತ್ತೀಸ್‌ಗಢದ ಕಿಸಾನ್‌ ಕಾಂಗ್ರೆಸ್‌ ಮತ್ತ ಡಿಎಂಕೆ ಸಂಸದ ತಿರುಚಿ ಸೇವ ಸಲ್ಲಿಸಿರುವ ಮೂರು ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೋಬ್ಡೆ ನೇತೃತ್ವದ ನ್ಯಾಯಪೀಠ ಈ ಸೂಚನೆ ನೀಡಿದೆ.

ವಿಚಾರಣೆ ವೇಳೆ ಕಾಂಗ್ರೆಸ್‌ ಪರ ವಕೀಲರು, ಈ ಹೊಸ ಕಾನೂನುಗಳನ್ನು ಮಂಡಿ ವ್ಯವಸ್ಥೆಯನ್ನು ತೊಡೆದುಹಾಕಲು ರೂಪಿಸಲಾಗಿದೆ ಎಂದು ವಾದಿಸಿದರು.
ಇದಕ್ಕೆ ನ್ಯಾಯಪೀಠ, ಅರ್ಜಿದಾರರು ಕಾಯ್ದೆ ಪ್ರಶ್ನಿಸಿ ಸಂಬಂಧಪಟ್ಟ ಹೈಕೋರ್ಟ್‌ಗಳಿಗೆ ಅರ್ಜಿ ಸಲ್ಲಿಸಬಹುದು ಎಂದಿತು. ಇದಕ್ಕೆ ವಕೀಲರು, ನ್ಯಾಯಾಲಯಗಳು ವ್ಯತಿರಿಕ್ತ ಆದೇಶ ನೀಡಿದಲ್ಲಿ ಅದು ಮತ್ತಷ್ಟು ಗೊಂದಲಕ್ಕೆ ಕಾರಣವಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದರು. ನಂತರ ನ್ಯಾಯಪೀಠ, ಅರ್ಜಿಗಳ ಸಂಬಂಧ ಆರು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಅಟಾರ್ಜಿ ಜನರಲ್‌ ಅವರಿಗೆ ಸೂಚಿಸಿತು.

ಹೊಸ ಕಾನೂನಿನ ಪ್ರಕಾರ, ರೈತರು ಈಗ ತಮ್ಮ ಉತ್ಪನ್ನಗಳನ್ನು ಮಂಡಿಗಳ ಹೊರಗೆ ಮಾರಾಟ ಮಾಡಲು ಸಾಧ್ಯವಾಗುತ್ತದೆ ಅಥವಾ ಖಾಸಗಿ ವ್ಯಾಪಾರಿಗಳು ನೇರವಾಗಿ ರೈತರಿಂದ ಖರೀದಿಸಬಹುದು. ಗುತ್ತಿಗೆ ಕೃಷಿಗೆ ಕಾನೂನುಗಳು ಕಾನೂನು ಚೌಕಟ್ಟನ್ನು ಒದಗಿಸುತ್ತವೆ. ಅಗತ್ಯ ಸರಕುಗಳ ಕಾಯ್ದೆಯಡಿ ಧಾನ್ಯಗಳು, ಬೇಳೆಕಾಳುಗಳು, ಈರುಳ್ಳಿ, ಖಾದ್ಯ ಎಣ್ಣೆಕಾಳುಗಳು ಮತ್ತು ತೈಲಗಳ ಮೇಲಿನ ಸಂಗ್ರಹ ಮಿತಿ ಮತ್ತು ಬೆಲೆ ನಿಯಂತ್ರಣವನ್ನು ತೆಗೆದುಹಾಕಲಾಗಿದೆ.
ಈ ಕಾಯ್ದೆಗಳು ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆ ನೀಡುವ ಎಪಿಎಂಸಿಗಳನ್ನು ರದ್ದುಗೊಳಿಸಲಿದೆ ಮತ್ತು ಸಣ್ಣ ಮತ್ತು ಮಧ್ಯಮ ರೈತರು ಕಾರ್ಪೊರೇಟ್‌ ಉದ್ಯಮಿಗಳ ಆದೇಶಗಳನ್ನು ಪಾಲಿಸಬೇಕಾಗುತ್ತದೆ ಎಂದು ವಕೀಲರು ವಾದಿಸಿದರು.

ಕೃಷಿ ಸಂಬಂದಿ ಕಾಯ್ದೆಗಳನ್ನು ತಿದ್ದುಪಡಿ ಮಾಡಲು ರಾಜ್ಯಗಳಿಗೆ ಮಾತ್ರ ಅವಕಾಶವಿದೆ. ಕೇಂದ್ರ ಸರ್ಕಾರ ಸಂವಿಧಾನದ ಏಳನೇ ವಿಧಿಯ ಈ ನಿಯಮಗಳನ್ನು ಉಲ್ಲಂಘಿಸಿ ಎಂದು ಡಿಎಂಕೆ ಸಂಸದರು ಅರ್ಜಿಯಲ್ಲಿ ಆಕ್ಷೇಪಿಸಿದ್ದಾರೆ

ಈ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಕೇಂದ್ರ ಸರ್ಕಾರ ಸಂವಿಧಾನದ 14 ನೇ ವಿಧಿ ( ಸಮಾನತೆ), 21 (ಜೀವ ರಕ್ಷಣೆ ಮತ್ತು ವೈಯಕ್ತಿಕ ಸ್ವಾತಂತ್ರ್ಯ), 23 (ಬಲವಂತದ ಕಾರ್ಮಿಕರ ನಿಷೇಧ) ಉಲ್ಲಂಘಿಸಿದೆ ಎಂದು ಕಿಸಾನ್ ಕಾಂಗ್ರೆಸ್ ಛತ್ತೀಸ್‌ಗಢ ಸಲ್ಲಿಸಿದ್ದ ಅರ್ಜಿಯಲ್ಲಿ ದೂರಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!