Bengaluru

ಮಧುರ ಸಂಗೀತ ಸಂಯೋಜನೆಗೆ ಕಿತ್ತಾಡುತ್ತಿದ್ದ ರಾಜನ್ ನಾಗೇಂದ್ರ!

ಬೆಂಗಳೂರು, ಅ 12 (ಯುಎನ್‍ಐ) ‘ತರಿಕೆರೆ ಏರಿ ಮೇಲೆ ಮೂರು ಕರಿ ಕುರಿ ಮರಿ ಮೇಯ್ತಿತ್ತು ಹಾ. . ಯಾ. . ಗಿ ಮೇಯ್ತಿತ್ತು’ ಹಾಡನ್ನು ಇಷ್ಟಪಡದವರು ಯಾರು, ‘ಆಕಾಶವೆ ಬೀಳಲಿ ಮೇಲೆ’ ‘ಯಾವ ಹೂವು ಯಾರ ಮುಡಿಗೊ’. ಮೆಚ್ಚಿಕೊಳ್ಳದವರಾರು? ಸಾವಿರಾರು ಗೀತೆಗಳ ಮೂಲಕ ಸಂಗೀತ ಪ್ರಿಯರನ್ನು ಮೋಡಿದ್ದು ರಾಜನ್-ನಾಗೇಂದ್ರ ಜೋಡಿ.

ಭಾರತೀಯ ಚಿತ್ರರಂಗ ಕಂಡ ಅತ್ಯದ್ಭುತ ಸಂಗೀತ ನಿರ್ದೇಶಕರಲ್ಲಿ ಸಹೋದರರಾದ ರಾಜನ್ –ನಾಗೇಂದ್ರ ಜೋಡಿಯೂ ಒಂದು. “ಮಂತ್ರಾಲಯ ಮಹಾತ್ಮೆ ಚಿತ್ರದಿಂದ ಪರಿಚಿತರಾದ ಈ ಸೋದರರು ಚಿತ್ರ ಸಂಗೀತಕ್ಕೆ ನೀಡಿರುವ ಕೊಡುಗೆ ಅಪಾರ. ಹಾಡು ಇನ್ನಷ್ಟು, ಮತ್ತಷ್ಟು ಚೆನ್ನಾಗಿ ಬರಬೇಕೆಂಬ ಉದ್ದೇಶಕ್ಕೆ ಇಬ್ಬರೂ ಕಿತ್ತಾಡಿಕೊಳ್ತಿದ್ರು. ಅವರ ಆ ಕೋಳಿಜಗಳೇ ಇಂದಿಗೂ ಅದ್ಭುತ ಹಾಡುಗಳ ಎಲ್ಲ ಕಿವಿಗೆ ಇಂಪು ನೀಡುತ್ತಿವೆ. “ಅಣ್ಣಾ ಆ ರಾಗ ತೆಗೆದು ಇದನ್ನು ಹಾಕು ಅಂತ ನಾಗೇಂದ್ರ ಹೇಳಿದರೆ ಸರಿಮಾಡಲು ಒಪ್ಪುತ್ತಿದ್ದ ರಾಜನ್, ಕೆಲವೊಮ್ಮೆ ನೀನು ಸುಮ್ಮನಿರೋ. . .ಈಗ ನಾನು ಹೇಳಿದ್ದು ನೋಟ್ ಮಾಡ್ಕೋ” ಎನ್ನುತ್ತಿದ್ದರು. ರಾಜಕುಮಾರ್ ವರದಪ್ಪನವರಂತೆ ರಾಜನ್ ನಾಗೇಂದ್ರ ಕೂಡ ಸೌಹಾರ್ದಯುತ ಬಾಂಧವ್ಯವನ್ನು ಹೊಂದಿದ್ದರು ಎಂದು ಹಿರಿಯ ನಿರ್ದೇಶಕ ಭಗವಾನ್ ಯುಎನ್‍ಐ ಜತೆ ನೆನಪುಗಳನ್ನು ಹಂಚಿಕೊಂಡಿದ್ದಾರೆ.

:ಸಿಂಹಳ ಭಾಷೆಯಲ್ಲೂ ಸೂಪರ್ ಹಿಟ್ ಸಾಂಗ್:

ರೇಡಿಯೋ ಸಿಲೋನ್ ನಲ್ಲಿ ರಾಜನ್ ನಾಗೇಂದ್ರ ಅವರ ಹಾಡುಗಳು ಪ್ರಸಾರವಾಗಿ ಅಲ್ಲಿನ ಜನರನ್ನು ರಂಜಿಸಿತ್ತು. ಹೀಗಾಗಿ ಅಲ್ಲಿನ ಚಿತ್ರ ನಿರ್ಮಾಪಕರುಗಳು ಈ ಸೋದರರನ್ನು ಕರೆಸಿ ಸಾಕಷ್ಟು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದರು. ಮ್ಯೂಸಿಕಲ್ ಹಿಟ್ ಆದ ಚಿತ್ರಗಳ ಸಮಾರಂಭಕ್ಕೆ ಇವರಿಬ್ಬರನ್ನೂ ಆಹ್ವಾನಿಸಿ ಸನ್ಮಾನಿಸಿದ್ದರಂತೆ.

ಕನ್ನಡ, ತುಳು, ಹಿಂದಿ, ತಮಿಳು, ತೆಲುಗು ಮಾತ್ರವಲ್ಲದೆ ಒಂದೆರಡು ಹಿಂದಿ ಚಿತ್ರಗಳಿಗೂ ಸಹ ರಾಜನ್ ನಾಗೇಂದ್ರ ಸಂಗೀತ ಸಂಯೋಜನೆ ಮಾಡಿದ್ದಾರೆ.

:ಪ್ರತಿ ಚಿತ್ರಗಳ ಮೊದಲ ಹಾಡಿನ ಸಂಯೋಜನೆಗೆ ಮೊದಲು ಅಮ್ಮನ ಹಾರೈಕೆ:

ಅತ್ಯಂತ ಮೃದುವಾಗಿ ಮಾತನಾಡುತ್ತಿದ್ದ ರಾಜನ್, ಕೊಂಚ ಜೋರು ದನಿ ಹೊಂದಿದ್ದ ನಾಗೇಂದ್ರ ಅವರ ವೈಶಿಷ್ಟ್ಯವೆಂದರೆ, ಮದರಾಸಿನಲ್ಲಿ ಇರುವತನಕ ಯಾವುದೇ ಚಿತ್ರದ ಮೊದಲ ಹಾಡಿಗೆ ಸಂಗೀತ ಸಂಯೋಜಿಸಿರುವ ಮುನ್ನ ತಾಯಿಯನ್ನು ಕರೆಸಿಕೊಂಡು ಆಶೀರ್ವಾದ ಪಡೆದು ನಂತರವೇ ಕೆಲಸ ಪ್ರಾರಂಭಿಸುತ್ತಿದ್ದರು.

-:ರಾಜ್ ಮೆಚ್ಚಿದ್ದ ಸಂಗೀತ ನಿರ್ದೇಶಕರು:-

1974ರಲ್ಲಿ ಮಂತ್ರಾಲಯ ಮಹಾತ್ಮೆ ಚಿತ್ರಕ್ಕೆ ರಾಜನ್ ನಾಗೇಂದ್ರ ನೀಡಿದ್ದ ಸಂಗೀತವನ್ನು ಡಾ. ರಾಜ್ ಕುಮಾರ್ ಬಹುವಾಗಿ ಮೆಚ್ಚಿಕೊಂಡಿದ್ದರು. ‘ನಾ ನಿನ್ನ ಮರೆಯಲಾರೆ’ ಹಾಗೂ ‘ಬಯಲುದಾರಿ’ ಚಿತ್ರದ ಹಾಡುಗಳನ್ನು ಇಷ್ಟಪಡುತ್ತಿದ್ದರಂತೆ. “ಏನ್ ಟ್ಯೂನ್ ಮಾಡಿದಾರೆ” ಎಂದು ಉದ್ಗರಿಸಿದ್ದ ರಾಜ್, ಗಂಧದ ಗುಡಿ, ಹುಲಿಯ ಹಾಲಿನ ಮೇವು ಮೊದಲಾದ ಚಿತ್ರಗಳಿಗೆ ರಾಜನ್ ನಾಗೇಂದ್ರ ಅವರೇ ಸಂಗೀತ ನೀಡಿದ್ದಾರೆ.

-:ರಾಜ್ಯಪ್ರಶಸ್ತಿ:-

ಚಿತ್ರ ನಿರ್ದೇಶಕರುಗಳ ಮೆಚ್ಚಿನ ಸಂಗೀತ ಸಂಯೋಜಕರಾಗಿದ್ದ ‘ಎರಡು ಕನಸು’, ‘ಪರಸಂಗದ ಗೆಂಡೆತಿಮ್ಮ’ ಚಿತ್ರದ ಸಂಗೀತಕ್ಕೆ ರಾಜ್ಯಪ್ರಶಸ್ತಿ ಪಡೆದುಕೊಂಡಿದೆ.

ಪರಿಪೂರ್ಣ ಜೀವನ ಪರಿಪಕ್ವ ಗಾಯನ

“ರಾಜನ್ ನಾಗೇಂದ್ರ ಅವರದ್ದು ಪರಿಪೂರ್ಣ ಜೀವನ, ಪರಿಪಕ್ವವಾದ ಗಾಯನ. ಸ್ಯಾಂಡಲ್ ವುಡ್ ನಲ್ಲಿ ಪ್ರಪ್ರಥಮ ಹಿಟ್ ಮ್ಯೂಸಿಕ್ ನಿರ್ದೇಶಕರು. ಬಾಲಿವುಡ್ ನಲ್ಲಿ ಶಂಕರ್ ಜೈಕಿಶನ್, ಲಕ್ಷ್ಮೀಕಾಂತ್ ಪ್ಯಾರೇಲಾಲ್‍ ಇದ್ದಂತೆ ದಕ್ಷಿಣದಲ್ಲಿ ರಾಜನ್ ನಾಗೇಂದ್ರ ಮತ್ತು ವಿಶ್ವನಾಥನ್ ರಾಮಮೂರ್ತಿ ಅವರ ಹೆಸರಿದೆ” ಎಂದು ಖ್ಯಾತ ಸಂಗೀತ ಸಂಯೋಜಕ ಹಂಸಲೇಖ ಬಣ್ಣಿಸಿದ್ದಾರೆ.

ನಾಲ್ಕು ದಶಕಗಳ ಕಾಲ ಕನ್ನಡ, ತೆಲುಗು, ತಮಿಳು, ತುಳು ಸಿಂಹಳಿ ಭಾಷೆಗಳ ಚಿತ್ರಗಳಿಗೆ ಸಂಗೀತ ನೀಡಿದ್ದಲ್ಲದೆ ಎಲ್ಲ ಹಾಡುಗಳೂ ಜನಪ್ರಿಯತೆ ಪಡೆದುಕೊಂಡಿದ್ದು ವಿಶೇಷ.

ಸಾಂಸ್ಕೃತಿಕ ನಗರಿ ಮೈಸೂರಿನ ಶಿವರಾಂಪೇಟೆಯವರಾದ ರಾಜನ್ ನಾಗೇಂದ್ರ ಅವರ ತಂದೆ ಶಾಮಣ್ಣ ಕೂಡ ಸಂಗೀತ ಸಂಯೋಜಕರು. ಹಾರ್ಮೋನಿಯಂ ವಾದಕರಾಗಿ ಹಲವು ಮೂಕಿ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದರಂತೆ.

ಟಾಕಿ ಯುಗ ಆರಂಭದ ಬಳಿಕ ರಾಜಪ್ಪನವರು ಮನೆಯಲ್ಲೇ ಸಂಗೀತ ಕಲಿಸಲು ಪ್ರಾರಂಭಿಸಿದರು. ಮನೆಯಲ್ಲಿಯೂ ಸಂಗೀತ, ನೆರೆಹೊರೆಯಲ್ಲಿದ್ದ ಪ್ರಸಿಧ್ಧ ಸಂಗೀತಗಾರ ಬಿಡಾರಂ ಕೃಷ್ಣಪ್ಪನವರ ಸಾಂಗತ್ಯದಿಂದ ಸೋದರರಿಬ್ಬರೂ ಸಂಗೀತದ ಬಗ್ಗೆ ಆಸಕ್ತಿ ಹೊಂದಿದ್ದರಲ್ಲಿ ಅಚ್ಚರಿಯೇನೂ ಇಲ್ಲ .

ಇಂತಹ ಸಂಗೀತಮಯ ವಾತಾವರಣ ಪ್ರಭಾವದಿಂದ ರಾಜನ್ ವಯೋಲಿನ್ ಹಾಗೂ ನಾಗೇಂದ್ರ ಜಲತರಂಗ ವಾದ್ಯ ನುಡಿಸುವುದರಲ್ಲಿಯೂ ಪರಿಣತರಾದರು. ಅಲ್ಲದೆ ಬಿಡಾರಂ ಕೃಷ್ಣಪ್ಪನಂತಹವರ ಬಳಿ ಸಂಗೀತ ವಿದ್ಯಾಭ್ಯಾಸವಾಗಿದ್ದಲ್ಲದೆ, ಟಿ. ಚೌಡಯ್ಯನವರಲ್ಲಿ ರಾಜನ್ ಪಿಟೀಲು ವಾದನ ಕಲಿತರು.

‘ಸೌಭಾಗ್ಯ ಲಕ್ಷ್ಮಿ’ಯೊಂದಿಗೆ ಸಂ‍ಗೀತದ ರಸದೌತಣ:-

ರಾಜನ್-ನಾಗೇಂದ್ರ ಸಂಗೀತ ನಿರ್ದೇಶಕರಾಗುವ ಮೊದಲು ಸುಪ್ರಸಿದ್ಧ ಗಾಯಕ ಪಿ. ಕಾಳಿಂಗರಾಯರ ತಂಡ ಸೇರಿದ ಆಕಾಶವಾಣಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. 1952ರಲ್ಲಿ ಸಭಾಗ್ಯ ಲಕ್ಷ್ಮಿ ಚಿತ್ರದ ಮೂಲಕ ಸ್ವತಂತ್ರವಾಗಿ ಸಂಗೀತ ನಿರ್ದೇಶಿಸುವುದರೊಂದಿಗೆ ಸುಮಧುರ ಹಾಗೂ ವಿಶಿಷ್ಟ ಗೀತೆಗಳ ರಸದೌತಣ ಉಣಬಡಿಸಲು ಆರಂಭಿಸಿದರು.

ಮಾಧುರ್ಯ ತುಂಬಿದ ಹಾಡುಗಳನ್ನು ನೀಡಿದ ಹಾಗೂ ಹಾಡುಗಳಿಗಾಗಿಯೇ ನಮ್ಮ ಬದುಕು ಎನ್ನುತ್ತಿದ್ದ ಸಂಗೀತ ನಿರ್ದೇಶಕರ ಪಟ್ಟಿಯಲ್ಲಿ ಮೊದಲ ಸ್ಥಾನ ರಾಜನ್ ನಾಗೇಂದ್ರ ಅವರಿಗಿದೆ. ಅದಕ್ಕಿಂತಲೂ ಹೆಚ್ಚಾಗಿ ಸಹೋದರರಿಬ್ಬರೂ ಹಾಡುಗಳ ಮೂಲಕ ಎಂದೆಂದಿಗೂ ಜೀವಂತ ಎಂದು ಹೇಳಬಹುದಲ್ಲವೇ?

-ಎಸ್‍ ಆಶಾ ಕಶ್ಯಪ್

Related Articles

Leave a Reply

Your email address will not be published. Required fields are marked *

Back to top button
error: Content is protected !!