Bengaluru

ಮಕ್ಕಳಿಗೆ ಕೊರೋನಾ ಬಗ್ಗೆ ಪತ್ತೆ ಮಾಡಲಾಗುತ್ತಿದೆ : ಸಚಿವ ಸುರೇಶಕುಮಾರ

ಬೆಂಗಳೂರು,ಅ 10- ವಿಶೇಷವಾಗಿ ಸಾಮಾಜಿಕ, ಆರ್ಥಿಕವಾಗಿ ದುರ್ಬಲರಾದ ಮಕ್ಕಳ ಶೈಕ್ಷಣಿಕ‌‌ ಅಗತ್ಯತೆಗಳನ್ನು ಪೂರೈಸುತ್ತಿರು ವ ವಿದ್ಯಾಗಮ ಕಾರ್ಯಕ್ರಮವನ್ನು ನಿಲ್ಲಿಸಬೇಕೆಂಬ ಆಗ್ರಹ ಕೇಳಿಬರುತ್ತಿದೆ. ಇಂದು ಬಹುಪಾಲು ನಮ್ಮ ಸರ್ಕಾರಿ ಶಾಲೆಗಳಿಗೆ ಸೇರಿದ 47 ಲಕ್ಷ ಮಕ್ಕಳು ಈ ಕಾರ್ಯಕ್ರಮದ ಪ್ರಯೋಜನ ಪಡೆಯುತ್ತಿದ್ದಾರೆ. ಎಲ್ಲಿಯೂ ಕಾರ್ಯಕ್ರಮದ ಕಾರಣದಿಂದಲೇ ಸೋಂಕು ಹರಡಿದೆಯೆನ್ನುವುದು ಅಧಿಕೃತವಾಗಿ ದೃಢಪಟ್ಟಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ ಕುಮಾರ ಸ್ಪಷ್ಟೀಕರಣ ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು,ಅತ್ಯಂತ ವೈಜ್ಞಾನಿಕವಾಗಿ ರೂಪಿತವಾಗಿರುವ ಈ‌ ಕಾರ್ಯಕ್ರಮ ನಮ್ಮ ಸಮಾಜದ ದುರ್ಬಲ ಮಕ್ಕಳ‌ ಕಲಿಕೆಯನ್ನು ಮುಂದುವರೆಸಲು, ಶಿಕ್ಷಕ-ವಿದ್ಯಾರ್ಥಿಗಳ‌ ನಡುವಿನ ಸ್ನೇಹ ಸಂಬಂಧ ಗಟ್ಟಿಗೊಳ್ಳುವ ಮೂಲಕ ವಿದ್ಯಾರ್ಥಿಯ ಸಮಗ್ರ‌ ಬೆಳವಣಿಗೆಗೆ ಪೂರಕವಾಗಿದೆ. ಅಷ್ಟೇ ಅಲ್ಲ,ಅವರ ಮಾನಸಿಕ, ದೈಹಿಕ ಸ್ಥಿತಿಗತಿಗಳನ್ನು ಸುಸ್ಥಿತಿಯಲ್ಲಿಡಲು ಅದು ಪೂರಕವಾಗಿದೆ. ಇಡೀ ದೇಶದಲ್ಲಿಯೇ ವಿದ್ಯಾಗಮ ಮಾದರಿಯ ಉಪಕ್ರಮವಾಗಿ‌‌ ಗುರುತಿಸಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಯೋಜನೆಯ ಉಪಯುಕ್ತತೆ, ಅಲ್ಲಿ ಅಳವಡಿಸಿಕೊಳ್ಳಲಾಗಿರುವ ಸುರಕ್ಷತಾ ಕ್ರಮಗಳ ಬಗ್ಗೆ ಯಾರಲ್ಲಿಯೂ ಸಂಶಯ ಬೇಡ. ಆದರೂ ಶಿಕ್ಷಕರ‌ ಕಾರಣಕ್ಕೇ‌ ಮಕ್ಕಳು ಕೋವಿಡ್ ಸೋಂಕಿತರಾಗಿದ್ದಾರೆಯೇ, ಮಕ್ಕಳಿಂದ ಶಿಕ್ಷಕರಿಗೆ ಅದು ಹರಡಿದೆಯೇ ಎಂಬ ಬಗ್ಗೆ ರಾಜ್ಯಾದ್ಯಂತ ಮಾಹಿತಿ ಸಂಗ್ರಹಣೆಗೆ ಇಂದಿನಿಂದಲೇ ನಾವು ಮುಂದಾಗಿದ್ದೇವೆ. ಪ್ರತಿ ಜಿಲ್ಲೆಯಿಂದ, ಸಂಬಂಧಪಟ್ಟವರಿಂದ ಈ ಸಂಪೂರ್ಣ ಮಾಹಿತಿ ಈ ಕೂಡಲೇ ಸಂಗ್ರಹಿಸಲಾಗುವುದು.‌ ಸಂಪೂರ್ಣ ಮಾಹಿತಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಅವರು ಭರವಸೆ ನೀಡಿದ್ದಾರೆ. ‌

ಮಕ್ಕಳ-ಶಿಕ್ಷಕರ ಆರೋಗ್ಯಕ್ಕಿಂತ ಇನ್ನಾವ ಕಾರ್ಯಕ್ರಮವೂ ಮುಖ್ಯವಲ್ಲ ಎಂಬುದನ್ನು ಸ್ಪಷ್ಟಪಡಿಸಲಿಚ್ಛಿಸುತ್ತೇನೆ.‌ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣದ ಬಗ್ಗೆ,ಹೆಚ್ಚುತ್ತಿರುವ ಬಾಲ್ಯ ವಿವಾಹ, ಬಾಲ ‌ಕಾರ್ಮಿಕ‌ ಪದ್ಧತಿಗಳ‌ ನಿಯಂತ್ರಣ ಕುರಿತಾದ ನಮ್ಮೆಲ್ಲರ ಕಾಳಜಿಯಿರಲಿ ಎನ್ನುವುದು ನನ್ನ ಅಭಿಪ್ರಾಯವೆಂದು ಎಸ್.ಸುರೇಶಕುಮಾರ ಮನವಿ ಮಾಡಿಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!