New Delhi

ಸರ್ಕಾರದ ವಿತ್ತೀಯ ನೀತಿಗಳಲ್ಲಿ ನ್ಯಾಯಾಲಯಗಳು ಹಸ್ತಕ್ಷೇಪ ನಡೆಸಬಾರದು; ಕೇಂದ್ರ ಸರ್ಕಾರ

ಹೊಸದಿಲ್ಲಿ, ಅ 9- ಕೊರೊನಾದಿಂದಾಗಿ ಆದಾಯ ನಷ್ಟದಿಂದ ಸಂಕಷ್ಟದಲ್ಲಿರುವ ವಿವಿಧ ಕ್ಷೇತ್ರಗಳಲ್ಲಿರುವವರಿಗೆ ಮಾರಟೋರಿಯಂ ಪರಿಹಾರ, ಸಾಲಗಾರರಿಗೆ ಚಕ್ರ ಬಡ್ಡಿ ಮನ್ನಾ ಮಾಡಲಾಗಿದ್ದು, ಇದಕ್ಕಿಂತಲೂ ಹೆಚ್ಚಿನ ಪರಿಹಾರ ಕಲ್ಪಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಸಾಲದ ಕಂತುಗಳ ಮರುಪಾವತಿಗೆ ಈಗಾಗಲೇ ಆರು ತಿಂಗಳ ಮಾರಟೋರಿಯಂ ಪ್ರಕಟಿಸಿದ್ದೇವೆ. ಅದನ್ನು ಇನ್ನಷ್ಟು ಕಾಲ ವಿಸ್ತರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಇತ್ತೀಚಿನ ಅಫಿಡವಿಟ್‌ನಲ್ಲಿ ತಿಳಿಸಿದೆ

ಸಾಲಗಾರರಿಗೆ ಪರಿಹಾರ ಕಲ್ಪಿಸುವ ಕ್ರಮವಾಗಿ ಮಾರಿಟೋರಿಯಂ ಅವಧಿಯಲ್ಲಿ ವಿಧಿಸಲಾಗಿದ್ದ ಚಕ್ರ ಬಡ್ಡಿಯನ್ನು ಮನ್ನಾ ಮಾಡುವ ಸರ್ಕಾರದ ನಿರ್ಧಾರದ ಬಗ್ಗೆ ಸುಪ್ರೀಂ ಕೋರ್ಟ್ ಅತೃಪ್ತಿ ವ್ಯಕ್ತಪಡಿಸಿದೆ. ಇದರಿಂದ ಕೇಂದ್ರ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಜಂಟಿಯಾಗಿ ಶುಕ್ರವಾರ ಮತ್ತೊಂದು ಅಫಿಡವಿಟ್ ಸಲ್ಲಿಸಿದೆ. ಆರ್ಥಿಕ ನೀತಿಗಳು ಸರ್ಕಾರದ ವ್ಯಾಪ್ತಿಗೆ ಒಳಪಟ್ಟಿದ್ದು, ನ್ಯಾಯಾಲಯಗಳು ಅವುಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಕೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದೆ. ಚಕ್ರ ಬಡ್ಡಿ ಮನ್ನಾ ಹೊರತುಪಡಿಸಿ ಬೇರೆ ಇತರ ಪರಿಹಾರ ಕಲ್ಪಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಹಾಗೆ ಮಾಡುವುದರಿಂದ ಆರ್ಥಿಕತೆ ಹಾಗೂ ಬ್ಯಾಂಕಿಂಗ್ ಕ್ಷೇತ್ರ ಅಪಾಯಕ್ಕೆ ಸಿಲುಕುತ್ತದೆ. ವಲಯವಾರು ಪರಿಹಾರ ಕಾರ್ಯಸಾಧ್ಯವಲ್ಲ. ಕಾಮತ್ ಸಮಿತಿ ವರದಿಯೂ ಇದನ್ನೇ ಹೇಳುತ್ತದೆ ಎಂದು ವಿವರಿಸಿದೆ.

ಸಾಲಗಳ ಮೇಲಿನ ಮಾರಿಟೋರಿಯಂ ಅವಧಿಯನ್ನು ಇನ್ನಷ್ಟು ಕಾಲ ವಿಸ್ತರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ ಮಾರಿಟೋರಿಯಂ ಅವಧಿಯನ್ನು ವಿಸ್ತರಿಸುವುದರಿಂದ ಅದು ಸಾಲ ಕಂತು ಪಾವತಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ, ಸಾಲಗಾರರ ಮೇಲಿನ ಹೊರೆ ಹೆಚ್ಚಾಗುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಅಭಿಪ್ರಾಯಪಟ್ಟಿದೆ. ಅಫಿಡವಿಟ್ ಅನ್ನು ಅಕ್ಟೋಬರ್ 13 ರಂದು ನ್ಯಾಯಾಲಯ ವಿಚಾರಣೆ ನಡೆಸಲಿದೆ.

ಕೊರೊನಾ ಕಾರಣದಿಂದಾಗಿ ಮಾರ್ಚ್ 1 ರಿಂದ ಮೇ 31 ರವರೆಗೆ ಮಾರಟೋರಿಯಂ ಪ್ರಕಟಿಸಿದ್ದರಿಂದ ಸಾಲ ಮತ್ತು ಬಡ್ಡಿಗಳಿಗೆ ಸಂಬಂಧಿಸಿದ ಕಂತುಗಳ ಪಾವತಿಯನ್ನು ಮುಂದೂಡಬಹುದೆಂದು ರಿಸರ್ವ್ ಬ್ಯಾಂಕ್ ಮಾರ್ಚ್ 27 ರಂದು ಸುತ್ತೋಲೆ ಹೊರಡಿಸಿತ್ತು. ನಂತರ ಗಡುವನ್ನು ಆಗಸ್ಟ್ 31 ಕ್ಕೆ ವಿಸ್ತರಿಸಿತ್ತು. ಆದರೆ, ಮುಂದೂಡಿದ ಅವಧಿಗೆ ಸಾಲಗಾರರು ಚಕ್ರಬಡ್ಡಿಯನ್ನು ಪಾವತಿಸಬೇಕಾಗುತ್ತೆ ಎಂದು ಆರ್ ಬಿಐ ಹೇಳಿದ್ದರಿಂದ ಎಂದು ಹಲವರು ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿದರು.

ಈ ಕುರಿತು ಕೇಂದ್ರವನ್ನು ನ್ಯಾಯಾಲಯ ಪ್ರಶ್ನಿಸಿದಾಗ, 2 ಕೋಟಿಯೊಳಗೆ ಸಾಲ ಪಡೆದವರಿಗೆ ಮಾರಟೋರಿಯಂ ಅವಧಿಯಲ್ಲಿ ವಿಧಿಸಿದ್ದ ಚಕ್ರ ಬಡ್ಡಿ ಮಾಫಿ ಮಾಡಲಾಗುವುದು ಎಂದು ಸರ್ಕಾರ ಭರವಸೆ ನೀಡಿತ್ತು. ಈ ಸಂಬಂಧ ಕಳೆದ ವಾರ ಅಫಿಡವಿಟ್ ಸಲ್ಲಿಸಿತ್ತು. ಆದರೆ, ನ್ಯಾಯಾಲಯ ಕೇಂದ್ರದ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಅರ್ಜಿದಾರರು ಎತ್ತಿದ ಸಮಸ್ಯೆಗಳನ್ನು ಪರಿಶೀಲಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ವಲಯ ವಾರು ಯಾವ ರೀತಿಯ ಪರಿಹಾರ ಕಲ್ಪಿಸಲಾಗುವುದು ಎಂದು ವಿವರಿಸುವ ಹೊಸ ಅಫಿಡವಿಟ್ ಸಲ್ಲಿಸಲು ಸೂಚಿಸಿತ್ತು. ಆದರೆ, ಇದು ಸಾಧ್ಯವಿಲ್ಲ ಎಂದು ಕೇಂದ್ರ ತನ್ನ ಇತ್ತೀಚಿನ ಪ್ರಮಾಣಪತ್ರದಲ್ಲಿ ತಿಳಿಸಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!