New Delhi

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಡಿ.ಕೆ. ಶಿವಕುಮಾರ್ ಆಪ್ತರ ವಿಚಾರಣೆ: ದೆಹಲಿ ಹೈಕೋರ್ಟ್

ನವದೆಹಲಿ, ಅ 9- ಕರ್ನಾಟಕ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಡಿ.ಕೆ.ಶಿವಕುಮಾರ್ ಸಂಬಂಧಿಕರು ಹಾಗೂ ಆಪ್ತರ ತನಿಖೆಯನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸುವಂತೆ ಜಾರಿ ನಿರ್ದೇಶನಾಲಯಕ್ಕೆ ದೆಹಲಿ ಹೈಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.

ನ್ಯಾಯದ ದೃಷ್ಟಿಯಿಂದ ಅರ್ಜಿದಾರರು ವಿಚಾರಣೆಯಲ್ಲಿ ಭಾಗವಹಿಸಬೇಕು ಎಂದು ಅದು ಹೇಳಿದೆ. ವಿಡಿಯೋ ಕಾನ್ಫರೆನ್ಸಿಂಗ್ ನಡೆಸುವ ದಿನಾಂಕ, ಸಮಯವನ್ನು ಅರ್ಜಿದಾರರಿಗೆ ತಿಳಿಸುವಂತೆ ಇ ಡಿಗೆ ಆದೇಶಿಸಿದೆ.

ಡಿ.ಕೆ. ಶಿವಕುಮಾರ್ ವಿರುದ್ದದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ತನ್ನ ಮುಂದೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಕೆಲವರಿಗೆ ಸಮನ್ಸ್ ಜಾರಿ ಮಾಡಿದೆ. ಈ ಹಂತದಲ್ಲಿ ತಮ್ಮನ್ನು ಖುದ್ದಾಗಿ ಹಾಜರಾಗುವಂತೆ ಕೋರುವುದು ಸೂಕ್ತವಲ್ಲ ಎಂದು ಏಳು ಮಂದಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ರಾಜೇಶ್, ಗಂಗಾಶರಣ್, ಜಯಶೀಲಾ, ಚಂದ್ರ, ಕೆ.ವಿ.ಲಕ್ಷ್ಮಮ್ಮ, ಮೀನಾಕ್ಷಿ ಹಾಗೂ ಹನುಮಂತಯ್ಯ ಅವರು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಯೋಗೇಶ್ ಖನ್ನಾ ಅವರ ನ್ಯಾಯಪೀಠ ವಿಚಾರಣೆ ನಡೆಸಿತು.

ಸಿಆರ್‌ಪಿಸಿ ನಿಯಮಗಳನ್ನು ಉಲ್ಲಂಘಿಸಿ ಸಮನ್ಸ್ ಜಾರಿಗೊಳಿಸಲಾಗಿದೆ ಎಂದು ಅರ್ಜಿದಾರರ ಪರ ವಕೀಲ ಮೋಹಿತ್ ಮಾಥುರ್ ವಾದ ಮಂಡಿಸಿದರು. ಪ್ರಧಾನ ಆರೋಪಿಗೆ ಬಂಧುಗಳಾಗಿರುವ ಕಾರಣ ಅವರಿಗೆ ಸಮನ್ಸ್ ಜಾರಿ ಮಾಡಿದ್ದಾರೆ. ಇದೊಂದು ಒತ್ತಡ ಹೇರುವ ತಂತ್ರವೆಂದು ಎಂದು ಆರೋಪಿಸಿದರು. ಅರ್ಜಿದಾರರು ತನಿಖೆಗೆ ಸಹಕರಿಸಲಿದ್ದಾರೆ ಎಂದರು.

ಜಾರಿ ನಿರ್ದೇಶನಾಲಯ ಪರ ವಕೀಲ ಅಮಿತ ಮಹಾಜನ್ ಮಾತನಾಡಿ, ದಾಖಲೆಗಳು ಹಾಗೂ ಇತರ ಕಾಗದ ಪತ್ರಗಳನ್ನು ಸಲ್ಲಿಸುವಂತೆ ಆರ್ಜಿದಾರರಿಗೆ ಈ ಹಿಂದೆ ಕೋರಲಾಗಿತ್ತು . ಕೆಲವು ದಾಖಲೆಗಳ ವಿಷಯದಲ್ಲಿ ವಿವರಣೆಯ ಅಗತ್ಯವಿದೆ. ಹಾಗಾಗಿ ಅವರು ಹಾಜರಾಗಬೇಕಿದೆ ಎಂದು ಅವರು ಹೇಳಿದರು. ಮುಂದಿನ ವಿಚಾರಣೆ ನಡೆಯುವ ನವೆಂಬರ್ 19 ರವರೆಗೆ ಅರ್ಜಿದಾರರ ಹಾಜರಿಯ ಬಗ್ಗೆ ಜಾರಿ ನಿರ್ದೇಶನಾಲಯ ಒತ್ತಡ ಹಾಕುತ್ತಿಲ್ಲ ಎಂದರು.

ಡಿ.ಕೆ. ಶಿವಕುಮಾರ್ ಅವರನ್ನು ಮನಿ ಲಾಂಡರಿಂಗ್ ವಿರೋಧಿ ಕಾಯ್ದೆಯಡಿ ಕಳೆದ ಸೆಪ್ಟೆಂಬರ್‌ನಲ್ಲಿ ಇಡಿ ಬಂಧಿಸಿತ್ತು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅವರಿಗೆ ಹೈಕೋರ್ಟ್ ಜಾಮೀನು ನೀಡಿದೆ.

ಶಿವಕುಮಾರ್ ಅವರು ತೆರಿಗೆ ವಂಚನೆ, ಕೋಟ್ಯಾಂತರ ರೂಪಾಯಿ ಮೌಲ್ಯದ ಹವಾಲಾ ವಹಿವಾಟು ನಡೆಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಆರೋಪಿಸಿದೆ. ಕಳೆದ ವರ್ಷ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ದಾಖಲಿಸಲಾಗಿತ್ತು. ಈ ಚಾರ್ಜ್‌ಶೀಟ್‌ನ ಆಧಾರದ ಮೇಲೆ ಇ ಡಿ ಪ್ರಕರಣವನ್ನು ದಾಖಲಿಸಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!