Bengaluru

ತಂದೆ-ತಾಯಿ ನಿರ್ಲಕ್ಷ್ಯ ಮಾಡುವ ಸರ್ಕಾರಿ ನೌಕರರ ವೇತನ ಕಡಿತ

ಬೆಂಗಳೂರು, ಅ 9 [ಯುಎನ್ಐ] ರಾಜ್ಯ ಸರ್ಕಾರಿ ನೌಕರರು ತಂದೆ ತಾಯಿಯನ್ನು ಸರಿಯಾಗಿ ನೋಡಿಕೊಳ್ಳದೇ ನಿರ್ಲಕ್ಷ್ಯವಹಿಸಿರುವುದು ಕಂಡು ಬಂದರೆ ಅವರ ವೇತನದಲ್ಲೇ ಕಡಿತ ಮಾಡಿ ಹೆತ್ತವರ ಖಾತೆಗೆ ಜಮಾ ಮಾಡುವ ನೂತನ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ಸರ್ಕಾರಿ ನೌಕರರು ತಂದೆ ಮತ್ತು ತಾಯಿಯ ಪಾಲನೆ, ಪೋಷಣೆ ಮಾಡುವುದು ಕಡ್ಡಾಯವಾಗಿದೆ. ಅಸಡ್ಡೆ ತೋರಿದರೆ ವೇತನದಲ್ಲೇ ಕಡಿತ ಮಾಡಿ ಪಾಲಕರ ಖಾತೆಗೆ ವರ್ಗಾವಣೆ ಮಾಡುವ ಕುರಿತು ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಪರಿಶೀಲನೆ ಮಾಡುತ್ತಿದೆ. ಈ ಕುರಿತು ದೂರುಗಳು ಬರುತ್ತಿದ್ದು, ಇವುಗಳ ಆಧಾರದ ಮೇಲೆ ಸರ್ಕಾರಕ್ಕೆ ವರದಿ ಸಲ್ಲಿಸಲು ಇಲಾಖೆ ಉದ್ದೇಶಿಸಿದೆ.

ಸರ್ಕಾರಿ ನೌಕರರ ಮೇಲೆ ಗುರುತರ ಜವಾಬ್ದಾರಿ ಇದ್ದು, ತಂದೆ ಮತ್ತು ತಾಯಿಯನ್ನು ಚೆನ್ನಾಗಿ ನೋಡಿಕೊಂಡು ಇತರರಿಗೆ ಮಾದರಿಯಾಗಬೇಕು. ಸರ್ಕಾರದಿಂದ ಎಲ್ಲಾ ರೀತಿಯ ವೇತನ, ಸವಲತ್ತುಗಳನ್ನು ಪಡೆದವರೇ ಹೆತ್ತವರನ್ನೇ ಮರೆಯುತ್ತಿರುವುದರಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಇದಕ್ಕೆ ಅವಕಾಶ ನೀಡದೇ ಕಠಿಣ ಕಾನೂನು ಜಾರಿಗೆ ತರುವ ಮೂಲಕ ಸಮಾಜಕ್ಕೆ ಎಚ್ಚರಿಕೆ ಸಂದೇಶ ರವಾನಿಸಲು ಇಲಾಖೆ ಮುಂದಾಗಿದೆ.

ಕೆಲವು ರಾಜ್ಯಗಳಲ್ಲಿ ಇಂತಹ ವ್ಯವಸ್ಥೆ ಜಾರಿಯಾಗಿರುವ ಬಗ್ಗೆ ಮಾಹಿತಿ ಇದೆ. ಆದರೆ ಅದರ ರೂಪುರೇಷಗಳ ಬಗ್ಗೆ ಹೆಚ್ಚಿನ ಅವರಿವಿಲ್ಲ. ಹೆತ್ತವರನ್ನು ಕೇವಲ ಗಂಡು ಮಕ್ಕಳು ಮಾತ್ರ ನೋಡಿಕೊಳ್ಳಬೇಕು ಎನ್ನುವ ಯಾವುದೇ ಕಾನೂನಿಲ್ಲ. ಹೆಣ್ಣು ಮಕ್ಕಳಿಗೂ ಸಹ ಸಮಾನ ಜವಾಬ್ದಾರಿ ಇದೆ. ಸುಸ್ಥಿತಿಯಲ್ಲಿರುವ ಯಾರೇ ಆಗಲೀ ಜನ್ಮದಾತರನ್ನು ನೋಡಿಕೊಳ್ಳುವುದು ಪರಮ ಜವಾಬ್ದಾರಿಯಾಗಿರುತ್ತದೆ ಎಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕಿ ಕೆ. ಲೀಲಾವತಿ ತಿಳಿಸಿದ್ದಾರೆ.

ಯುಎನ್ಐ ಕನ್ನಡ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ ಅವರು, ರಾಜ್ಯದಲ್ಲಿ 2008 ರಿಂದ ಪಾಲಕರ ಪೋಷಣೆ, ಸಂರಕ್ಷಣೆ ಮತ್ತು ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ ಜಾರಿಯಾಗಿದೆ. ಹಿರಿಯ ನಾಗರಿಕರ ಹಕ್ಕುಗಳನ್ನು ರಕ್ಷಿಸುವ ಜತೆಗೆ ಅವರಿಗೆ ಸೂಕ್ತ ಸೌಲಭ್ಯಗಳನ್ನು ಸಹ ಕಲ್ಪಿಸಲಾಗುತ್ತಿದೆ.

ತಂದೆ ತಾಯಿಗೆ ಕಿರುಕುಳ ನೀಡುವ, ನೋವುಂಟು ಮಾಡುವುದನ್ನು ತಡೆಗಟ್ಟುವುದು ಇಲಾಖೆಯ ಜವಾಬ್ದಾರಿಯಾಗಿದೆ. ಪ್ರತಿವರ್ಷ ಅಕ್ಟೋಬರ್ 1 ರಂದು ಹಿರಿಯ ನಾಗರಿಕರ ದಿನಾಚರಣೆ ಮಾಡುತ್ತೇವೆ. ಈ ಬಾರಿ ಹಿರಿಯ ನಾಗರಿಕ ವಿರುದ್ಧದ ಶೋಷಣೆ ಅಥವಾ ನೋವಿನ ಬಗ್ಗೆ ಜಾಗೃತಿ ಮೂಡಿಸುವ ಘೋಷವಾಕ್ಯ ಹೊಂದಲಾಗಿತ್ತು. ಇದಕ್ಕೆ ಪೂರಕವಾಗಿ ಇಲಾಖೆ ಕಾರ್ಯಕ್ರಮ ಜಾರಿಗೊಳಿಸುತ್ತಿದೆ. ಹಿರಿಯರನ್ನು ನಿರ್ಲಕ್ಷ್ಯ ಮಾಡುವುದನ್ನು ತಡೆಯಲು ಒತ್ತು ನೀಡಲಾಗಿದೆ. ಸರ್ಕಾರಿ ನೌಕರರು ತಂದೆ ತಾಯಿಯ ಅವಶ್ಯಕತೆಯನ್ನು ಪೂರೈಸದಿದ್ದರೇ ಅಂಹವರ ವೇತನ ಕಡಿತ ಮಾಡುವ ಉದ್ದೇಶ ಸಹ ಹೊಂದಲಾಗಿದೆ. ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲು ಚಿಂತನೆ ನಡೆಸಲಾಗಿದೆ ಎಂದರು.

ಹಿರಿಯ ನಾಗರಿಕರ ಆಸ್ತಿ ಹಕ್ಕುಗಳ ರಕ್ಷಣೆ ಸಹ ಮಾಡಲಾಗುತ್ತಿದೆ. ಪಿತ್ರಾರ್ಜಿತ ಆಸ್ತಿಯನ್ನು ಮಕ್ಕಳಿಗೆ ನೊಂದಾಯಿಸಿಕೊಟ್ಟ ನಂತರ ಮಕ್ಕಳು ತಂದೆ ತಾಯಿಯನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಅಂತಹ ಸಂದರ್ಭದಲ್ಲಿ ಆಸ್ತಿಯನ್ನು ಮತ್ತೆ ತಂದೆ ತಾಯಿ ಹೆಸರಿಗೆ ಮರು ನೋಂದಣಿ ಮಾಡಿರುವ ಪ್ರಕರಣಗಳು ಸಹ ನಮ್ಮ ಮುಂದೆ ಇವೆ.

ಆಸ್ತಿ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ದೂರುಗಳು ಬಂದರೆ ಮೊದಲ ಹಂತದಲ್ಲಿ ಸಮಾಲೋಚನೆ ಮೂಲಕ ಇತ್ಯರ್ಥ ಮಾಡಲು ಆದ್ಯತೆ ನೀಡಲಾಗುವುದು. ಬಳಿಕ ಎ.ಸಿ ಕೋರ್ಟ್ ಗೆ ಪ್ರಕರಣ ವರ್ಗಾವಣೆಮಾಡಲಾಗುವುದು. ಅಲ್ಲಿ ನೀಡುವ ಆದೇಶವನ್ನು ಡಿ.ಸಿ. ಕೋರ್ಟ್ ನಲ್ಲಿ ಪ್ರಶ್ನಿಸಲು ಸಹ ಅವಕಾಶವಿದೆ. ಎ.ಸಿ ಮತ್ತು ಡಿ.ಸಿ ಕೋರ್ಟ್ ಗಳಲ್ಲಿ ಆಸ್ತಿ ವ್ಯಾಜ್ಯ ಪ್ರಕರಣಗಳು ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಕೆ. ಲೀಲಾವತಿ ಮಾಹಿತಿ ನೀಡಿದರು.

ಹಿರಿಯ ನಾಗರಿಕರ ಹಿತ ರಕ್ಷಣೆಗಾಗಿ ಪ್ರತಿ ಕಂದಾಯ ಉಪವಿಭಾಗದಲ್ಲಿ ಒಂದು ನ್ಯಾಯ ಮಂಡಳಿ ಸ್ಥಾಪಿಸಲಾಗಿದ್ದು, ಈ ನ್ಯಾಯಮಂಡಳಿಯ ಅಧ್ಯಕ್ಷರನ್ನಾಗಿ ಆಯಾ ಕಂದಾಯ ಉಪವಿಭಾಗದ ಸಹಾಯಕ ಆಯುಕ್ತರನ್ನು ನೇಮಕ ಮಾಡಲಾಗಿದೆ. ನಿರ್ವಹಣಾ ನ್ಯಾಯಮಂಡಳಿಯ ತೀರ್ಪಿನ ವಿರುದ್ದ ಮೇಲ್ಮನವಿ ಅಂಗೀಕರಿಸಲು ಪ್ರತಿ ಜಿಲ್ಲೆಗೆ ಒಂದರಂತೆ ಮೇಲ್ಮನವಿ ನ್ಯಾಯಮಂಡಳಿ ರಚಿಸಿದ್ದು, ಈ ನ್ಯಾಯಮಂಡಳಿಯ ಅಧ್ಯಕ್ಷರನ್ನಾಗಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ನೇಮಿಸಲಾಗಿದೆ. ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣೆ ಕಾಯ್ದೆ ಪ್ರಕಾರ ಆಯಾ ಜಿಲ್ಲೆಯ ಉಪನಿರ್ದೇಶಕರನ್ನು ನಿರ್ವಹಣಾಧಿಕಾರಿ ಎಂದು ನೇಮಕ ಮಾಡಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!