Bengaluru

ಶಾಲೆ ತೆರೆದರೆ ಕೊರೋನಾ ಸ್ಪೋಟವಾಗುತ್ತೆ : ಸಿದ್ದರಾಮಯ್ಯ

ಬೆಂಗಳೂರು,ಅ.9- ಕೊರೋನಾ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ಶಾಲೆಗಳನ್ನು ಯಾವ ಕಾರಣಕ್ಕೂ ತೆರೆಯಬಾರದು. ರಾಜ್ಯದ ಎಲ್ಲಾ ಮಕ್ಕಳಿಗೂ ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸುವುದು ಈಗಿನ ಪರಿಸ್ಥಿತಿಯಲ್ಲಿ ಅತ್ಯಗತ್ಯ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

ಈ ಸಂಬಂಧ ಶಿಕ್ಷಣ ಸಚಿವ ಎಸ್.ಸುರೇಶ ಕುಮಾರ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ಶಾಲೆಗಳನ್ನು ಆರಂಭಿಸಿದರೆ ಕೊರೊನಾ ಸೋಂಕು ಸ್ಪೋಟಗೊಂಡು ಸುನಾಮಿ ಸ್ವರೂಪದ ಸಾವು ನೋವುಗಳನ್ನು ಸಮಾಜ ಎದುರಿಸಬೇಕಾಗುತ್ತದೆ . ಈಗಾಗಲೇ ಅಮೇರಿಕಾ ಮತ್ತು ಯುರೋಪಿನ ಕೆಲವು ದೇಶಗಳು ಶಾಲೆಗಳನ್ನು ತೆರೆದು ಸಮಸ್ಯೆಗಳನ್ನು ಮೈಮೇಲೆ ಹಾಕಿಕೊಂಡಿರುವ ಉದಾಹರಣೆಗಳು ಕಣ್ಣ ಮುಂದೆ ಇವೆ ಎಂದಿದ್ದಾರೆ.

ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕ ಪದ್ಧತಿಯಂತಹ ಸಾಮಾಜಿಕ ಪಿಡುಗುಗಳು ಹೆಚ್ಚುತ್ತಿವೆ ಎಂಬ ನಿಮ್ಮ ಮಾತಿನಲ್ಲಿ ಅನುಮಾನಗಳಿಲ್ಲ. ಆದರೆ ಜಿಲ್ಲಾಡಳಿತಗಳು ನಿದ್ದೆಯಿಂದ ಎಚ್ಚೆತ್ತು ಕ್ರಿಯಾಶೀಲವಾದರೆ. ಕುಟುಂಬಗಳಿಗೆ ದುಡಿಯುವ ಅವಕಾಶಗಳನ್ನು ಸರ್ಕಾರವು ಹೆಚ್ಚಿಸಿ ಅವರ ಕೈತುಂಬಾ ಹಣ ಇರುವಂತೆ ನೋಡಿಕೊಂಡರೆ ಈ ಸಮಸ್ಯೆಗಳನ್ನು ನಿಯಂತ್ರಿಸಬಹುದಾಗಿದೆ . ಒಂದು ಸಮಸ್ಯೆಯನ್ನು ಎದುರಿಸಲು ಮಕ್ಕಳನ್ನು ಯಮನ ಬಾಯಿಗೆ ತಳ್ಳುವುದನ್ನು ಯಾವ ಸೂಕ್ಷ್ಮಮತಿಯಾದ ಮನುಷ್ಯನಿಂದಲೂ ಊಹಿಸಿಕೊಳ್ಳಲಾಗದು. ಸರ್ಕಾರದ ನಿರ್ಲಕ್ಷ್ಯದಿಂದ ಮತ್ತು ತಪ್ಪು ನಿರ್ಧಾರಗಳ ಕಾರಣದಿಂದಾಗಿ ಮೃತಪಟ್ಟ ಮಗುವಿನ ಸಾವು ಅದು ಕೇವಲ ಸಾವು ಆಗಿರುವುದಿಲ್ಲ, ಸಮಾಜ ನಡೆಸಿದ ಕಗ್ಗೂಲೆಯಾಗುತ್ತದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೃತಪಟ್ಟ ಮಗುವಿನ ಕುಟುಂಬದ ನೋವನ್ನು ಊಹಿಸಿಕೊಳ್ಳಲು ನನ್ನಿಂದ ಸಾಧ್ಯವಾಗುವುದಿಲ್ಲ . ಯಾವುದೇ ಕಾರಣಕ್ಕೂ ಹೀಗೆ ಆಗದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ನಿಮ್ಮ ಮೇಲಿದೆ. ಎಲ್ಲಾ ಸವಲತ್ತುಗಳನ್ನು ಸರ್ಕಾರ ಕಲ್ಪಿಸಿಕೊಟ್ಟು ಈ ಶೈಕ್ಷಣಿಕ ವರ್ಷದ ಎಲ್ಲಾ ವಿದ್ಯಾರ್ಥಿಗಳನ್ನು ಪಾಸು ಮಾಡಿ ಮುಂದಿನ ತರಗತಿಗಳಿಗೆ ಕಳುಹಿಸಬೇಕು. ಪರಿಸ್ಥಿತಿ ಹತೋಟಿಗೆ ಬಂದ ನಂತರ ಮತ್ತೊಮ್ಮೆ ಎಲ್ಲರ ಅಭಿಪ್ರಾಯಗಳನ್ನು ಪಡೆದು ಶಾಲೆಗಳನ್ನು ಪ್ರಾರಂಭಿಸಬೇಕೆಂದು ಸಲಹೆ ನೀಡಿದ್ದಾರೆ.

ಬೆಂಗಳೂರು ನಗರದ ಪರಿಸ್ಥಿತಿಯೂ ಇದಕ್ಕೆ ಹೊರತಲ್ಲ . ನಗರದಲ್ಲಿ 3190 ಜನರು ಕೊರೋನಾದಿಂದ ಮೃತಪಟ್ಟಿದ್ದಾರೆ ಎಂದು ಸರ್ಕಾರ ಹೇಳುತ್ತಿದೆ . ಆದರೆ ಕಳೆದ ವರ್ಷದ ಜುಲೈನಲ್ಲಿ 5,778 , ಆಗಸ್ಟ್‌ನಲ್ಲಿ 5,481 , ಸೆಪ್ಟೆಂಬರ್‌ನಲ್ಲಿ 5,411 ಸಂಖ್ಯೆಯ ಜನರು ಮೃತಪಟ್ಟಿದ್ದರು . ಈ ವರ್ಷದ ಜುಲೈನಲ್ಲಿ 6,477 , ಆಗಸ್ಟ್‌ನಲ್ಲಿ 9,340 , ಸೆಪ್ಟೆಂಬರ್‌ನಲ್ಲಿ 8,710 ಸಂಖ್ಯೆಯ ಜನರು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮರಣ ಹೊಂದಿದ್ದಾರೆ.

ಈ ಕುರಿತಂತೆ ಎರಡೂ ವರ್ಷಗಳ ರಾಜ್ಯದ ಸಂಪೂರ್ಣ ಮಾಹಿತಿ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರೂ ಇನ್ನೂ ಉತ್ತರ ಬಂದಿಲ್ಲ . 2019 ರ ಜುಲೈಯಿಂದ ಸೆಪ್ಟೆಂಬರ್‌ವರೆಗೆ 16,670 ಜನರು ಬೆಂಗಳೂರಿನಲ್ಲಿ ಮರಣ ಹೊಂದಿದ್ದಾರೆ . ಈ ವರ್ಷದ ಇದೇ 3 ತಿಂಗಳ ಅವಧಿಯಲ್ಲಿ 24,527 ಜನ ಸಾವನ್ನಪ್ಪಿದ್ದಾರೆ. ಅಂದರೆ 7,857 ಕ್ಕೂ ಹೆಚ್ಚು ಮರಣ ಸಂಭವಿಸಿದೆ. ಗಮನಿಸಬೇಕಾದ ಅಂಶವೆಂದರೆ ನಗರದಿಂದ ಲಕ್ಷಾಂತರ ಜನ ಗ್ರಾಮೀಣ ಪ್ರದೇಶಗಳಿಗೆ ವಲಸೆ ಹೋಗಿದ್ದಾರೆ . ಜುಲೈ ತಿಂಗಳಿನಲ್ಲಿ ಲಾಕ್‌ಡೌನ್ ಕೂಡ ಹೇರಿಕೆ ಮಾಡಲಾಗಿತ್ತು.

ಈ ಅವಧಿಯಲ್ಲಿ ಅಪಘಾತ ಸಂಬಂಧಿ ಸಾವುಗಳ ಸಂಖ್ಯೆ ತೀರ ಕಡಿಮೆಯಿತ್ತು . ಆದರೂ ಇಷ್ಟೊಂದು ಸಾವುಗಳು ಏಕೆ ಸಂಭವಿಸಿದವು ? ಹೆಚ್ಚುವರಿಯಾದ ಈ ಸಾವುಗಳು ಕೊರೋನಾ ಸಂಬಂಧಿತ ಸಾವುಗಳು ಎನ್ನುವುದರಲ್ಲಿ ಅನುಮಾನವಿಲ್ಲ. ಸರ್ಕಾರ ರಾಷ್ಟ್ರ ಮಟ್ಟದಲ್ಲಿ ಶಹಭಾಸ್‌ಗಿರಿ ಪಡೆಯಲು ಅಂಕಿಅಂಶಗಳನ್ನು ಮುಚ್ಚಿಡುವ ಅಮಾನವೀಯ ಕೃತ್ಯಕ್ಕೆ ಇಳಿದಿರುವುದು ಕ್ಷಮಿಸಲಾಗದ ಕ್ರಿಮಿನಲ್ ಸಂಗತಿಯಾಗಿದೆ. ವಿಚಾರಗಳು ನಿಮ್ಮ ಗಮನಕ್ಕೆ ಮತ್ತು ಮಕ್ಕಳ ಆಯೋಗದ ಗಮನಕ್ಕೆ ಬಂದಿವೆಯೋ ಇಲ್ಲವೋ ನನಗೆ ಗೊತ್ತಿಲ್ಲ . ಮಾಸ್ಕ್ ಹಾಕಿಕೊಳ್ಳುವಲ್ಲಿ , ಸ್ಯಾನಿಟೈಸರ್ ಬಳಸುವಲ್ಲಿ , ದೈಹಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಪ್ರಜ್ಞಾವಂತರೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ . ಇಂತಹ ಸಂದರ್ಭದಲ್ಲಿ ಇವೆಲ್ಲವನ್ನೂ ಮಕ್ಕಳಿಂದ ನಿರೀಕ್ಷಿಸುವುದು ಅಸಾಧ್ಯದ ವಿಚಾರ. ಇಷ್ಟು ದಿನ ಮನೆಯಲ್ಲಿದ್ದ ಮಕ್ಕಳು ಶಾಲೆಗೆ ಬಂದ ಕೂಡಲೇ ಎಲ್ಲಾ ನಿಯಮಗಳನ್ನು ಗಾಳಿಗೆ ತೂರುತ್ತವೆ . ಅಲ್ಲದೆ ದುಡಿಯುವ ಕುಟುಂಬಗಳಲ್ಲಿ ಮಕ್ಕಳ ಲಾಲನೆ ಪಾಲನೆ ಮಾಡುವುದು ಬಹುಪಾಲು ಸಂದರ್ಭಗಳಲ್ಲಿ ಅಜ್ಜ – ಅಜ್ಜಿಯರಾಗಿರುತ್ತಾರೆ ಅಥವಾ ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಮನೆಗಳಲ್ಲಿ ಉಳಿದುಕೊಂಡವರಾಗಿರುತ್ತಾರೆ . ಮಕ್ಕಳು ಶಾಲೆಗೆ ಹೋಗಿ ಕೊರೋನಾ ಅಂಟಿಸಿಕೊಂಡು ಬಂದರೆ ಮಕ್ಕಳು ಸಮಸ್ಯೆಗೆ ತುತ್ತಾಗುವ ಜೊತೆಗೆ, ಈ ರೋಗದಿಂದ ಹೆಚ್ಚು ಬಾಧಿತರಾಗುತ್ತಿರುವ ಹಿರಿಯ ಜೀವಗಳಿಗೂ ಮತ್ತು ಇತರೆ ಆರೋಗ್ಯ ಸಂಬಂಧಿತ ಸಮಸ್ಯೆಗಳಿರುವವರಿಗೆ ತೀವ್ರ ತೊಂದರೆಯಾಗಲಿದೆ ಎಂದು ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!