Sports

ಚೆನ್ನೈ ಸೂಪರ್‌ ಕಿಂಗ್ಸ್-ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿ ನಾಳೆ

ದುಬೈ, ಅ 9 – ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 59 ರನ್‌ಗಳ ಸೋಲು ಅನುಭವಿಸಿದ್ದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ, ನಾಳೆ(ಶನಿವಾರ) ಸಂಜೆ 7:30ಕ್ಕೆ (ಭಾರತೀಯ ಕಾಲಮಾನ) ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್‌ರ ಕಿಂಗ್ಸ್ ವಿರುದ್ಧ ಸೆಣಸಲು ಸಜ್ಜಾಗಿದೆ.

ಬೆಂಗಳೂರು ಹಾಗೂ ಚೆನ್ನೈ ಎರಡೂ ದಕ್ಷಿಣ ಭಾರತದ ಎರಡು ಬಲಿಷ್ಠ ತಂಡಗಳಾಗಿವೆ. ಪ್ರಸಕ್ತ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ ನಾಯಕತ್ವದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿದ ಐದು ಪಂದ್ಯಗಳಿಂದ ಮೂರರಲ್ಲಿ ಜಯ ದಾಖಲಿಸಿದೆ. ಇನ್ನೂ ಚೆನ್ನೈ ಸೂಪರ್‌ ಕಿಂಗ್ಸ್ ಆಡಿದ ಆರು ಪಂದ್ಯಗಳಿಂದ ಎರಡರಲ್ಲಿ ಮಾತ್ರ ಜಯ ಗಳಿಸಿದೆ.

ಐಪಿಎಲ್‌ ಇತಿಹಾಸದಲ್ಲಿಯೇ ಆರ್‌ಸಿಬಿ ಹಾಗೂ ಸಿಎಸ್‌ಕೆ ಒಟ್ಟು 23 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ 15 ಪಂದ್ಯಗಳಲ್ಲಿ ಚೆನ್ನೈ ಫ್ರಾಂಚೈಸಿ ಗೆಲ್ಲುವ ಮೂಲಕ ಆರ್‌ಸಿಬಿ ಎದುರು ಪ್ರಾಬಲ್ಯ ಸಾಧಿಸಿದೆ. ಆದರೆ, ಈ ಬಾರಿ ಎಂಎಸ್‌ ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್ ಕಳಪೆ ಲಯವನ್ನು ಮುಂದುವರಿಸುತ್ತಿದೆ. ಇದು ಆರ್‌ಸಿಬಿಗೆ ಸ್ವಲ್ಪ ಮುನ್ನಡೆಯಾಗಬಹುದು.

ಪ್ರಸಕ್ತ ಆವೃತ್ತಿಯಲ್ಲಿ ಅತ್ಯುತ್ತಮ ಆರಂಭ ಕಂಡಿರುವ ಆರ್‌ಸಿಬಿ ತಂಡ, ಸಿಎಸ್‌ಕೆ ವಿರುದ್ಧ ಸ್ಮಾರ್ಟ್ ಕ್ರಿಕೆಟ್‌ ಆಡುವ ಅಗತ್ಯವಿದೆ. ಇನ್ನೂ ಆರಂಭಿಕನಾಗಿ ಯಶಸ್ವಿ ಸಾಧಿಸಿರುವ ದೇವದತ್‌ ಪಡಿಕ್ಕಲ್, ಸ್ಪಿನ್‌ ಹಾಗೂ ವೇಗದ ಶಾರ್ಟ್‌ ಎಸೆತಗಳಿಗೆ ಸ್ವಲ್ಪ ಹೆಣಗಾಡುತ್ತಿದ್ದಾರೆ. ಆದ್ದರಿಂದ ಎಂಎಸ್‌ ಧೋನಿ, ಪವರ್‌ಪ್ಲೇನಲ್ಲಿ ರವೀಂದ್ರ ಜಡೇಜಾ ಹಾಗೂ ಕರ್ಣ್‌ ಶರ್ಮಾ ಅವರಿಗೆ ಬೌಲಿಂಗ್‌ ಕೊಟ್ಟು ಎಡಗೈ ಬ್ಯಾಟ್ಸ್‌ಮನ್‌ಗೆ ಒತ್ತಡ ಹೇರುವ ಸಂಭವವಿದೆ.

ಆಡಿದ ಐದು ಪಂದ್ಯಗಳಲ್ಲಿ ಆರೋನ್‌ ಫಿಂಚ್‌ ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲರಾಗುತ್ತಿದ್ದಾರೆ. ಇದರಿಂದಾಗಿ ಬ್ಯಾಟಿಂಗ್‌ ವಿಭಾಗದಲ್ಲಿ ವಿರಾಟ್‌ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಅವರ ಮೇಲೆ ಜವಾಬ್ದಾರಿ ಹೆಚ್ಚಾಗಲಿದೆ. ದಕ್ಷಿಣ ಆಫ್ರಿಕಾದ ಆಲ್‌ರೌಂಡರ್‌ ಕ್ರಿಸ್‌ ಮೋರಿಸ್‌ ಅಂತಿಮ 11 ರಲ್ಲಿ ಕಾಣಿಸಿಕೊಳ್ಳುವ ಸಂಭವವಿದೆ. ಕ್ರಿಸ್‌ ಮೋರಿಸ್‌ ಋತುವಿನ ಮೊದಲ ಪಂದ್ಯ ಆಡಿದ್ದೇ ಆದಲ್ಲಿ ಅವರು ಇಲ್ಲಿನ ವಾತಾವರಣ ಹಾಗೂ ವಿಕೆಟ್‌ಗಳಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತದೆ.

ಮತ್ತೊಂದೆಡೆ ಕೋಲ್ಕತಾ ನೈಟ್‌ ರೈಡರ್ಸ್ ವಿರುದ್ಧ ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ಗೆಲ್ಲುವ ಪಂದ್ಯವನ್ನು ಕೊನೆಯ ಹಂತದಲ್ಲಿ ಸೋಲು ಅನುಭವಿಸಿತ್ತು. ಬೌಲರ್‌ಗಳಿಂದ ಅತ್ಯುತ್ತಮ ಪ್ರದರ್ಶನದ ಬಳಿಕ ಬ್ಯಾಟಿಂಗ್‌ ನಲ್ಲಿಯೂ ಸಿಎಸ್‌ಕೆಯ ಮೂವರು ಬ್ಯಾಟ್ಸ್‌ಮನ್‌ಗಳು ತಂಡಕ್ಕೆ ಉತ್ತಮ ಆರಂಭ ನೀಡಿದ್ದರು. ಆದರೆ, ಇನಿಂಗ್ಸ್‌ ಎರಡನೇ ಅವಧಿಯಲ್ಲಿ ಕೆಕೆಆರ್‌ ಬೌಲರ್‌ಗಳನ್ನು ಪಂದ್ಯದ ದಿಕ್ಕನ್ನು ಬದಲಿಸಿದರು. ಅಂತಿಮವಾಗಿ ಸಿಎಸ್‌ಕೆ 10 ರನ್‌ಗಳಿಂದ ಸೋಲು ಅನುಭವಿಸಿತು.

ಎಂಎಸ್‌ ಧೋನಿ ಭವಿಷ್ಯ ಕಳೆದ ಪಂದ್ಯವಾಡಿದ ತಂಡವನ್ನೇ ಮುಂದುವರಿಸುವ ಸಾಧ್ಯತೆ ಇದೆ. ಅಲ್ಲದೆ, ಲಯ ಕಳೆದುಕೊಂಡಿರುವ ಕೇದಾರ್‌ ಜಾಧವ್‌ಗೆ ಮತ್ತೊಂದು ಅವಕಾಶ ನೀಡಬಹುದು. ಎಂಎಸ್‌ ಧೋನಿ ರನ್‌ಗಳನ್ನು ಗಳಿಸುವಲ್ಲಿ ಹೆಣಗಾಡುತ್ತಿದ್ದಾರೆ. ಆದರೆ, ಶೇನ್‌ ವಾಟ್ಸನ್‌, ಫಾಫ್‌ ಡುಪ್ಲೆಸಿಸ್‌ ಹಾಗೂ ಅಂಬಾಟಿ ಲಯದಲ್ಲಿದ್ದಾರೆ. ಬ್ಯಾಟಿಂಗ್‌ ವಿಭಾಗ ಈ ಮೂವರ ಮೇಲೆ ಅವಲಂಬನೆಯಾಗಿದೆ.

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣ ಬ್ಯಾಟಿಂಗ್‌ಗೆ ಸಹಕಾರಿಯಾಗಿದೆ. ಬ್ಯಾಟ್ಸ್‌ಮನ್‌ಗಳು ಅತ್ಯುತ್ತಮವಾಗಿ ಆಡಿರುವ ಉದಾಹರಣೆ ಇದೆ ಹಾಗೂ ಕಳೆದ ಎರಡು ಪಂದ್ಯಗಳಿಂದ ಪಂದ್ಯಗಳಲ್ಲಿ 190ಕ್ಕೂ ಹೆಚ್ಚು ರನ್‌ಗಳು ದಾಖಲಾಗಿವೆ. ಇದೇ ಅಂಗಳದಲ್ಲಿಯೇ ಚೆನ್ನೈ ಸೂಪರ್‌ ಕಿಂಗ್ಸ್ ವಿಕೆಟ್‌ ನಷ್ಟವಿಲ್ಲದೆ ರಾಜಸ್ಥಾನ್‌ ರಾಯಲ್ಸ್ ವಿರುದ್ಧ 10 ವಿಕೆಟ್‌ಗಳ ಜಯ ಸಾಧಿಸಿತ್ತು. ಈ ಅಂಗಳದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ತಂಡಗಳು ಹೆಚ್ಚಿನ ಪಂದ್ಯಗಳನ್ನು ಗೆದ್ದಿವೆ. ಆದರೆ, ಈ ಅಂಗಳದಲ್ಲಿ ಗುರಿ ಬೆನ್ನತ್ತುವುದು ಕಠಿಣವಾಗಿದೆ.

ಸಂಭಾವ್ಯ ಇಲೆವೆನ್‌
ರಾಯಲ್‌ ಚಾಲೆಂಜರ್ಸ್ ಬೆಂಗಳೂರು: ದೇವದತ್‌ ಪಡಿಕ್ಕಲ್‌, ಆರೋನ್‌ ಫಿಂಚ್‌, ವಿರಾಟ್‌ ಕೊಹ್ಲಿ(ನಾಯಕ), ಎಬಿ ಡಿವಿಲಿಯರ್ಸ್(ವಿ.ಕೀ), ಶಿವಂ ದುಬೆ, ಕ್ರಿಸ್‌ ಮೋರಿಸ್‌, ವಾಷಿಂಗ್ಟನ್‌ ಸುಂದರ್‌, ಇಸುರು ಉದಾನ, ನವದೀಪ್‌ ಸೈನಿ, ಮೊಹಮ್ಮದ್‌ ಸಿರಾಜ್‌, ಯಜ್ವೇಂದ್ರ ಚಹಲ್‌
ಚೆನ್ನೈ ಸೂಪರ್‌ ಕಿಂಗ್ಸ್: ಶೇನ್‌ ವಾಟ್ಸನ್‌, ಫಾಫ್‌ ಡುಪ್ಲೆಸಿಸ್‌, ಅಂಬಾಟಿ ರಾಯುಡು, ಎಂಎಸ್‌ ಧೋನಿ(ನಾಯಕ, ವಿ.ಕೀ), ಸ್ಯಾಮ್‌ ಕರನ್‌, ಕೇದಾರ್‌ ಜಾಧವ್‌, ಡ್ವೇನ್‌ ಬ್ರಾವೊ, ರವೀಂದ್ರ ಜಡೇಜಾ, ಕರ್ಣ್‌ ಶರ್ಮಾ, ಶಾರ್ದೂಲ್‌ ಠಾಕೂರ್‌, ದೀಪಕ್‌ ಚಹರ್‌

ಪಂದ್ಯ
ಆರ್‌ಸಿಬಿ vs ಸಿಎಸ್‌ಕೆ
ದಿನಾಂಕ: ಅ.10 (ಶನಿವಾರ)
ಸಮಯ: ಸಂಜೆ 7: 30
ಸ್ಥಳ: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣ
ನೇರ ಪ್ರಸಾರ: ಸ್ಟಾರ್‌ ಸ್ಫೋರ್ಟ್ಸ್

Related Articles

Leave a Reply

Your email address will not be published. Required fields are marked *

Back to top button
error: Content is protected !!