Sports

ರಶೀದ‌ ಖಾನ್‌ ವಿಶ್ವ ದರ್ಜೆಯ ಬೌಲರ್‌: ವಾರ್ನರ್‌

ದುಬೈ, ಅ 9- ಸ್ಪಿನ್ನರ್‌ ರಶೀದ‌ ಖಾನ್‌ ವಿಶ್ವದರ್ಜೆಯ ಬೌಲರ್‌ ಎಂದು ಶ್ಲಾಘಿಸಿದ ಸನ್‌ರೈಸರ್ಸ್ ಹೈದರಾಬಾದ್‌ ನಾಯಕ ಡೇವಿಡ್‌ ವಾರ್ನರ್‌, ಕಿಂಗ್ಸ್ ಇಲೆವೆನ್‌ ಪಂಜಾಬ್‌ ವಿರುದ್ಧ ಎದುರಾಗಿದ್ದ ಒತ್ತಡದ ಸನ್ನಿವೇಶದಲ್ಲಿ ಅವರು ತಂಡಕ್ಕೆ ಆಸರೆಯಾಗಿದ್ದಾರೆ ಎಂದು ಹೇಳಿದರು.

ಗುರುವಾರ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಕಿಂಗ್ಸ್ ಇಲೆವೆನ್‌ ಪಂಜಾಬ್‌ ವಿರುದ್ದ ಸನ್‌ರೈಸರ್ಸ್ ಹೈದರಾಬಾದ್‌ 69 ರನ್‌ಗಳಿಂದ ಜಯ ದಾಖಲಿಸಿತು.

ಡೇವಿಡ್‌ ವಾರ್ನರ್‌ ಹಾಗೂ ಜಾನಿ ಬೈರ್‌ಸ್ಟೋವ್‌ ಜೋಡಿಯ ಅದ್ಭುತ ಜತೆಯಾಟದಿಂದ ಪ್ರಥಮ ಇನಿಂಗ್ಸ್‌ನಲ್ಲಿ ಹೈದರಾಬಾದ್‌ 201 ರನ್‌ಗಳನ್ನು ಗಳಿಸಿತ್ತು. ನಂತರ ಬೌಲರ್‌ಗಳ ಪ್ರಾಬಲ್ಯದಿಂದ ಗೆಲುವು ತಮ್ಮದಾಗಿಸಿಕೊಂಡಿತ್ತು. ರಶೀದ್‌ ಖಾನ್‌ ಮೂರು ವಿಕೆಟ್‌ಗಳನ್ನು ಪಡೆದರೆ, ಟಿ ನಟರಾಜನ್‌ ಹಾಗೂ ಖಲೀಲ್‌ ಅಹ್ಮದ್‌ ತಲಾ ಎರಡು ವಿಕೆಟ್‌ಗಳನ್ನು ಪಡೆದುಕೊಂಡರು. ಆ ಮೂಲಕ ಕಿಂಗ್ಸ್ ಇಲೆವೆನ್‌ ಪಂಜಾಬ್‌ 132 ರನ್‌ಗಳಿಗೆ ಆಲೌಟ್‌ ಆಯಿತು.

ರಶೀದ್‌ ಖಾನ್‌ ನಾಲ್ಕು ಓವರ್‌ಗಳಿಂದ ನೀಡಿದ್ದು ಕೇವಲ 12 ರನ್‌ಗಳು ಮಾತ್ರ. ಅಲ್ಲದೆ, ನಿರ್ಣಾಯಕ ಸಮಯದಲ್ಲಿ 37 ಎಸೆತಗಳಲ್ಲಿ 77 ರನ್‌ಗಳನ್ನು ಸಿಡಿಸಿ ಆಡುತ್ತಿದ್ದ ನಿಕೋಲಸ್‌ ಪೂರನ್‌ ಅವರ ವಿಕೆಟ್‌ ಅನ್ನು ಪಡೆಯುವ ಮೂಲಕ ಅಫ್ಘಾನಿಸ್ತಾನದ ಬೌಲರ್‌ ಹೈದರಾಬಾದ್‌ಗೆ ಗೆಲುವು ಖಾತ್ರಿ ಪಡಿಸಿದರು.

“ನಿಕೋಲಸ್‌ ಪೂರನ್‌ ಸ್ಟ್ಯಾಂಡ್‌ಗಳಿಗೆ ಚೆಂಡನ್ನು ಹೊಡೆಯುತ್ತಿದ್ದನ್ನು ನೋಡಿ ನಾನು ದಂಗಾಗಿದ್ದೆ. ನಾನು ಯಾವಾಗಲೂ ಅವರ(ರಶೀದ್‌) ಮೇಲೆ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿರುತ್ತೇನೆ. ಬಾಂಗ್ಲಾದೇಶದಲ್ಲಿ ಅವರೊಂದಿಗೆ ಆಡಿರುವುದು ನನ್ನ ಅದೃಷ್ಠ. ‘ನಾನು ಏನು ಮಾಡಬೇಕು, ಹೇಗೆ ಅವರ(ಪೂರನ್‌)ನ್ನು ಔಟ್‌ ಮಾಡಬೇಕು? ಎಂಬ ಗೊಂದಲಕ್ಕೆ ಒಳಗಾಗಿದ್ದಾಗ ರಶೀದ್‌ ಖಾನ್ ನೆರವಾದರು. ಅವರು ನಿಜಕ್ಕೂ ವಿಶ್ವ ದರ್ಜೆಯ ಬೌಲರ್, ಅವರನ್ನು ಪಡೆದಿರುವುದು ಅದ್ಭುತ. ಒತ್ತಡದ ಸನ್ನಿವೇಶದಲ್ಲಿ ಅವರು ತಂಡವನ್ನು ಪಾರು ಮಾಡುತ್ತಾರೆ,” ಎಂದು ಡೇವಿಡ್‌ ವಾರ್ನರ್ ಪಂದ್ಯದ ಬಳಿಕ ಅಫ್ಘಾನಿಸ್ತಾನದ ವೇಗಿಯನ್ನು ಕೊಂಡಾಡಿದರು.

ಇನ್ನು ಪಂದ್ಯದಲ್ಲಿ ವಾರ್ನರ್‌ ಹಾಗೂ ಬೈರ್‌ಸ್ಟೋವ್‌ ಜೋಡಿ ಮೊದಲನೇ ವಿಕೆಟ್‌ಗೆ 160 ರನ್‌ಗಳ ಜತೆಯಾಟವಾಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ವಾರ್ನರ್‌, ಜಾನಿ ಬೈರ್‌ಸ್ಟೋವ್‌ ಅವರ ಜತೆ ಬ್ಯಾಟಿಂಗ್‌ ಮಾಡುವುದನ್ನು ಆನಂದಿಸುತ್ತೇನೆ ಎಂದು ಹೇಳಿದರು.

ಅಲ್ಲದೆ, ಅಕ್ಟೋಬರ್ 11 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆಯಲಿರುವ ಮುಂದಿನ ಪಂದ್ಯದ ಬಗ್ಗೆ ನಾಯಕ ಡೇವಿಡ್‌ ವಾರ್ನರ್‌ ಗಮನ ಹರಿಸಿದ್ದಾರೆ. “ಚೆನ್ನಾಗಿ ಬ್ಯಾಟಿಂಗ್‌ ಮಾಡುತ್ತಿದ್ದ ಅವರಿಗೆ (ಬೈರ್‌ಸ್ಟೋವ್) ನಾನು ಸ್ಟ್ರೈಕ್ ನೀಡುತ್ತಿದ್ದೆ. ನಾವು ಒಬ್ಬರಿಗೊಬ್ಬರು ಬ್ಯಾಟಿಂಗ್ ಮಾಡುವುದನ್ನು ಆನಂದಿಸುತ್ತೇವೆ. ಕಿಂಗ್ಸ್ ಇಲೆವೆನ್‌ ಪಂಜಾಬ್‌ ತಂಡದ ಬೌಲರ್‌ಗಳಿಂದ ಬರುತ್ತಿದ್ದ ಸ್ವಿಂಗ್ ಅನ್ನು ಬಹಳ ಎಚ್ಚರಿಕೆಯಿಂದ ಆಡಿದ್ದೆವು. ರಾಜಸ್ಥಾನ್‌ ರಾಯಲ್ಸ್ ವಿರುದ್ಧ ಕಠಿಣ ಪಂದ್ಯದ ಕಡೆ ನಾವು ಗಮನಹರಿಸಿದ್ದೇವೆ, ಮತ್ತೆ ಹೊಸದಾಗಿ ಆಟವನ್ನು ಪ್ರಾರಂಭಿಸಬೇಕು,” ಎಂದು ಡೇವಿಡ್‌ ವಾರ್ನರ್‌ ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!