Bengaluru

ಮಾದಕ ವಸ್ತು; ಗೂಂಡಾ ಕಾಯ್ದೆಯಡಿ ಕ್ರಮ: ಇನ್ನೊಂದು ವಾರದಲ್ಲಿ ಸುಗ್ರಿವಾಜ್ಞೆ ?…

ಬೆಂಗಳೂರು, ಅ 8- ರಾಜ್ಯದಲ್ಲಿ ಗಾಂಜಾ, ಮಾದಕ ದ್ರವ್ಯಗಳ ಮಾರಾಟ, ನಿಷೇಧಿಸಿದ್ದು, ಇಂತಹ ಅಕ್ರಮಗಳಲ್ಲಿ ತೊಡಗುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಕುರಿತ ಕಾನೂನು ಜಾರಿಗೊಳಿಸಲು ಇನ್ನೊಂದು ವಾರದಲ್ಲಿ ಸುಗ್ರಿವಾಜ್ಞೆ ಹೊರಡಿಸಲಾಗುವುದು ಎಂದು ರಾಜ್ಯ ಸರ್ಕಾರ ರಾಜ್ಯಪಾಲರಿಗೆ ಭರವಸೆ ನೀಡಿದೆ.

ಮಾದಕ ವಸ್ತುಗಳ ಮಾರಾಟ, ಬಳಕೆ, ಸೇವಿಸುವಂತೆ ಪ್ರಚೋದಿಸುವವರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಕಳೆದ ನಾಲ್ಕು ತಿಂಗಳ ಹಿಂದೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಮಾದಕ ವಸ್ತುಗಳ ಜಾಲದಲ್ಲಿರುವವರ ಮೇಲೆ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡಿದ್ದಾರೆ. ಇದರ ಅನ್ವಯ ಸುಗ್ರಿವಾಜ್ಞೆ ಮೂಲಕ ಕಾನೂನಿಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ.

ಮುಖ್ಯಮಂತ್ರಿಗಳ ಸಚಿವಾಲಯದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಮಣ ರೆಡ್ಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಜಾವೆದ್ ಅಖ್ತರ್ ಅವರು ರಾಜ್ಯಪಾಲ ವಜೂಭಾಯಿ ವಾಲಾ ಅವರನ್ನು ಭೇಟಿ ಮಾಡಿ ಇಂದು ಮಹತ್ವದ ಚರ್ಚೆ ನಡೆಸಿದರು.

ಮಾದಕ ದ್ರವ್ಯ ನಿಗ್ರಹಕ್ಕಾಗಿ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ಈ ಕಾನೂನನ್ನು ಮತ್ತಷ್ಟು ಬಲಗೊಳಿಸುವ ಉದ್ದೇಶದಿಂದ ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ಮಾಡಲಾಗುವುದು ಎಂದು ರಾಜ್ಯಪಾಲರಿಗೆ ಭರವಸೆ ನೀಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಳೆದ ಜುಲೈ 31 ರಂದು ತಮ್ಮನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಗುಟ್ಕಾ, ಜಿಗಿಯುವ ತಂಬಾಕು, ಎಲ್ಲಾ ರೀತಿಯ ಗುಟ್ಕಾ ನಿಷೇಧವಾಗಿದ್ದರೂ ಸಹ ಎಲ್ಲಾ ಕಡೆಗಳಲ್ಲಿ ಮಾರಾಟವಾಗುತ್ತಿರುವ ಕುರಿತು ದೂರುಗಳು ಕೇಳಿ ಬಂದಿದೆ. ಈ ಕುರಿತು ವರದಿ ಸಲ್ಲಿಸುವಂತೆ ರಾಜ್ಯಪಾಲರು ಸೂಚಿಸಿದ್ದರು.

ಅದರಂತೆ ಮುಖ್ಯಮಂತ್ರಿ ಅವರ ಸೂಚನೆ ಮೇರೆಗೆ ಪ್ರಗತಿ ಪರಿಶೀಲನೆ ನಡೆಸಿದ ರಮಣರೆಡ್ಡಿ ಮತ್ತು ಜಾವೆದ್ ಅಖ್ತರ್, ಇಂದು ಈ ಕುರಿತು ಸಮಗ್ರ ವರದಿ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ರಾಜ್ಯಪಾಲರು ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಡ್ರಗ್ ಅಕ್ರಮಗಳ ಕುರಿತು ಪ್ರಶ್ನಿಸಿದರು. ಮಾದಕ ವಸ್ತುಗಳ ಮಾರಾಟ, ಬಳಕೆಯ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಈ ಇಬ್ಬರೂ ಅಧಿಕಾರಿಗಳು ರಾಜ್ಯದಲ್ಲಿ ಮಾದಕ ವಸ್ತುಗಳ ಜಾಲದ ಮೇಲೆ ಕಠಿಣ ಕ್ರಮ ಕೈಗೊಂಡಿದ್ದು, ಇದು ಇನ್ನಷ್ಟು ತೀವ್ರಗೊಳ್ಳಲಿದೆ. ಇನ್ನೊಂದು ವಾರದಲ್ಲಿ ಸುಗ್ರಿವಾಜ್ಞೆ ಮೂಲಕ ಕಾನೂನಿಗೆ ತಿದ್ದುಪಡಿ ತರಲಾಗುವುದು ಎಂದು ತಿಳಿಸಿದ್ದಾರೆ. ಮಾದಕ ವಸ್ತುಗಳ ಜಾಲದಲ್ಲಿರುವವರ ಮೇಲೆ ಕ್ರಮ ಕೈಗೊಳ್ಳುವ ಕುರಿತ ಕಾನೂನು ತಿದ್ದುಪಡಿ ಕರಡು ಬಹುತೇಕ ಅಂತಿಮಗೊಂಡಿದೆ ಎನ್ನಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!