New Delhi

ದೇಶದ ಸಾರ್ವಭೌಮತೆ ರಕ್ಷಿಸಲು ವಾಯು ಪಡೆ ಸನ್ನದ್ಧ: ಬಧೌರಿಯಾ

ನವದೆಹಲಿ, ಅ 8- ಇಂದು 88ನೇ ಭಾರತೀಯ ವಾಯುಸೇನಾ ಸಂಸ್ಥಾಪನಾ ದಿನ. ಅತ್ಯಂತ ಸಮರ್ಪಣೆ ಮತ್ತು ಉತ್ಕೃಷ್ಟ ಸೇವೆ ಸಲ್ಲಿಸುತ್ತಿರುವ , ವೀರ ವಾಯು ಯೋಧರ ಪರಿಶ್ರಮವನ್ನು ದೇಶ ಸ್ಮರಿಸುತ್ತಿದೆ.

ಭಾರತೀಯ ವಾಯುಪಡೆ 1932ರ ಅಕ್ಟೋಬರ್ 8 ರಂದು ಪ್ರಾರಂಭವಾಗಿದ್ದು, ಅಂದಿನಿಂದ ದೇಶ ರಕ್ಷಣೆಗೆ ತನ್ನನ್ನು ಅರ್ಪಿಸಿಕೊಂಡಿದೆ. ವಾಯು ಸೇನಾ ದಿನದ ಅಂಗವಾಗಿ , ಗಾಜಿಯಾಬಾದ್ ಹಾಗೂ ಹಿಂಡನ್ ವಾಯುನೆಲೆಯಲ್ಲಿ ವಾಯುಪಡೆ ಪರೇಡ್ ಆಯೋಜಿಸಲಾಗಿದೆ. ವಿಶೇಷವಾಗಿ ಹಿಂಡನ್ ನಲ್ಲಿ , ದೇಶ ರಕ್ಷಣೆಗೆ ಕೊಡುಗೆ ನೀಡಿದ ವಿವಿಧ ವಿಮಾನಗಳನ್ನು ಪ್ರದರ್ಶಿಸಲಾಯಿತು. ಆಕಾಶಗಂಗಾ- ಸ್ಕೈಡೈವಿಂಗ್ ತಂಡ , ಈ ಸಂದರ್ಭದಲ್ಲಿ ಸಾಹಸ ಪ್ರದರ್ಶಿಸಿತು. ಎಎನ್- 32 ಯುದ್ಧ ವಿಮಾನ ಆಕರ್ಷಕ ಚಿತ್ತಾರ ಮೂಡಿಸಿತು. ವಿಂಟೇಜ್ ವಿಮಾನ ಹಾಗೂ ವಾಯುಸೇನೆಯ ಆಧುನಿಕ ಮುಂಚೂಣಿ ಯುದ್ಧ ವಿಮಾನಗಳು ಗಮನ ಸೆಳೆದವು.

ವಾಯುಸೇನೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್. ಕೆ. ಎಸ್ ಬಧೌರಿಯಾ, ಪ್ರತಿಯೊಂದು ಯುದ್ಧ ಹಾಗೂ ರಕ್ಷಣಾ ಕಾರ್ಯಾಚರಣೆ ಅಭಿಯಾನಗಳಲ್ಲಿ ಯೋಧರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ದೇಶದ ವಾಯುಪಡೆಯ ಪರಿವರ್ತನೆಗೆ ನಾವೆಲ್ಲರೂ ಮತ್ತೊಮ್ಮೆ ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸಬೇಕಿದೆ. ದೇಶದ ಸಾರ್ವಭೌಮತೆ, ಸಮಗ್ರತೆ ರಕ್ಷಿಸಲು ವಾಯುಪಡೆ ಸರ್ವಸನ್ನದ್ಧವಾಗಿದೆ ಎಂದರು.

88ನೇ ವಾಯುಸೇನಾ ದಿನ ಅಂಗವಾಗಿ ವಾಯುಪಡೆಯ ವೀರ ಯೋಧರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ , ಪ್ರಧಾನಮಂತ್ರಿ ನರೇಂದ್ರ ಮೋದಿ , ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಯೋಧರಿಗೆ ಶುಭಾಶಯ ಕೋರಿದ್ದಾರೆ.

ನಮ್ಮ ವಾಯುಪಡೆಯ ಯೋಧರು, ಮಾಜಿ ಯೋಧರು ಮತ್ತು ಭಾರತೀಯ ವಾಯುಪಡೆಯ ಕುಟುಂಬಸ್ಥರನ್ನು ನಾವು ಹೆಮ್ಮೆಯಿಂದ ಗೌರವಿಸುತ್ತೇವೆ. ನಮ್ಮ ಆಕಾಶವನ್ನು ಭದ್ರಪಡಿಸುವಲ್ಲಿ ಮತ್ತು ನಾಗರಿಕರಿಗೆ ಸೇವೆ ಒದಗಿಸುವಲ್ಲಿ ಐಎಎಫ್ ಕೊಡುಗೆ ಅಪಾರ ಎಂದು ರಾಷ್ಟ್ರಪತಿ ಟ್ವೀಟ್ ಸಂದೇಶದಲ್ಲಿ ಹೇಳಿದ್ದಾರೆ.

ಪ್ರಧಾನಿ ಮೋದಿ, ವಾಯುಪಡೆಯ ದಿನದಂದು ಭಾರತೀಯ ವಾಯುಸೇನೆಯಯ ಎಲ್ಲಾ ವೀರ ಯೋಧರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನೀವು ದೇಶದ ವಾಯುಮಾರ್ಗವನ್ನು ಸುರಕ್ಷಿತವಾಗಿರಿಸುವುದಲ್ಲದೆ, ವಿಪತ್ತು ಸಮಯದಲ್ಲಿ ಮಾನವೀಯತೆಯ ಸೇವೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತೀರಿ. ಭಾರತಾಂಬೆ ರಕ್ಷಿಸಲು ನಿಮ್ಮ ಧೈರ್ಯ, ಶೌರ್ಯ ಮತ್ತು ಸಮರ್ಪಣೆ ಎಲ್ಲರಿಗೂ ಸ್ಫೂರ್ತಿ ಎಂದು ಟ್ವೀಟ್ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!