Kalaburagi

ಕೇಂದ್ರ ಸರ್ಕಾರದ ಮಸೂದೆಗಳ ವಿರುದ್ಧ 10 ಕೋಟಿ‌ ಸಹಿ ‌ಸಂಗ್ರಹಿಸಿ, ರಾಷ್ಟ್ರಪತಿಗೆ ರವಾನೆ

ಕಲಬುರಗಿ,ಅ.7- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಸಂಬಂಧಿತ ಕಾಯ್ದೆ ಜಾರಿಗೆ ತಂದಿದ್ದು, ಇದು ರೈತರಿಗೆ ಮರಣ ಶಾಸನವಾಗಿ ಪರಿಣಮಿಸಲಿವೆ ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವ್ಯವಹಾರಗಳ ಮಸೂದೆ -2020 ಬೆಲೆ ಖಾತ್ರಿ ಮತ್ತು ಕೃಷಿ ಸೇವೆಗಳ ಒಪ್ಪಂದ ಮಸೂದೆ- 2020 ಹಾಗೂ ಅವಶ್ಯವಸ್ತುಗಳ ( ತಿದ್ದುಪಡಿ) ಮಸೂದೆ -2020 ಈ ಮೂರು ಮಸೂದೆಗಳನ್ನು ಯಾವುದೇ ಚರ್ಚೆ ಮಾಡದೇ ಜಾರಿಗೆ ತರಲಾಗಿದೆ. ಇದರಿಂದಾಗಿ ರೈತ ಸಮುದಾಯ ತೀವ್ರ ಸಂಕಟ‌ ಅನುಭವಿಸಬೇಕಾಗುತ್ತದೆ ಎಂದು ಅವರು ಆರೋಪಿಸಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಆದಾಯ ದ್ವಿಗುಣಗೊಳಿಸಲಾಗುವುದು, ಡಾ. ಸ್ವಾಮಿನಾಥನ್ ವರದಿ ಜಾರಿಗೊಳಿಸಲಾಗುವುದು ಎಂದು ಪ್ರಧಾನಿ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.‌ ಯುಪಿಎ 2 ಅಧಿಕಾರದಲ್ಲಿ ಶೇಕಡಾ 4.3ರಷ್ಟು ಇದ್ದ ರೈತರ ಆದಾಯ ಈಗ ಶೇಕಡಾ 3.1ಕ್ಕೆ ಕುಸಿದಿದೆ. ಈ ನಡುವೆ ಮೂರು ಮಸೂದೆಗಳನ್ನು ಜಾರಿಗೆ ತರುವ ಮೂಲಕ ರೈತರ ಬದುಕನ್ನು ದುರ್ಬರಗೊಳಿಸಲಾಗಿದೆ ಎಂದರು.

ಎಂ ಎಸ್ ಪಿಯನ್ನು ಸರ್ಕಾರ ನಿಗದಿ ಮಾಡಲಾಗುತ್ತದೆ. ಕನಿಷ್ಠ ಬೆಂಬಲ ಬಗ್ಗೆ ಈ ನೂತನ‌ ತಿದ್ದುಪಡಿಯಲ್ಲಿ ಎಲ್ಲಿಯೂ ಹೇಳಲಾಗಿಲ್ಲ. ಹಾಗಾದರೆ ರೈತರು ಬೆಳೆದ ಬೆಳೆಗೆ ದರ ನಿಗದಿ ಯಾರು ಮಾಡಬೇಕು? ಎಪಿಎಂ ಸಿ ಹೊರಗೆ ಧಾನ್ಯ ಮಾರಾಟ ಮಾಡಲು ಅವಕಾಶ ನೀಡಲಾಗಿದೆ ಎಂದು ಸರಕಾರ ಹೇಳುತ್ತದೆ. ಇದರಿಂದಾಗಿ ಎಪಿಎಂಸಿ ವ್ಯವಸ್ಥೆಯೇ ಇದರಿಂದ ಕುಂಠಿತಗೊಳ್ಳಲಿದೆ ಎಂದು ಹೇಳಿದರು.

ಬಿಹಾರದಲ್ಲಿ ಎಪಿಎಂಸಿ ವ್ಯವಸ್ಥೆಯನ್ನೇ ಹಾಳಮಾಡಲಾಗಿದೆ. ಬೇರೆ ರಾಜ್ಯಗಳಲ್ಲಿ ಮೆಕ್ಕೆ‌ಜೋಳ ಪ್ರತಿ ಕ್ವಿಂಟಾಲ್ ಗೆ 2400 ರೂ. ಇದ್ದರೆ ಬಿಹಾರದಲ್ಲಿ ಕೇವಲ 1200 ರೂ. ಗೆ ಮಾರಲಾಗುತ್ತದೆ. ಕೇಂದ್ರದ ರೈತ ವಿರೋಧಿ ಧೋರಣೆ‌ ಖಂಡಿಸಿ ಇದುವರೆಗೆ ಸುಮಾರು 4000 ಕ್ಕೂ ಅಧಿಕ ಪ್ರತಿಭಟನೆಗಳು ನಡೆದಿವೆ. ಇದು ಕೇಂದ್ರ ಸರ್ಕಾರ ರೈತರ ವಿರೋಧಿ ಎನ್ನುವುದಕ್ಕೆ ಸಾಕ್ಷಿಯಾಗಿದೆ‌ ಎಂದು ಅವರು ಆರೋಪಿಸಿದರು.

ರಾಜ್ಯದಿಂದ 25 ಎಂಪಿ ಹಾಗೂ ಹಣಕಾಸು ಸಚಿವರೂ ಕೂಡಾ ರಾಜ್ಯದಿಂದಲೇ ಆಯ್ಕೆಗೊಂಡಿದ್ದಾರೆ. ಆದರೂ ಯಾರೊಬ್ಬರು ರೈತ ವಿರೋಧಿ ಕಾನೂನು ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಲಿಲ್ಲ. ರಾಜ್ಯದಲ್ಲಿ ಭಾರೀ ಮಳೆಗೆ ಬೆಳೆ ಹಾಳಾಗಿವೆ. ಬ್ರಿಜ್ ಗಳು ರಸ್ತೆಗಳು ಹಾಳಾಗಿವೆ. ಎನ್ ಡಿ ಆರ್ ಎಫ್ ಅಡಿಯಲ್ಲಿ ಬರುತ್ತಿದ್ದ ಪರಿಹಾರ ಇದುವರೆಗೆ ಬಂದಿಲ್ಲ ಎಂದು ಅವರು ದೂರಿದರು.

ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಅವರು ಕೇಂದ್ರ ರೈತವಿರೋಧಿ ಕಾನೂನುಗಳ ವಿರುದ್ದ ಪಂಜಾಬ್ ಹಾಗೂ ಹರಿಯಾಣ ದಲ್ಲಿ ಪ್ರತಿಭಟನೆ ನಡೆಯುತ್ತಿದೆ. ರೈತ ವಿರೋಧಿ ಕಾನೂನುಗಳನ್ನು ವಿರೋಧಿಸಿ ಸಹಿ ಚಳುವಳಿ ಪ್ರಾರಂಭಿಸಲಿದ್ದು ಇದೇ 10 ರಂದು ಮಂಡ್ಯದಲ್ಲಿ ಉದ್ಘಾಟನೆಯಾಗಲಿದೆ. ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಆಗಮಿಸಲಿದ್ದಾರೆ. ಅದೇ ರೀತಿ ಕಲಬುರಗಿಯಲ್ಲಿಯೂ ಮಾಡಲಾಗುವುದು. ಒಟ್ಟು 10 ಕೋಟಿ ಸಹಿ ಸಂಗ್ರಹ ಗುರಿ ಹೊಂದಿದ್ದು ಸಂಗ್ರಹಿಸಿದ ಸಹಿಯನ್ನು ರಾಷ್ಟ್ರಪತಿಗಳಿಗೆ ಕಳಿಸಿ ಬಿಲ್ ವಾಪಸ್ ಪಡೆಯಲು ಒತ್ತಾಯಿಸಲಾಗುವುದು ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಪಕ್ಷ‌ ಕೃಷಿ ಸುಧಾರಣೆಗೆ ವಿರೋಧಿಸಿಲ್ಲ. ಆದರೆ, ರೈತರ ವಿರುದ್ಧದ ಧೋರಣೆಗಳನ್ನು ವಿರೋಧಿಸುತ್ತದೆ.‌ ಎಪಿಎಂಸಿ ನಲ್ಲಿ‌ರುವ ನ್ಯೂನ್ಯತೆಗಳನ್ನು ಸರಿಪಡಿಸಲಿ ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸಲಿ. ಆದರೆ‌, ಎಪಿಎಂಸಿಯನ್ನು ದುರ್ಬಲಗೊಳಿಸುವ ಹುನ್ನಾರವನ್ನು ಕಾಂಗ್ರೆಸ್ ವಿರೋಧಿಸುತ್ತದೆ ಹಾಗೂ ಹೋರಾಟ ನಡೆಸುತ್ತದೆ‌ ಎಂದು ಅವರು ಎಚ್ಚರಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!