Belagavi

ದೆಹಲಿಯಲ್ಲಿ ಅಂಗಡಿ ಸ್ಮಾರಕ ನಿರ್ಮಾಣ

ಬೆಳಗಾವಿ, 7- ದೆಹಲಿಯ ಲಿಂಗಾಯತ ರುದ್ರಭೂಮಿಯಲ್ಲಿ ಸುರೇಶ ಅಂಗಡಿ ಅವರ ಸ್ಮಾರಕ ನಿರ್ಮಾಣ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆಯೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ರೈಲ್ವೆ ಇಲಾಖೆಯ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅವರ ಮನೆಗೆ ಭೇಟಿ ನೀಡಿ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದ ಅವರು, ದೆಹಲಿಯಲ್ಲಿ ಅಂಗಡಿಯವರನ್ನು ಸಮಾಧಿ ಮಾಡಿದ ಸ್ಥಳದಲ್ಲೇ ಅವರ ನೆನಪಿಗಾಗಿ ಸ್ಮಾರಕಯೊಂದನ್ನು ನಿರ್ಮಿಸಲು ನಿರ್ದೇಶನ ನೀಡಲಾಗಿದೆಯೆಂದರು.

ಅಂಗಡಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ನಮನ‌ ಸಲ್ಲಿಸಿದ ಮುಖ್ಯಮಂತ್ರಿ ಕುಟುಂಬದ ಸದಸ್ಯರ ಜತೆ ಮಾತನಾಡಿ, ಅಂಗಡಿ ಅವರ ಸಜ್ಜನಿಕೆಯ ನಡವಳಿಕೆಯನ್ನು ಸ್ಮರಿಸಿದರು. ಅಂಗಡಿ ಅವರ ತಾಯಿ ಸೋಮವ್ವ ಅವರ ಕೈ ಹಿಡಿದು ಕೆಲಹೊತ್ತು ಭಾವುಕರಾದ ಮುಖ್ಯಮಂತ್ರಿಗಳು, ಧೈರ್ಯದಿಂದ ಇರುವಂತೆ ತಿಳಿಸಿದರು.

ಅಂಗಡಿ ದೆಹಲಿಯ ಆಸ್ಪತ್ರೆಯಲ್ಲಿದ್ದಾಗ ಮಾತನಾಡಿದ್ದರು. ತಾವು ಆರೋಗ್ಯವಾಗಿರುವದಾಗಿಯೂ ಶೀಘ್ರವೇ ಗುಣವಾಗಿ ಸೇವೆಗೆ ಮರಳುವದಾಗಿ ತಿಳಿಸಿದ್ದರು ಎಂದು ಮುಖ್ಯಮಂತ್ರಿಗಳು ನೆನಪಿಸಿಕೊಂಡರು.

ಅಂಗಡಿ ಅವರ ಸಂಬಂಧಿಕರೂ ಆಗಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ ಶೆಟ್ಟರ್, ಬಾಕಿ ಉಳಿದಿದ್ದ ರೈಲ್ವೆ ಇಲಾಖೆಯ ಬಹುತೇಕ ಯೋಜನೆಗಳಿಗೆ ಅಂಗಡಿ ಅವರು ಚಾಲನೆ ನೀಡಿದ್ದರು. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಾಜ್ಯದ ವಿವಿಧ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲು ತೀವ್ರ ಆಸಕ್ತಿಯಿಂದ ಕೆಲಸ ಮಾಡುತ್ತಿದ್ದರು ಎಂದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಬಳಿಕ ಅಂಗಡಿ ಅವರು ಅತ್ಯಂತ ಚಟುವಟಿಕೆಯಿಂದ ಕೆಲಸ ಮಾಡುತ್ತಿದ್ದರು ಎಂದು ಸ್ಮರಿಸಿದರು.

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ ಅವರು ಕೂಡ ಸುರೇಶ ಅಂಗಡಿ ಅವರೊಂದಿಗಿನ ಒಡನಾಟ ಸ್ಮರಿಸಿ, ಕುಟುಂಬಕ್ಕೆ ಸಾಂತ್ವನ ಹೇಳಿದರು.

ಪತ್ನಿ ಮಂಗಲಾ ಸುರೇಶ ಅಂಗಡಿ, ಮಕ್ಕಳಾದ ಶ್ರದ್ಧಾ ಹಾಗೂ ಸ್ಫೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಶಾಸಕ ಅನಿಲ ಬೆನಕೆ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೇರಿದಂತೆ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!