Haveri

ಕಿಡಿಗೇಡಿಗಳ ವದಂತಿಗಳಿಗೆ ರೈತರು ಕಿವಿಗೊಡಬಾರದು :ಬಿ‌.ಸಿ.ಪಾಟೀಲ

ಹಾವೇರಿ,ಅ 6 – ಕೆಲವು ಕಿಡಿಗೇಡಿಗಳು ರೈತರನ್ನು ಯೋಜನೆಯ ಹೆಸರಿನಲ್ಲಿ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದು, ಇಲ್ಲಸಲ್ಲದ ವದಂತಿ ಸುಳ್ಳುಸುದ್ದಿಗಳಿಗೆ ಕಿವಿಗೊಡಬಾರದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು,ರೈತರ ಹೆಸರಿನಲ್ಲಿ ಕೆಲವರು ಅನಾವಶ್ಯಕ ಧರಣಿ ನಡೆಸುತ್ತಿರುವುದು ವಿಷಾದನೀಯ. ನೈಸರ್ಗಿಕವಾದ ನೆಲ ಜಲದ ಮೇಲೆ ಯಾರಿಗೂ ಹಕ್ಕಿಲ್ಲ. ಹಿರೆಕೆರೂರಿನಿಂದ ಶಿಕಾರಿಪುರಕ್ಕೆ ಹೋಗುವ ಉಡುಗಣಿ-ತಾಳಗುಂದ-ಹೊಸೂರು ಏತ ನೀರಿನ ಯೋಜನೆಯಲ್ಲಿ ಹಿರೆಕೆರೂರಿನ ವರಹ ನಿಟ್ನೇಗಿಲು, ಬನ್ನಟ್ಟಿ, ಬಳ್ಳೂರು, ಚಿಕ್ಕೇರೂರು, ಯಲ್ಲಾಪುರ ಸೇರಿದಂತೆ ತಾಲೂಕಿನ ಏಳು ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಆದರೆ ಕೆಲವು ಕಿಡಿಗೇಡಿಗಳು ರೈತರ ಹೆಸರಿನಲ್ಲಿ ದುರುದ್ದೇಶಪೂರಕವಾಗಿ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ.ಯಾವುದಾದರೊಂದು ನೀರಾವರಿ ಯೋಜನೆ ಕಾರ್ಯಗತವಾಗಬೇಕಾದರೆ ಹಲವಾರು ಸ್ಥಳಗಳಿಂದ ಹಾದು ಹೋಗಬೇಕಾಗುತ್ತದೆ.ಜನರು ವಾಸ್ತವಾಂಶವನ್ನು ಅರಿಯಬೇಕು.ಅಲ್ಲದೇ ಉಡುಗಣಿ-ತಾಳಗುಂದ-ಹೊಸೂರು ಏತ ನೀರಿನ ಯೋಜನೆಯಿಂದ ರೈತರಿಗಾಗಲೀ ಜನರಿಗಾಗಲೀ ಯಾವುದೇ ತೊಂದರೆಯಾಗದು. ಯೋಜನೆಯಿಂದ ಹಿರೆಕೆರೂರು ತಾಲೂಕಿನ ಕೆರೆಗಳು ತುಂಬಿ ಅನುಕೂಲವೇ ಆಗಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಹಿರೆಕೆರೂರು ತಾಲೂಕಿನ ಮಡ್ಲೂರು ಏತನೀರಾವರಿ ಯೋಜನೆ ಹಾನಗಲ್ ತಾಲೂಕಿನ ಹೊಂಕಣದಿಂದ ಬರುತ್ತಿದೆ. ಸರ್ವಜ್ಞ ಏತನೀರಾವರಿ ಯೋಜನೆ ಉಕ್ಕಡಗತ್ರಿ ರಾಣೆಬೆನ್ನೂರು ಗಡಿಯಿಂದ ಬರುತ್ತಿದೆ. ಹಿರೆಕೆರೂರು ಪಟ್ಟಣಕ್ಕೆ ಕುಡಿಯುವ ನೀರನ್ನು ತುಮ್ಮಿನಕಟ್ಟಿಯಿಂದ ಬರುತ್ತಿದೆ. ಹೀಗೇ ಬೇರೆ ತಾಲೂಕಿನಿಂದ ಹಿರೆಕೆರೂರಿಗೆ ಮೂರು ಯೋಜನೆಗಳು ಬರುತ್ತಿವೆ. ವಿನಾಕಾರಣ ರೈತರನ್ನು ದಾರಿತಪ್ಪಿಸುವುದರಿಂದ ಯಾರಿಗೇನು ಲಾಭವಾಗುತ್ತಿದೆಯೋ ಗೊತ್ತಿಲ್ಲ. ನೀರಾವರಿ ಯೋಜನೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ಇಂತಹವರ ಮಾತಿಗೆ ಅಪಪ್ರಚಾರಕ್ಕೆ ರೈತ ಬಾಂಧವರು ಯಾವುದೇ ಕಾರಣಕ್ಕೆ ಬೆಲೆಕೊಡಬಾರದು. ರೈತರಿಗೆ ಸರ್ಕಾರ ಯಾವುದೇ ರೀತಿ ಅನ್ಯಾಯ ಮಾಡುವುದಿಲ್ಲ‌.ವದಂತಿಗಳಿಗೆ ಕಿವಿಗೊಡಬಾರದೆಂದು ಬಿ.ಸಿ.ಪಾಟೀಲ ಮನವಿ ಮಾಡಿದರು.

Leave a Reply

Your email address will not be published. Required fields are marked *

Back to top button
error: Content is protected !!