New DelhiEntertainment

ಅ.15ರಿಂದ ಚಿತ್ರಮಂದಿರ ತೆರೆಯಲು ಅವಕಾಶ

ನವದೆಹಲಿ, ಅ 6 – ಕೋವಿಡ್‌ ಹಿನ್ನೆಲೆಯಲ್ಲಿ ದೇಶಾದ್ಯಂತ ಸ್ಥಗಿತಗೊಂಡಿದ್ದ ಸಿನೆಮಾ ಹಾಲ್‌ಗಳನ್ನು ಅ.15ರಿಂದ ಶೇ.50ರಷ್ಟು ತೆರೆಯಲು ಅವಕಾಶ ಕಲ್ಪಿಸಿರುವ ಕೇಂದ್ರ ಸರ್ಕಾರ ಇದಕ್ಕಾಗಿ ಪ್ರತ್ಯೇಕ ಮಾರ್ಗಸೂಚಿ (ಎಸ್‌ಒಪಿ) ಪ್ರಕಟಿಸಿದೆ.

ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ‌ ಜಾವಡೇಕರ್‌ ಎಸ್‌ಒಪಿಯನ್ನು ಬಿಡುಗಡೆಗೊಳಿಸಿದ್ದು, ಚಿತ್ರಮಂದಿರ ಪ್ರವೇಶಿಸುವವರಿಗೆ ಮಾಸ್ಕ್ ಧರಿಸುವುದು, ಥರ್ಮಲ್ ಸ್ಕ್ರೀನಿಂಗ್‌ಗಳು ಕಡ್ಡಾಯಗೊಳಿಸಲಾಗಿದೆ.

ಚಿತ್ರಮಂದಿರದ ಆಸನಗಳ ಸಾಮರ್ಥ್ಯವನ್ನು ಶೇ.50ಕ್ಕೆ ಇಳಿಸಲಾಗಿದೆ. ಮಲ್ಟಿಪ್ಲೆಕ್ಸ್‌ ಚಿತ್ರಪ್ರದರ್ಶನಗಳ ಸಮಯ ನಿಗದಿ ಇತರ ಚಿತ್ರಗಳಿಗೆ ಅಡ್ಡಿಯಾಗದಂತೆ ನಿಗದಿಪಡಿಸಬೇಕು. ಚಿತ್ರಮಂದಿರದೊಳಗೆ 24ರಿಂದ 30 ಡಿಗ್ರಿ ಸೆಲ್ಸಿಯಸ್‌ ತಾಪಮಾನವಿರುವಂತೆ ನೋಡಿಕೊಳ್ಳಬೇಕು ಎಂದು ಮಾರ್ಗಸೂಚಿ ಸ್ಪಷ್ಟಪಡಿಸಿದೆ.

ಈ ಮಾರ್ಗಸೂಚಿಗಳನ್ನು ಆರೋಗ್ಯ ಸಚಿವಾಲಯದ ಸಹಯೋಗದೊಂದಿಗೆ ಸಿದ್ದಪಡಿಸಲಾಗಿದೆ ಎಂದು ಜಾವಡೇಕರ್ ತಿಳಿಸಿದ್ದಾರೆ. ಚಿತ್ರಗಳ ಪ್ರದರ್ಶನ ದೇಶದ ಬಹುದೊಡ್ಡ ಆರ್ಥಿಕ ಚಟುವಟಿಕೆಯಾಗಿದ್ದು, ಜಿಡಿಪಿಗೆ ಗಮನಾರ್ಹ ಕೊಡುಗೆ ನೀಡುತ್ತದೆ. ಕೋವಿಡ್‌-19 ಸಾಂಕ್ರಾಮಿಕದ ಸಂದರ್ಭದಲ್ಲಿ ಚಿತ್ರ ಪ್ರದರ್ಶನಕ್ಕೆ ಸಂಬಂಧಿಸಿದ ಕ್ಷೇತ್ರಗಳ ಜನರು ಸೋಂಕು ಹರಡದಂತೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದಿದ್ದಾರೆ.

ಕಂಟೈನ್ಮೆಂಟ್‌ ವಲಯದ ಹೊರಗೆ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ.

ಮಾರ್ಗಸೂಚಿಗಳೇನು?

-ಚಿತ್ರಮಂದಿರದಲ್ಲಿ ಶೇ.50ರಷ್ಟು ಆಸನಕ್ಕೆ ಮಾತ್ರ ಅವಕಾಶ.

– ಆಸನಗಳ ನಡುವೆ ದೈಹಿಕ ಅಂತರ ಕಾಪಾಡಿಕೊಳ್ಳಬೇಕು.

-ಹ್ಯಾಂಡ್‌ ವಾಷ್‌ ಮತ್ತು ಹ್ಯಾಂಡ್‌ ಸ್ಯಾನಿಟೈಸರ್ ಸೌಲಭ್ಯ.

-ಥರ್ಮಲ್‌ ಸ್ಕ್ರೀನಿಂಗ್‌ ಕಡ್ಡಾಯ, ಲಕ್ಷಣಗಳಿಲ್ಲದವರಿಗೆ ಮಾತ್ರ ಪ್ರವೇಶ.

-ಒಂದೇ ಬಾರಿಗೆ ಹಲವು ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಮಾಡದಂತೆ ನೋಡಿಕೊಳ್ಳಬೇಕು.

-ನಿಯಮಿತ ಸ್ವಚ್ಛಗೊಳಿಸುವುದು ಅತ್ಯಗತ್ಯ

– ಡಿಜಿಟಲ್‌ ಪಾವತಿಗೆ ಉತ್ತೇಜನ ನೀಡಬೇಕು.

-ಇಂಟರ್ವಲ್‌ ವೇಳೆ ಜನರ ಓಡಾಟವನ್ನು ಕಡಿಮೆಗೊಳಿಸಬೇಕು.

-ದೈಹಿಕ ಅಂತರ ಕಾಪಾಡಿಕೊಳ್ಳಲು ಆಸನಗಳಿಗೆ ಮಾರ್ಕರ್‌ ಬಳಸಬೇಕು.

-ಉಗುಳುವುದನ್ನು ಕಡ್ಡಾಯವಾಗಿ ನಿಷೇಧಿಸಬೇಕು.

-ಪ್ಯಾಕೇಜ್ಡ್ ಆಹಾರಕ್ಕೆ ಮಾತ್ರ ಅವಕಾಶ ನೀಡಬೇಕು. ಚಿತ್ರಮಂದಿರದೊಳಗೆ ಆಹಾರ ಪೂರೈಕೆ ಮಾಡಬಾರದು.

Related Articles

Leave a Reply

Your email address will not be published. Required fields are marked *

Back to top button
error: Content is protected !!