Sports

ನಮ್ಮ ಪ್ರದರ್ಶನ ಪರಿಪೂರ್ಣತೆಯಿಂದ ಕೂಡಿರಲಿಲ್ಲ: ವಿರಾಟ ಕೊಹ್ಲಿ

ದುಬೈ, ಅ 6- ಕಳಪೆ ಪ್ರದರ್ಶನ ತೋರಿದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಸೋಮವಾರ ರಾತ್ರಿ 59 ರನ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೋಲು ಅನುಭವಿಸಿತು. ಪಂದ್ಯದ ಬಳಿಕ ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ, ಫೀಲ್ಡಿಂಗ್‌ ಹಾಗೂ ಡೆತ್‌ ಬೌಲಿಂಗ್‌ ವಿಭಾಗಗಳಲ್ಲಿ ಸುಧಾರಣೆಯಾಗುವ ಅಗತ್ಯವಿದೆ ಎಂದು ಹೇಳಿದರು.

15ನೇ ಓವರ್‌ನಲ್ಲಿ ಯಜ್ವೇಂದ್ರ ಚಹಲ್‌ ಮಾರ್ಕಸ್‌ ಸ್ಟೋಯ್ನಿಸ್‌ ಅವರ ಸುಲಭ ಕ್ಯಾಚ್‌ ಅನ್ನು ಕೈಚೆಲ್ಲಿದರು. ಇದು ಆರ್‌ಸಿಬಿಗೆ ದುಬಾರಿಯಾಯಿತು. ಸ್ಟೋಯ್ನಿಸ್ ಕೇವಲ 26 ಎಸೆತಗಳಲ್ಲಿ 53 ರನ್‌ಗಳನ್ನು ಸಿಡಿಸಿದರು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು 196 ರನ್‌ಗಳನ್ನು ದಾಖಲಿಸಿತು.

ಪಂದ್ಯದ ಬಳಿಕ ಸ್ಟಾರ್‌ ಸ್ಪೋರ್ಟ್ಸ್ ಜತೆ ಮಾತನಾಡಿದ ನಾಯಕ ವಿರಾಟ್‌ ಕೊಹ್ಲಿ, “ಆರಂಭಿಕ ಆರು ಓವರ್‌ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅದ್ಭುತ ಪ್ರದರ್ಶನ ತೋರುವ ಮೂಲಕ ಭರ್ಜರಿ ಆರಂಭ ಕಂಡಿತ್ತು. ನಂತರದ ಎಂಟು ಓವರ್‌ಗಳಲ್ಲಿ ನಾವು ನಿಯಂತ್ರಣ ಸಾಧಿಸಿದ್ದೆವು. ಆದರೆ ಕೊನೆಯಲ್ಲಿ ಅವರು ಮುನ್ನಡೆ ಸಾಧಿಸಿದರು. ಮುಖ್ಯವಾದ ವಿಷಯವೇನೆಂದರೆ ನಮಗೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಲಿಲ್ಲ. ಇದು ಮನಸಿಗೆ ತುಂಬಾ ಬೇಸರ ಉಂಟು ಮಾಡುತ್ತದೆ,” ಎಂದು ಹೇಳಿದರು.

ಎಲ್ಲಾ ವಿಭಾಗಗಳಿಂದ ಆರ್‌ಸಿಬಿಯ ಪರಿಪೂರ್ಣ ಪ್ರದರ್ಶನ ಇದಾಗಿರಲಿಲ್ಲ ಎಂಬುದನ್ನು ವಿರಾಟ್‌ ಕೊಹ್ಲಿ ಉಲ್ಲೇಖಿಸಿದರು.

ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್, ಪೃಥ್ವಿ ಶಾ ಹಾಗೂ ಶಿಖರ್‌ ಧವನ್‌ ಜೋಡಿ ನಿಯಮಿತ ಬೌಂಡರಿಗಳನ್ನು ಸಿಡಿಸುವ ಮೂಲಕ ಅದ್ಭುತ ಆರಂಭವನ್ನು ನೀಡಿತು. ಈ ಜೋಡಿ ಐದನೇ ಓವರ್‌ನಲ್ಲಿಯೇ ತಂಡದ ಮೊತ್ತ 50ಕ್ಕೆ ಏರಿಸಿತು.

ಪೃಥ್ವಿ ಶಾ ಅವರು ಔಟ್‌ ಆಗುವುದಕ್ಕೂ ಮುನ್ನ ಈ ಜೋಡಿ ಮೊದಲನೇ ವಿಕೆಟ್‌ಗೆ 68 ರನ್‌ಗಳನ್ನು ದಾಖಲಿಸಿತ್ತು. ಪೃಥ್ವಿ ಶಾ 23 ಎಸೆತಗಳಲ್ಲಿ 42 ರನ್‌ಗಳಿಸಿದರು. ಇದಾದ ಬಳಿಕ ಇಸುರು ಉದಾನ, ಶಿಖರ್‌ ಧವನ್‌ (32) ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು.

ನಂತರ ಶ್ರೇಯಸ್‌ ಅಯ್ಯರ್‌ ಹಾಗೂ ರಿಷಭ್‌ ಪಂತ್‌ ಜತೆಯಾಟವನ್ನು ಆಡಿದರು. ಆದರೆ, ಈ ಜೋಡಿ ಹೆಚ್ಚು ಸಮಯ ಕ್ರೀಸ್‌ನಲ್ಲಿ ಉಳಿಯಲಿಲ್ಲ. ಶ್ರೇಯಸ್‌ ಅಯ್ಯರ್ ದೊಡ್ಡ ಹೊಡೆತಕ್ಕೆ ಕೈಹಾಕಿ ಮೊಯಿನ್ ಅಲಿಗೆ ವಿಕೆಟ್‌ ಒಪ್ಪಿಸಿದರು. ನಂತರ ರಿಷಭ್‌ ಪಂತ್‌ ಜತೆ ಸೇರಿಕೊಂಡ ಮಾರ್ಕಸ್‌ ಸ್ಟೋನಿಸ್‌ ತಂಡದ ಮೊತ್ತ 100ರ ಗಡಿ ದಾಟಿಸಿತು. ಆಕ್ರಮಣಕಾರಿ ಬ್ಯಾಟಿಂಗ್‌ ಮಾಡಿದ ಈ ಜೋಡಿ 17ನೇ ಓವರ್‌ನಲ್ಲಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿತು. ಪಂತ್‌(37) 19ನೇ ಓವರ್‌ನಲ್ಲಿ ಮೊಹಮ್ಮದ್ ಸಿರಾಜ್‌ಗೆ ಕ್ಲೀನ್‌ ಬೌಲ್ಡ್ ಆದರು. ಆ ಮೂಲಕ 89 ರನ್‌ಗಳ ಜತೆಯಾಟ ಅಂತ್ಯವಾಯಿತು. ಸ್ಟೋಯ್ನಿಸ್‌ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

“ಇಂದು ಯಾವುದೇ ವಿಷಯದಲ್ಲಿ ಸಂಪೂರ್ಣ ಪ್ರದರ್ಶನ ಮೂಡಿಬಂದಿಲ್ಲ. ಹೊಸ ಚೆಂಡಿನಲ್ಲಿ ನಾವು ಇನ್ನಷ್ಟು ಆಕ್ರಮಣಕಾರಿಯಾಗಿ ಬೌಲಿಂಗ್‌ ಮಾಡಬೇಕಾಗಿತ್ತು. ಪೃಥ್ವಿ ಶಾ ಹಾಗೂ ಶಿಖರ್ ಧವನ್‌ ಅತ್ಯುತ್ತಮವಾಗಿ ಬ್ಯಾಟಿಂಗ್‌ ಮಾಡಿದರು. ಕ್ಯಾಚಿಂಗ್‌ ಸ್ಥಳದಲ್ಲಿ ಫೀಲ್ಡರ್‌ ನಿಲ್ಲಿಸಿಕೊಂಡು, ಸ್ಪಿನ್ನರ್‌ ಮೂಲಕ ಪೃಥ್ವಿ ಶಾ ಔಟ್‌ ಮಾಡುವ ಯೋಜನೆ ಇತ್ತು. ಆದರೆ, ಅವರು ಇದೆಲ್ಲವನ್ನು ಮೀರಿ ಆಡಿದರು. ಮೊದಲ 6 ಓವರ್‌ಗಳ ಬಳಿಕ ಪಂದ್ಯ ನಮ್ಮ ಕೈಯಲ್ಲಿತ್ತು. ಆದರೆ, ಸ್ಟೋಯ್ನಿಸ್‌ ಉತ್ತಮ ಬ್ಯಾಟಿಂಗ್‌ ಮಾಡಿದರು. ಅವರಿಗೂ ಜೀವದಾನ ನೀಡಲಾಯಿತು. ಇದು ತಂಡಕ್ಕೆ ದುಬಾರಿಯಾಯಿತು,” ಎಂದು ಕೊಹ್ಲಿ ಬೇಸರ ವ್ಯಕ್ತಪಡಿಸಿದರು.

197 ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿ ಉತ್ತಮ ಆರಂಭ ಕಾಣಲಿಲ್ಲ. ದೇವದತ್‌ ಪಡಿಕ್ಕಲ್‌ ಹಾಗೂಆರೋನ್‌ ಫಿಂಚ್‌ ವಿಫಲರಾದರು. ನಾಯಕ ವಿರಾಟ್‌ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಮೂರನೇ ವಿಕೆಟ್‌ಗೆ 16 ರನ್‌ಗಳ ಜತೆಯಾಟವಾಡಿದರು. ಆದರೆ, ಎಬಿಡಿ(9) ಹೆಚ್ಚು ಹೊತ್ತು ಕ್ರಿಸ್‌ನಲ್ಲಿ ಉಳಿಯಲು ಆನ್ರಿಚ್‌ ನಾಟ್ಜ್‌ ಬಿಡಲಿಲ್ಲ.

ಪ್ರಸ್ತುತ ಆವೃತ್ತಿಯ ಮೊದಲ ಪಂದ್ಯವಾಡಿದ ಮೊಯಿನ್‌ ಅಲಿ ಹಾಗೂ ವಿರಾಟ್‌ ಕೊಹ್ಲಿ 32 ರನ್‌ಗಳ ಜತೆಯಾಟವಾಡಿದರು. ಈ ಜತೆಯಾಟವನ್ನು ಅಕ್ಷರ್‌ ಪಟೇಲ್ ಮುರಿದರು. ಮೊಯಿನ್‌ ಅಲಿ 11 ರನ್‌ಗಳಿಗೆ ಸೀಮಿತರಾದರು. ಸ್ವಲ್ಪ ಹೊತ್ತು ಕ್ರೀಸ್‌ನಲ್ಲಿ ಕಚ್ಚಿಕೊಂಡು ಆಡಿದ ವಿರಾಟ್‌ ಕೊಹ್ಲಿ(43) ಕಗಿಸೋ ರಬಾಡಗೆ ವಿಕೆಟ್‌ ಕೀಪರ್‌ಗೆ ಕ್ಯಾಚ್‌ ನೀಡಿದರು.

ಶಿವಂ ದುಬೆ(11) ಹಾಗೂ ವಾಷಿಂಗ್ಟನ್‌ ಸುಂದರ್‌(17) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಇಸುರು ಉದಾನ (1) ಕೂಡ ವಿಕೆಟ್‌ ಒಪ್ಪಿಸಿದರು. ಅಂತಿಮವಾಗಿ ಆರ್‌ಸಿಬಿ 9 ವಿಕೆಟ್‌ಗಳನ್ನು ಕಳೆದುಕೊಂಡು 137 ರನ್‌ಗಳಿಗೆ ಸೀಮಿತವಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!