Bengaluru

ಅ.15ರಿಂದ ಶಾಲೆಗಳ ಪುನಾರಂಭಕ್ಕೆ ಕೇಂದ್ರ ಸರ್ಕಾರದಿಂದ ವಿಸ್ತೃತ ಮಾರ್ಗಸೂಚಿ ಪ್ರಕಟ

ಬೆಂಗಳೂರು, ಅ 5-ರಾಜ್ಯದಲ್ಲಿ ಅ.15ರ ನಂತರ ಶಾಲೆಗಳು ಅಥವಾ ಶಿಕ್ಷಣ ಸಂಸ್ಥೆಗಳ ಪುನಾರಂಭಕ್ಕಾಗಿ ಕೇಂದ್ರ ಸರ್ಕಾರ ಪ್ರತ್ಯೇಕ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ.
ಪ್ರತಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸ್ಥಿತಿಗತಿಯ ಆಧಾರದ ಮೇಲೆ ಶಾಲೆಗಳ ಪುನಾರಂಭದ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚನೆ ನೀಡಿದೆ.
ಶಾಲೆಗಳನ್ನು ಕಡ್ಡಾಯವಾಗಿ ಸ್ವಚ್ಛಗೊಳಿಸುವ ಜೊತೆಗೆ ಶಾಲೆಯ ಪ್ರತಿ ಬಳಕೆಯ ವಸ್ತುಗಳಿಗೆ ಸೋಂಕು ನಿವಾರಕವನ್ನು ಸಿಂಪಡಿಸಬೇಕು. ಶಾಲೆಗಳಲ್ಲಿ ಕಡ್ಡಾಯವಾಗಿ ತುರ್ತು ಆರೋಗ್ಯ ಸೇವೆ, ಪ್ರತಿಕ್ರಿಯೆ ತಂಡ, ಸ್ವಚ್ಛತಾ ತಪಾಸಣಾ ತಂಡಗಳನ್ನು ನಿಯೋಜಿಸಬೇಕು. ಶಾಲೆಗಳು ಆಯಾ ಸರ್ಕಾರಿ ಆದೇಶಗಳ ಅನುಸಾರ ಪ್ರತ್ಯೇಕ ಮಾರ್ಗಸೂಚಿಗಳನ್ನು ತಯಾರಿಸಬಹುದು ಎಂದು ಮಾರ್ಗಸೂಚಿ ಸೂಚಿಸಿದೆ.
ಶಾಲೆಯಲ್ಲಿ ಮಕ್ಕಳು, ಪೋಷಕರು, ಶಿಕ್ಷಕರು, ಸಮುದಾಯದ ಸದಸ್ಯರು ಮತ್ತು ಹಾಸ್ಟಲ್‌ ಸಿಬ್ಬಂದಿಗೆ ಕೋವಿಡ್‌ ಸಂಬಂಧ ಸವಾಲುಗಳು ಮತ್ತು ಅದರಿಂದ ನಿವಾರಣೆ ಹೊಂದುವಲ್ಲಿ ಅವರ ಪಾತ್ರದ ಕುರಿತು ಜಾಗೃತಿ ಮೂಡಿಸಬೇಕು. ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರ ಆರೋಗ್ಯ ಸ್ಥಿತಿಯ ಕುರಿತು ಮಾಹಿತಿ ಸಂಗ್ರಹಿಸಬೇಕು. ಮನೆಯಿಲ್ಲದ, ವಲಸಿಗ ಮತ್ತು ವಿಕಲಚೇತನ ಮಕ್ಕಳಿಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಮಾರ್ಗಸೂಚಿ ತಿಳಿಸಿದೆ.
ಶಾಲೆಗಳು ಪುನಾರಂಭಗೊಂಡ ನಂತರ ಮಕ್ಕಳಿಗೆ ಶಾಲಾ ವಾತಾವರಣಕ್ಕೆ ಹೊಂದಿಕೊಳ್ಳುವಂತಹ ಅವಕಾಶ ಕಲ್ಪಿಸಬೇಕು. ಪಠ್ಯಕ್ರಮದ ಕುರಿತು ಮಕ್ಕಳಿಗೆ ಮಾಹಿತಿ ನೀಡಬೇಕು. ಮಕ್ಕಳೀಗೆ ನೆರವಾಗುವಂತಹ ‘ಮನೋಧರ್ಮ’ ಯೋಜನೆಯಡಿ ಮಕ್ಕಳಿಗೆ ಹಲವು ಚಟುವಟಿಕೆಗಳನ್ನು ಆಯೋಜಿಸಬೇಕು.
ಸಾಮಾಜಿಕ ಅಂತರ ಕಾಪಾಡಿಕೊಂಡು ಮಕ್ಕಳು ಸಕ್ರಿಯವಾಗಿ ಪಠ್ಯಕ್ರಮಗಳು, ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದನ್ನು ಖಾತರಿಪಡಿಸಲು ಅಗತ್ಯ ಯೋಜನೆಗಳನ್ನು ರೂಪಿಸಬೇಕು ಎಂದು ಮಾರ್ಗಸೂಚಿ ಸ್ಪಷ್ಟಪಡಿಸಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!