Entertainment

ಭ್ರಮೆ ಆಡಿಯೋ ಬಿಡುಗಡೆ, ಬೈಕ್ ವಿಜೇತರ ಘೋಷಣೆ

ಬೆಂಗಳೂರು, ಅ 05- ಭ್ರಮೆ ಚಿತ್ರದ ಹಾಡುಗಳ ಸಿಡಿ ಬಿಡುಗಡೆ ಹಾಗೂ ಮೊದಲ ಲಕ್ಕಿಡ್ರಾ ವಿಜೇತರ ಆಯ್ಕೆ ಕಾರ್ಯಕ್ರಮ ನಡೆಯಿತು. ಕುಂದಾಪುರದಲ್ಲಿ ನಡೆದ ನೈಜ ಘಟನೆಯೊಂದನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕ ಚರಣರಾಜ್ ಈ ಚಿತ್ರವನ್ನು ನಿರೂಪಿಸಿದ್ದಾರೆ.

ಹಿರಿಯ ನಿರ್ದೇಶಕ ತಿಪಟೂರು ರಘು ಅವರ ಪುತ್ರ ನವೀನ್ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಚಿತ್ರದಲ್ಲಿ ಅಂಜನಾಗೌಡ ಹಾಗೂ ಇಶಾನಾ ನಾಯಕಿಯರ ಪಾತ್ರದಲ್ಲಿದ್ದಾರೆ.

ಇದೊಂದು ಹಾರರ್ ಕಾಮಿಡಿ ಕಥೆಯ ಮೇಲೆ ನಡೆಯುವ ಸಬ್ಜೆಕ್ಟ್ ಆಗಿದ್ದು, ಚಿತ್ರಕ್ಕೆ ಚರಣರಾಜ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ನಾಯಕ ಆಸ್ಪತ್ರೆಯೊಂದರಲ್ಲಿ ಮೇಲ್ ನರ್ಸ್ ಆಗಿದ್ದು, ಚಿತ್ರದ ಬಹುತೇಕ ಕಥೆ ನಡೆಯುವುದೇ ಆಸ್ಪತ್ರೆಯ ಅಂಗಳದಲ್ಲಿ. ನವೆಂಬರ್ ಒಂದರಂದು ನಮ್ಮ ಫ್ಲಿಕ್ಸ್ ಓಟಿಟಿಯಲ್ಲಿ ಭ್ರಮೆ ಚಿತ್ರ ಬಿಡುಗಡೆಯಾಗಲಿದೆ. ಚಿತ್ರದ ಸಂಗೀತ ನಿರ್ದೇಶಕ ಹಾಗೂ ಸಾಹಿತಿ ಡಾ.ವಿ.ನಾಗೇಂದ್ರಪ್ರಸಾದ್ ಮಾತನಾಡುತ್ತ.

“ನಿರ್ದೇಶಕನಾದವನಿಗೆ ಮಾರ್ಕೆಟಿಂಗ್ ಸ್ಕಿಲ್ ಕೂಡ ಮುಖ್ಯವಾಗಿರುತ್ತೆ ಅನ್ನೋದು ಇವರನ್ನು ನೊಡಿದಾಗ ತಿಳಿಯಿತು. ಎರಡೇ ವಾರದಲ್ಲಿ 10 ಸಾವಿರ ಟಿಕೆಟ್ ಮಾರಾಟ ಮಾಡಿರುವುದು, ಅದೂ ಕೊರೋನಾ ಟೈಂನಲ್ಲಿ ಅಂದರೆ, ಅಲ್ಲಿ ಇವರ ಎಫರ್ಟ್ ಎಷ್ಟಿದೆ ಎಂದು ಗೊತ್ತಾಗುತ್ತೆ. ನಾನು ಮೆಜೆಸ್ಟಿಕ್ ಚಿತ್ರದ ಸಮಯದಲ್ಲೇ ಮ್ಯೂಸಿಕ್ ಮಾಡಬೇಕಿತ್ತು. ಆಗ ನಾನೇ ಮುಂದುವರಿಯಲಿಲ್ಲ. ನಂತರ ಶಿಷ್ಯ ಚಿತ್ರದಿಂದ ಸಂಗೀತಜೋಡಣೆ ಆರಂಭಿಸಿದೆ. ಇದು ನನ್ನ ಏಳನೇ ಚಿತ್ರವಿರಬಹುದು. ಇದರಲ್ಲಿ ಬೇರೇನೇ ಥರದ ಸ್ಪಾರ್ಕ್ ಇದೆ. ಈ ಚಿತ್ರದಿಂದ ನಿರ್ಮಾಪಕರು, ನಿರ್ದೇಶಕರಿಗೆ ಒಳ್ಳೇ ಹೆಸರು, ಹಣ ಎರಡೂ ಬರಲಿ” ಎಂದು ಶುಭ ಹಾರೈಸಿದರು.

ನಿರ್ದೇಶಕ ಚರಣರಾಜ್ ಮಾತನಾಡಿ ನೈಜ ಘಟನೆ ಇಟ್ಟುಕೊಂಡು ಮಾಡಿರುವ ಚಿತ್ರವಿದು, ನನ್ನ ಈ ಪ್ರಯತ್ನವನ್ನು ನಂಬಿ ಬಂಡವಾಳ ಹಾಕಿದ ಎಲ್ಲಾ ನಿರ್ಮಾಪಕರಿಗೂ ಧನ್ಯವಾದ ಅರ್ಪಿಸುತ್ತೇನೆ. 14 ದಿನಗಳಲ್ಲಿ ಹತ್ತು ಸಾವಿರ ಟಿಕೆಟ್ ಮಾರಾಟವಾಗಿದೆ. ಇದರಲ್ಲಿ ವಿಜೇತರೊಬ್ಬರಿಗೆ ಬೈಕ್ ಇದೆ. ಮುಂದಿನ ಡ್ರಾದಲ್ಲಿ ಬುಲೆಟ್, ಕಾರ್ ಕೂಡ ಇರುತ್ತದೆ. ಚಿಕ್ಕಮಗಳೂರಿನ ರಾಣಿಝರಿ ಎಂಬಲ್ಲಿ ಈವರೆಗೂ ಯಾರೂ ಶೂಟ್ ಮಾಡಿರದಂಥ ಲೊಕೇಶನ್‍ನಲ್ಲಿ ಹಾಡನ್ನು ಚಿತ್ರೀಕರಿಸಿರುವುದು ಈ ಚಿತ್ರದ ಮತ್ತೊಂದು ವಿಶೇಷ ಎಂದು ಹೇಳಿದರು.

ನಾಯಕನಟ ನವೀನ್, ನಾಯಕಿ ಇಶಾನಾ ಮತ್ತು ಅಂಜನಾಗೌಡ ಕೂಡ ತಮ್ಮ ಪಾತ್ರಗಳ ಕುರಿತು ಹೇಳಿಕೊಂಡರು. ಮಜಾಟಾಕೀಸ್ ಪವನ್ ಈ ಚಿತ್ರದಲ್ಲಿ ಹಾಸ್ಪಿಟಲ್ ಅಟೆಂಡರ್ ಆಗಿ ಕಾಣಿಸಿಕೊಂಡಿದ್ದಾರೆ. ಮುಖ್ಯ ಅತಿಥಿಗಳಾಗಿದ್ದ ಬಾಮ ಹರೀಶ್, ಭಾಮ ಗಿರೀಶ್, ನೆಟ್‍ಫ್ಲಿಕ್ಸನ ವಿಜಯಕುಮಾರ್ ಕೂಡ ಚಿತ್ರದ ಬಗ್ಗೆ ಹಾಗೂ ತಂಡದ ಕುರಿತಂತೆ ಮಾತನಾಡಿದರು. ಮೊದಲ ಡ್ರಾ ವಿಜೇತರನ್ನು ಸಂಗೀತ ನಿರ್ದೇಶಕ ವಿ. ನಾಗೇಂದ್ರಪ್ರಸಾದ್ ಆಯ್ಕೆಮಾಡಿದರು. 23682 ಟಿಕೆಟ್ ನಂಬರಿನ ರಾಜರಾಜೇಶ್ವರಿ ನಗರದವರೊಬ್ಬರು ಬೈಕ್‍ನ ವಿಜೇತರಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!