Sports

ಯುವರಾಜ್‌ ಸಿಂಗ್‌ ನೀಡಿದ ಚಾಲೆಂಜ್‌ಗೆ ಪ್ರತಿಕ್ರಿಯೆ ನೀಡಿದ ದೇವದತ್‌ ಪಡಿಕ್ಕಲ್‌

ನವದೆಹಲಿ, ಅ 5- ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಬ್ಯಾಟ್ಸ್‌ಮನ್ ದೇವದತ್‌ ಪಡಿಕ್ಕಲ್‌ ಪ್ರಸ್ತುತ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಆಡಿದ ನಾಲ್ಕು ಪಂದ್ಯಗಳಿಂದ ಮೂರು ಅರ್ಧಶತಕಗಳನ್ನು ಸಿಡಿಸಿದ್ದಾರೆ. ಆ ಮೂಲಕ ತಮ್ಮ ಮೇಲಿದ್ದ ನಿರೀಕ್ಷೆಯನ್ನು ಉಳಿಸಿಕೊಂಡಿದ್ದಾರೆ. ಅಲ್ಲದೆ, ನಾಯಕ ವಿರಾಟ್‌ ಕೊಹ್ಲಿ ಗಮನ ಸೆಳೆದಿದ್ದಾರೆ.

ಶನಿವಾರ ರಾಜಸ್ಥಾನ್‌ ರಾಯಲ್ಸ್ ವಿರುದ್ಧ ಪಂದ್ಯದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಗೆಲುವಿನಲ್ಲಿ ದೇವದತ್‌ ಪಡಿಕ್ಕಲ್‌ ಪ್ರಧಾನ ಪಾತ್ರ ವಹಿಸಿದ್ದರು. 158 ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿ ಪರ 45 ಎಸೆತಗಳಲ್ಲಿ 63 ರನ್‌ಗಳನ್ನು ಸಿಡಿಸಿದ್ದರು. ಜೋಫ್ರ ಆರ್ಚರ್‌ಗೆ ಕ್ಲೀನ್‌ ಬೌಲ್ಡ್ ಆಗುವುದಕ್ಕೂ ಮುನ್ನ ಕರ್ನಾಟಕ ಬ್ಯಾಟ್ಸ್‌ಮನ್‌ ಫ್ಲಿಕ್ ಮೂಲಕ ಸಿಕ್ಸರ್‌ ಸಿಡಿಸಿದ್ದರು. ತದ ನಂತರ ಅಭಿಮಾನಿಗಳು ಪಡಿಕ್ಕಲ್‌ ಅವರನ್ನು ಯುವರಾಜ್‌ ಸಿಂಗ್‌ ಬ್ಯಾಟಿಂಗ್‌ ಶೈಲಿಗೆ ಹೋಲಿಸಿದರು.

ರಾಜಸ್ಥಾನ್‌ ರಾಯಲ್ಸ್ ವಿರುದ್ಧ ಆರ್‌ಸಿಬಿ ಎಂಟು ವಿಕೆಟ್‌ಗಳ ಗೆಲುವು ದಾಖಲಿಸಿದ ಬಳಿಕ ಭಾರತ ತಂಡದ ಮಾಜಿ ಆಲ್‌ರೌಂಡರ್ ಯುವರಾಜ್‌ ಸಿಂಗ್‌ ತಮ್ಮ ಅಧಿಕೃತ ಟ್ವುಟರ್‌ ಖಾತೆಯಲ್ಲಿ ದೇವದತ್‌ ಪಡಿಕ್ಕಲ್‌ ಅವರ ಪ್ರದರ್ಶನವನ್ನು ಕೊಂಡಾಡಿದರು. 20ರ ಪ್ರಾಯದ ಎಡಗೈ ಬ್ಯಾಟ್ಸ್‌ಮನ್‌ ಜತೆ ಬ್ಯಾಟಿಂಗ್‌ ಮಾಡಬೇಕೆಂಬ ಇಂಗಿತ ವ್ಯಕ್ತಪಡಿಸಿದ ಯುವರಾಜ್‌ ಸಿಂಗ್‌, ನಮ್ಮಿಬ್ಬರಲ್ಲಿ ಯಾರು ದೊಡ್ಡ ಸಿಕ್ಸರ್‌ ಸಿಡಿಸುತ್ತಾರೆ ನೋಡೋಣ ಎಂದು ಯುವಿ ಟ್ವೀಟ್‌ ಮಾಡಿದ್ದಾರೆ.

“ಫಾರ್ಮ್‌ ತಾತ್ಕಾಲಿಕ ಕ್ಲಾಸ್‌ ಎಂದಿಗೂ ಜತೆಯಲ್ಲಿಯೇ ಇರುತ್ತದೆ. ಏನೇ ಆಗಲಿ, ಕಳೆದ ಎಂಟು ವರ್ಷಗಳಿಂದ ಈ ಹುಡುಗು ಫಾರ್ಮ್‌ ಕಳೆದುಕೊಂಡಿರುವುದನ್ನು ನಾನು ನೋಡಿಯೇ ಇಲ್ಲ. ಇದು ನಂಬಲು ಸಾಧ್ಯವಾಗದ ವಿಷಯವಾಗಿದೆ. ಪಡ್ಡಿಕಲ್ ಒಟ್ಟಿಗೆ ಬ್ಯಾಟ್ ಮಾಡುವ ಅವಶ್ಯಕತೆಯಿದೆ ಮತ್ತು ಯಾರು ಹೆಚ್ಚು ಹೊಡೆಯುತ್ತಾರೆ ಎಂಬುದನ್ನು ನೋಡಬೇಕು,” ಎಂದು ಯುವರಾಜ್ ಬರೆದಿದ್ದಾರೆ.

ಯುವರಾಜ್‌ ಚಾಲೆಂಜ್‌ಗೆ ತ್ವರಿತವಾಗಿ ಪ್ರತಿಕ್ರಿಯೆ ನೀಡಿದ ದೇವದತ್‌ ಪಡಿಕ್ಕಲ್‌. ನಾನು ನಿಮ್ಮಿಂದಲೇ ಫ್ಲಿಕ್‌ ಶಾಟ್‌ ಕಲಿತಿದ್ದೇನೆ. ” ನಿಮ್ಮೊಂದಿಗೆ ಸ್ಪರ್ಧೆ ಮಾಡುತ್ತಿಲ್ಲ ಪಾಜಿ. ಫ್ಲಿಕ್‌ ಶಾಟ್ ನಿಮ್ಮಿಂದಲೇ ಕಲಿತಿದ್ದೇನೆ. ನಿಮ್ಮ ಜತೆ ಬ್ಯಾಟಿಂಗ್‌ ಮಾಡಲು ಬಯಸುತ್ತೇನೆ. ಹೋಗೋಣ,” ಎಂದು ಪಡಿಕ್ಕಲ್‌ ಈ ರೀತಿ ಬರೆದರು.

ಶನಿವಾರ ರಾಜಸ್ಥಾನ್‌ ರಾಯಲ್ಸ್ ತಂಡವನ್ನು ಆರ್‌ಸಿಬಿ ಎಂಟು ವಿಕೆಟ್‌ಗಳಿಂದ ಮಣಿಸಿತು. ಸೋಮವಾರ ವಿರಾಟ್‌ ಕೊಹ್ಲಿ ಪಡೆ ಬಲಿಷ್ಟ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಲಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!